ADVERTISEMENT

ವಿಟಿಯು: 52,615 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಸದ್ಗುರು ಮಧುಸೂದನ್‌ ಸಾಯಿ, ಹರಿ ಕೆ.ಮರಾರ್‌ ಅವರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 15:20 IST
Last Updated 18 ಜುಲೈ 2024, 15:20 IST
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ ಸದ್ಗುರು ಮಧುಸೂದನ್‌ ಸಾಯಿ ಹಾಗೂ ಹರಿ ಕೆ.ಮರಾರ್‌ ಅವರಿಗೆ ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್‌ ಅವರು ‘ಡಾಕ್ಟರ್‌ ಆಫ್‌ ಸೈನ್ಸ್‌’ ಪ್ರದಾನ ಮಾಡಿ ನಮಸ್ಕರಿಸಿದರು. ಪ್ರೊ.ಎಸ್‌.ವಿದ್ಯಾಶಂಕರ, ಪ್ರೊ.ಗೋವಿಂದನ್‌ ರಂಗರಾಜನ್‌ ನಗೆ ಬೀರಿದರು – ‍ಪ್ರಜಾವಾಣಿ ಚಿತ್ರ
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ ಸದ್ಗುರು ಮಧುಸೂದನ್‌ ಸಾಯಿ ಹಾಗೂ ಹರಿ ಕೆ.ಮರಾರ್‌ ಅವರಿಗೆ ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್‌ ಅವರು ‘ಡಾಕ್ಟರ್‌ ಆಫ್‌ ಸೈನ್ಸ್‌’ ಪ್ರದಾನ ಮಾಡಿ ನಮಸ್ಕರಿಸಿದರು. ಪ್ರೊ.ಎಸ್‌.ವಿದ್ಯಾಶಂಕರ, ಪ್ರೊ.ಗೋವಿಂದನ್‌ ರಂಗರಾಜನ್‌ ನಗೆ ಬೀರಿದರು – ‍ಪ್ರಜಾವಾಣಿ ಚಿತ್ರ   

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಗುರುವಾರ ನಡೆದ 24ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮೂವರು ಗಣ್ಯರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’ ಹಾಗೂ 52,615 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್‌ ಅವರು ಚಿಕ್ಕಬಳ್ಳಾಪುರದ ಮಧುಸೂದನ್‌ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸದ್ಗುರು ಮಧುಸೂದನ್‌ ಸಾಯಿ, ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹರಿ ಕೆ.ಮರಾರ್‌ ಅವರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’ ಪ್ರದಾನ ಮಾಡಿದರು.

ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಎಂ.ಎಸ್‌.ಶೇಷಗಿರಿ ಎಂಜಿನಿಯರಿಂಗ್‌ ಕಾಲೇಜಿನ ಸಿವಿಲ್‌ ವಿಭಾಗದ ಸಾಹಿಲ್‌ ಸೋಮನಾಚೆ 12 ಚಿನ್ನದ ಪದಕ ಪಡೆದರು. ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಜಿ.ವಿಷ್ಣುಪ್ರಿಯಾ 10, ಎಸ್‌ಜೆಬಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್ಸ್‌ ವಿಭಾಗದ ಜಿ.ರೇಷ್ಮಾ, ಇದೇ ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದ ಎಲ್‌.ಮೋಹನಕುಮಾರ್‌, ಬಳ್ಳಾರಿಯ ಬಳ್ಳಾರಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಂಡ್‌ ಮ್ಯಾನೇಜ್‌ಮೆಂಟ್‌ನ ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌ ವಿಭಾಗದ ಜಿ.ಹೃತಿಕಾ ಅವರು ತಲಾ 7 ಚಿನ್ನದ ಪದಕ ಪಡೆದರು.

ADVERTISEMENT

ಬೆಂಗಳೂರಿನ ಏಟ್ರಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಕೃತಿಕಾ ಸೆಂಥಿಲ್‌, ಆರ್‌ಎನ್‌ಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಪಿ.ಅನುಶ್ರೀ ತಲಾ 4 ಸೇರಿದಂತೆ ಒಟ್ಟು 27 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ನಿರ್ದೇಶಕ ಪ್ರೊ.ಗೋವಿಂದನ್‌ ರಂಗರಾಜನ್‌ ಘಟಿಕೋತ್ಸವ ಭಾಷಣ ಮಾಡಿದರು. ಪ್ರೊ.ಎಸ್‌.ವಿದ್ಯಾಶಂಕರ್‌ ಪದವೀಧರರನ್ನು ರಾಜ್ಯಪಾಲರ ಮುಂದೆ ಪರಿಚಯಿಸಿದರು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ 24ನೇ ವಾರ್ಷಿಕ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಗುಂಪುಚಿತ್ರಕ್ಕೆ ಕ್ಲಿಕ್ಕಿಸಿಕೊಂಡಿದ್ದು ಹೀಗೆ – ಪ್ರಜಾವಾಣಿ ಚಿತ್ರ 

