ADVERTISEMENT

ಬೋಧನೆ, ಶೋಧನೆಗೆ ಗ್ರಂಥಾಲಯ ಅಗತ್ಯ: ಪ್ರೊ.ಎಸ್.ವಿದ್ಯಾಶಂಕರ

ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 8:24 IST
Last Updated 23 ಜನವರಿ 2026, 8:24 IST
ಬೆಳಗಾವಿ ವಿಟಿಯುನಿಂದ ‘ಎಂಜಿನಿಯರಿಂಗ್ ಗ್ರಂಥಪಾಲಕತ್ವ’ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಪ್ರೊ.ಮುತ್ತಯ್ಯ ಕೊಗನೂರಮಠ ಗುರುವಾರ ಉದ್ಘಾಟಿಸಿದರು. ಪ್ರೊ.ಎಸ್.ವಿದ್ಯಾಶಂಕರ, ಪ್ರೊ.ಪ್ರಶಾಂತ ನಾಯಕ್, ನಾಗರಾಜಪ್ಪ ಇತರರು ಪಾಲ್ಗೊಂಡರು
ಬೆಳಗಾವಿ ವಿಟಿಯುನಿಂದ ‘ಎಂಜಿನಿಯರಿಂಗ್ ಗ್ರಂಥಪಾಲಕತ್ವ’ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಪ್ರೊ.ಮುತ್ತಯ್ಯ ಕೊಗನೂರಮಠ ಗುರುವಾರ ಉದ್ಘಾಟಿಸಿದರು. ಪ್ರೊ.ಎಸ್.ವಿದ್ಯಾಶಂಕರ, ಪ್ರೊ.ಪ್ರಶಾಂತ ನಾಯಕ್, ನಾಗರಾಜಪ್ಪ ಇತರರು ಪಾಲ್ಗೊಂಡರು   

ಬೆಳಗಾವಿ: ‘ಗುಣಮಟ್ಟದ ಬೋಧನೆ, ಸಂಶೋಧನೆ ಹಾಗೂ ನವೋದ್ಯಮಕ್ಕೆ ಆಧುನಿಕ ಗ್ರಂಥಾಲಯಗಳು ಪ್ರಮುಖ ಕೇಂದ್ರಗಳಾಗಿವೆ’ ಎಂದು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಬೆಳಗಾವಿಯ ಜ್ಞಾನ ಸಂಗಮದಲ್ಲಿರುವ ವಿಟಿಯು ಆಡಿಟೋರಿಯಂನಲ್ಲಿ ‘ಎಂಜಿನಿಯರಿಂಗ್ ಗ್ರಂಥಪಾಲಕತ್ವ’ ಎಂಬ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇವತ್ತಿನ ಬದಲಾದ ಸನ್ನಿವೇಶದಲ್ಲಿ ಗ್ರಂಥಪಾಲಕರು ಕೇವಲ ಗ್ರಂಥಾಲಯಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಬಂದು ಓದುವಂತೆ ಯೋಜನೆಗಳನ್ನು ರೂಪಿಸಿ ಹೊಸ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಓದುವ ಪ್ರವೃತ್ತಿಯನ್ನು ಬೆಳೆಸಬೇಕು. ಸಾಧ್ಯವಾದರೆ ಗ್ರಂಥಾಲಯವನ್ನು ಪೂರ್ಣ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಮಾಡಬೇಕು’ ಎಂದು ಹೇಳಿದರು.  

ADVERTISEMENT

‘ನಿರಂತರ ಬದಲಾಗುತ್ತಿರುವ ಪರಿಸರದಲ್ಲಿ ಗ್ರಂಥಾಲಯಗಳ ಪಾತ್ರವು ಸಾಂಪ್ರದಾಯಿಕ ಮಿತಿಗಳನ್ನು ಮೀರಿ ವಿಸ್ತರಿಸಿದೆ. ಆಧುನಿಕ ಗ್ರಂಥಾಲಯವು ಕೇವಲ ಪುಸ್ತಕಗಳ ಸಂಗ್ರಹಾಲಯವಲ್ಲ; ಅದು ಜ್ಞಾನಕೇಂದ್ರ, ಡಿಜಿಟಲ್ ಲೋಕಕ್ಕೆ ಪ್ರವೇಶ ದ್ವಾರ, ಸಂಶೋಧನಕ್ಕೆ ವ್ಯವಸ್ಥಿತ ಸಹಕಾರ ವ್ಯವಸ್ಥೆ ಮತ್ತು ಕಲಿಕೆ ಹಾಗೂ ನವೀನತೆಯನ್ನು ಉತ್ತೇಜಿಸುವ ಶಕ್ತಿಕೇಂದ್ರವಾಗಿದೆ’ ಎಂದರು.

