ADVERTISEMENT

ಬೆಳಗಾವಿ | ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ: ಫೆ.2ರಂದು ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 11:17 IST
Last Updated 29 ಜನವರಿ 2026, 11:17 IST
   

ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದಲ್ಲಿ 25ನೇ ಘಟಿಕೋತ್ಸವ (ಭಾಗ–2) ಫೆ.2ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಸ್‌. ವಿದ್ಯಾಶಂಕರ ಹೇಳಿದರು.

‘ಈ ಕಾರ್ಯಕ್ರಮದಲ್ಲಿ ಕರ್ನಾಟಕ ನೌಕಾನೆಲೆಯ ಫ್ಲ್ಯಾಗ್‌ ಆಫೀಸರ್‌ ಕಮಾಂಡಿಂಗ್‌ ರಿಯಲ್ ಅಡ್ಮಿರಲ್ ವಿಕ್ರಂ ಮೆನನ್ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ಥಾವರಚಂದ ಗೆಹ್ಲೋತ್‌ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಉಪಸ್ಥಿತರಿರುವರು’ ಎಂದು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘25ನೇ ಘಟಿಕೋತ್ಸವ(ಭಾಗ–1) 2025ರ ಜುಲೈನಲ್ಲಿ ನಡೆದಿತ್ತು. ಆಗ ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಗಿತ್ತು. ಈಗ ಸ್ನಾತಕೋತ್ತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲವಾಗಲೆಂದು, ಪದವಿ ಮುಗಿದ ತಕ್ಷಣವೇ ಅವರಿಗೆ ಪ್ರಮಾಣಪತ್ರ ನೀಡುವ ಕೆಲಸ ಮಾಡುತ್ತಿದ್ದೇವೆ’ ಎಂದರು.

ADVERTISEMENT

ಎಷ್ಟು ಮಂದಿಗೆ ಪದವಿ?:

‘ಈ ಸಲದ ಘಟಿಕೊತ್ಸವದಲ್ಲಿ 4,928 ಎಂಬಿಎ, 2,960 ಎಂಸಿಎ, 718 ಎಂ.ಟೆಕ್, 59 ಎಂ.ಆರ್ಕ್, 21 ಎಂ.ಪ್ಲ್ಯಾನ್‌, 16 ಎಂ.ಎಸ್ಸಿ ಸೇರಿ 8,702 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ 25 ವಿದ್ಯಾರ್ಥಿಗಳು ಚಿನ್ನದ ಪದಕ, 96 ವಿದ್ಯಾರ್ಥಿಗಳಿಗೆ ವಿವಿಧ ರ್‍ಯಾಂಕ್‌ ನೀಡಲಾಗುತ್ತಿದೆ. ಒಟ್ಟಾರೆ ಉತ್ತೀರ್ಣ ಪ್ರಮಾಣ ಶೇ 91.21ರಷ್ಟಿದೆ. ಬಾಲಕರಿಗಿಂತ(ಶೇ 87.98) ಬಾಲಕಿಯರೇ(ಶೇ 94.40) ಮೇಲುಗೈ ಸಾಧಿಸಿದ್ದಾರೆ’ ಎಂದು ವಿವರಿಸಿದರು.