ಬಡತನದಲ್ಲಿ ಸಾಧನೆ ತೋರಿದ ಮೇಘನಾ

ಬೆಳಗಾವಿಯ ಅಂಗಡಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಂಡ್‌ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿನಿ ಮೇಘನಾ ಅನಿಲ ಪವಾರ ವಿಟಿಯು ಚಿನ್ನದ ಪದಕ ಪಡೆದರು. ತಂದೆ ಅನಿಲ ಪವಾರ ಆಟೊ ಚಾಲಕ ತಾಯಿ ಸ್ಮಿತಾ ಗೃಹಿಣಿ. ಬಡತನ ಮಧ್ಯೆಯೂ ಮೇಘನಾ ಸಾಧನೆ ಮಾಡಿದರು. ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌–ಡೇಟಾಸೈನ್ಸ್‌ನಲ್ಲಿ ಮೇಘನಾ ವಿಟಿಯುಗೆ ಪ್ರಥಮ ರ್‍ಯಾಂಕ್‌ ಪಡೆದರು. ‘ಮುಂದೆಯೂ ಓದಬೇಕು ಎಂಬ ಹಂಬಲವಿದೆ. ಆದರೆ ಎಂಜಿನಿಯರಿಂಗ್‌ ಪದವಿಗಾಗಿ ₹12 ಲಕ್ಷ ಶೈಕ್ಷಣಿಕ ಸಾಲ ಪಡೆದಿರುವೆ. ಇನ್ನು ಆರೇ ತಿಂಗಳಲ್ಲಿ ಉದ್ಯೋಗ ಪಡೆದು ಸಾಲದ ಕಂತು ಕಟ್ಟಬೇಕು ತಂಗಿ ಶ್ರದ್ಧಾ ಕೂಡ ವಿಟಿಯುನಲ್ಲಿ ಎಂಜಿನಿಯರಿಂಗ್‌ ತಮ್ಮ ವಿಶ್ವನಾಥ ಪಿಯು ಓದುತ್ತಿದ್ದಾರೆ. ಅವರೂ ಶೈಕ್ಷಣಿಕ ಸಾಲ ಪಡೆದಿದ್ದಾರೆ’ ಎಂದು ಮೇಘನಾ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸರ್ಕಾರಿ ಕೋಟಾದಲ್ಲಿ ಎಂಜಿನಿಯರಿಂಗ್‌ ಸೀಟು ಸಿಕ್ಕಿದ್ದು ಅನುಕೂಲ ಆಯಿತು. ಈಗ ಕೆಲಸ ಪಡೆದು ಶೈಕ್ಷಣಿಕ ಸಾಲ ತೀರಿಸುವುದು ಮುಖ್ಯ’ ಎಂದರು ಮೇಘನಾ.

ನೇಕಾರನ ಮಗ ‘ಚಿನ್ನ’ದ ಹುಡುಗ

ಬೆಂಗಳೂರಿನ ಎಸ್.ಜೆ.ಬಿ. ಇನ್ಸಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಎಲ್.ಮೋಹನಕುಮಾರ 7 ಚಿನ್ನದ ಪದಕ ಸ್ವೀಕರಿಸಿದರು. ಮೋಹನಕುಮಾರ ತಂದೆ ಲೋಕೇಶ ವೃತ್ತಿಯಲ್ಲಿ ಕೂಲಿ ನೇಕಾರ. ಇಬ್ಬರು ಪುತ್ರಿಯರು ಮತ್ತು‌ ಪುತ್ರನ್ನು ಕೂಲಿ ಮಾಡಿ ಓದಿಸುತ್ತಿದ್ದಾರೆ. ಪುತ್ರ ಏಳು ಚಿನ್ನದ ಪದಕ ಬಾಚಿಕೊಂಡಿದ್ದನ್ನು ಲೋಕೇಶ ಬೆರಗುಗಣ್ಣಿನಿಂದ ನೋಡಿದರು. ‘ಕೂಲಿ ಸಂಬಳದಲ್ಲಿ ಮಕ್ಕಳನ್ನು ಬೆಳೆಸಿದ್ದೇನೆ. ಮಗನ ಸಾಧನೆ ನನ್ನ ಕಷ್ಟ ಮರೆಸಿದೆ. ನನ್ನ ಜೀವನ ಬಡತನದಲ್ಲೇ ಮುಗಿಯಿತು. ಮಕ್ಕಳು ಹೆಮ್ಮೆ ತಂದುಕೊಟ್ಟಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.