‘ಎಂಜಿನಿಯರಿಂಗ್ ಗ್ರಂಥಪಾಲನೆ ಒಂದು ಅತ್ಯಂತ ವಿಶೇಷೀಕೃತ ಹಾಗೂ ತಂತ್ರಾತ್ಮಕ ಕ್ಷೇತ್ರವಾಗಿ ರೂಪುಗೊಂಡಿದೆ. ಇಂದಿನ ಎಂಜಿನಿಯರಿಂಗ್ ಗ್ರಂಥಪಾಲಕರು ಕೇವಲ ಮಾಹಿತಿಯ ಸಂರಕ್ಷಕರಷ್ಟೇ ಅಲ್ಲ, ಶೈಕ್ಷಣಿಕ ಪ್ರಗತಿಯಲ್ಲಿ ಜ್ಞಾನದ ಸಹಭಾಗಿಗಳಾಗಿಯೂ ಕಾರ್ಯನಿರ್ವಹಿಸುತ್ತಾರೆ. ಇ-ಸಂಪನ್ಮೂಲಗಳು, ಸಂಶೋಧನಾ ಜರ್ನಲ್‌ಗಳು, ಡೇಟಾಬೇಸ್‌ಗಳು, ಪೇಟೆಂಟ್‌ಗಳು ಹಾಗೂ ತಾಂತ್ರಿಕ ಸಾಹಿತ್ಯಕ್ಕೆ ಪ್ರವೇಶ ಒದಗಿಸುವ ಮೂಲಕ ಬೋಧನೆ ಮತ್ತು ಕಲಿಕೆಯನ್ನು ಬೆಂಬಲಿಸುವಲ್ಲಿ ಗ್ರಂಥಪಾಲಕರು ಪ್ರಮುಖ ಪಾತ್ರವಹಿಸುತ್ತಾರೆ. ಅವರು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಕಟಣೆ, ಸಂಶೋಧನಾ ನೈತಿಕತೆ, ಪ್ಲೇಗರಿಸಂ ತಡೆ, ಉಲ್ಲೇಖ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡುತ್ತಾರೆ’ ಎಂದೂ ಹೇಳಿದರು.

ಇದಕ್ಕೂ ಮುನ್ನ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ವಿಟಿಯು ಕನ್ಸೋರ್ಟಿಯಂ ಸಲಹೆಗಾರ ಪ್ರೊ.ಮುತ್ತಯ್ಯ ಕೊಗನೂರಮಠ, ಎಂಜಿನಿಯರಿಂಗ್ ಗ್ರಂಥಾಲಯಶಾಸ್ತ್ರದಲ್ಲಿ ನಡೆಯುತ್ತಿರುವ ಸಮಕಾಲೀನ ಬದಲಾವಣೆಗಳು ಮತ್ತು ಮಾಹಿತಿ ನಿರ್ವಹಣೆಯ ಹೊಸ ಆಯಾಮಗಳನ್ನು ವಿವರಿಸಿದರು.

ವೇದಿಕೆ ಮೇಲೆ ಹಣಕಾಸು ಅಧಿಕಾರಿ ಪ್ರೊ.ಪ್ರಶಾಂತ ನಾಯಕ್ ಜಿ, ದಾವಣಗೆರೆ ಘಟಕ ಕಾಲೇಜು ಪ್ರಾಚಾರ್ಯ ನಾಗರಾಜಪ್ಪ ಇದ್ದರು. ಸಮ್ಮೇಳನದ ನಿರ್ದೇಶಕ ಪ್ರೊ.ಸಿದ್ದಲಿಂಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಲಸಚಿವ ಪ್ರೊ ಪ್ರಸಾದ್ ರಾಂಪುರೆ ಸ್ವಾಗತಿಸಿದರು. ಸಮ್ಮೇಳನದ ಸಂಯೋಜನಾಧಿಕಾರಿ ಪ್ರೊ.ಸೋಮರಾಯ ತಳ್ಳೊಳ್ಳಿ ಅತಿಥಿಗಳನ್ನು ಪರಿಚಯಿಸಿದರು.  ಮೌಲ್ಯಮಾಪನ ಕುಲಸಚಿವರಾದ ಪ್ರೊ.ಉಜ್ವಲ್ ಯು.ಜೆ.  ವಂದಿಸಿದರು.

ವಿಟಿಯುನ ಎಸ್.ಜಿ. ಬಾಳೇಕುಂದ್ರಿ ಕೇಂದ್ರ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಆಯೋಜಿಸಲಾದ ಈ ಮೂರು ದಿನಗಳ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಗ್ರಂಥಪಾಲಕರು, ಶಿಕ್ಷಣ ತಜ್ಞರು, ಸಂಶೋಧಕರು ಹಾಗೂ ಮಾಹಿತಿ ತಜ್ಞರು ಭಾಗವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.