ಪಾರ್ವತಿಗೆ ನಾಲ್ಕು ಚಿನ್ನ

‘ಶಿವಮೊಗ್ಗದ ಜವಾಹರಲಾಲ ನೆಹರೂ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಜೆ.ಪಾರ್ವತಿ ಸಾಲೇರಾ ನಾಲ್ಕು ಚಿನ್ನದ ಪದಕ ಗಳಿಸಿದ್ದಾರೆ. ಬೆಂಗಳೂರಿನ ಆರ್.ಎನ್.ಎಸ್. ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಎಚ್.ಸಿ.ಕಾವ್ಯ, ದಾವಣಗೆರೆಯ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಬಿ.ಎಸ್.ಸಂಚಿತಾ ತಲಾ ಮೂರು ಚಿನ್ನ, ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ವಿ.ಯೋಗೇಶಗೌಡ, ಬೆಂಗಳೂರಿನ ಆಕ್ಸ್‌ಫರ್ಡ್‌ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಸಿ.ರೇವಂತಕುಮಾರ್, ಬಳ್ಳಾರಿಯ ರಾವಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಬಿ.ರಾಹುಲ್ ಡೇವಿಡ್ ತಲಾ ಎರಡು ಚಿನ್ನದ ಪದಕ ಪಡೆದಿದ್ದಾರೆ’ ಎಂದು ತಿಳಿಸಿದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಯು.ಜೆ.ಉಜ್ವಲ್, ಕುಲಸಚಿವ ಪ್ರೊ.ಪ್ರಸಾದ ಬಿ. ರಾಂಪೂರೆ ಇದ್ದರು.

ಇ-ವಿದ್ಯಾರ್ಥಿ ಮಿತ್ರ ಪೋರ್ಟಲ್‌ಗೆ ಚಾಲನೆ

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಇದೇ ಮೊದಲ ಬಾರಿ ವಿಟಿಯು ಪರಿಚಯಿಸಿದ ‘ಇ-ವಿದ್ಯಾರ್ಥಿ ಮಿತ್ರ’ ಪೋರ್ಟಲ್‌ಗೆ ಕುಲಪತಿ ಎಸ್‌.ವಿದ್ಯಾಶಂಕರ್‌ ಚಾಲನೆ ನೀಡಿದರು.

ನಂತರ ಮಾತನಾಡಿ, ‘ಅಂಕಪಟ್ಟಿ ನೀಡುವಲ್ಲಿ ವಿಳಂಬ, ಪರೀಕ್ಷೆ ಗೊಂದಲ, ಆಡಳಿತ ವಿಭಾಗದಲ್ಲಿನ ಕುಂದುಕೊರತೆ ಸೇರಿ ಯಾವುದೇ ಸಮಸ್ಯೆಗಳಿದ್ದರೆ, ಇ-ಮೇಲ್‌ ಕಳುಹಿಸಿ ತ್ವರಿತವಾಗಿ ಪರಿಹಾರ ಪಡೆದುಕೊಳ್ಳಬಹುದು. ವಿದ್ಯಾರ್ಥಿಗೆ ನೀಡಲಾಗಿರುವ ಯುಎಸ್‌ಎನ್‌ ಸಂಖ್ಯೆ ಬಳಸಿಕೊಂಡು ಲಾಗಿನ್‌ ಆಗಿ, ದೂರು ಸಲ್ಲಿಸಬಹುದು’ ಎಂದರು.

‘ನೀವು ನೀಡುವ ದೂರು ಗೌಪ್ಯವಾಗಿ ಇರಲಿವೆ. ಯಾವುದೇ ದೂರು ಇದ್ದರೂ ಸ್ವತಃ ನಾನೇ ಪರಿಶೀಲಿಸಿ, ಪರಿಹಾರ ಕಲ್ಪಿಸುತ್ತೇನೆ. ಇದು ವಿದ್ಯಾರ್ಥಿಸ್ನೇಹಿ ಉಪಕ್ರಮ’ ಎಂದು ತಿಳಿಸಿದರು.

ಅಂತರರಾಷ್ಟ್ರೀಯ ಕ್ಯಾಲೆಂಡರ್‌ ಜತೆ ಹೊಂದಾಣಿಕೆ

‘ವಿದೇಶಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಆಗದಿರಲೆಂದು ಅಂತರರಾಷ್ಟ್ರೀಯ ಶೈಕ್ಷಣಿಕ ಕ್ಯಾಲೆಂಡರ್‌ನೊಂದಿಗೆ ವಿಟಿಯು ಶೈಕ್ಷಣಿಕ ಕ್ಯಾಲೆಂಡರ್‌ ಹೊಂದಾಣಿಕೆ ಮಾಡಿದ್ದೇವೆ’ ಎಂದು ಕುಲಪತಿ ವಿದ್ಯಾಶಂಕರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.