ADVERTISEMENT

ಬೆಳಗಾವಿ: ಹೊಸಟ್ಟಿಯ ವಾರಕರಿ ಸಂಘಕ್ಕೆ ಶತಮಾನದ ಸಂಭ್ರಮ

ವಿಠ್ಠಲನ ಭಕ್ತಿ ಮರೆಯುತ್ತಿರುವ ಗ್ರಾಮಸ್ಥರು: ಅಖಂಡ ಹರಿನಾಮ ಸಪ್ತಾಹ

ಬಾಲಶೇಖರ ಬಂದಿ
Published 24 ಆಗಸ್ಟ್ 2025, 7:47 IST
Last Updated 24 ಆಗಸ್ಟ್ 2025, 7:47 IST
ಮೂಡಲಗಿ ತಾಲ್ಲೂಕಿನ ಹೊಸಟ್ಟಿ ಗ್ರಾಮದ ಪಾಂಡುರಂಗ ರುಕ್ಮೀಣಿ ದೇವಸ್ಥಾನದಲ್ಲಿ ವಾರಕರಿ ಭಕ್ತಿ ಪಂಥ ಶತಮಾನೋತ್ಸವ ಸಮಾರಂಭದಲ್ಲಿ ಅಖಂಡ ಹರಿನಾಮ ಪಠಣ ಮಾಡಲಾಯಿತು
ಮೂಡಲಗಿ ತಾಲ್ಲೂಕಿನ ಹೊಸಟ್ಟಿ ಗ್ರಾಮದ ಪಾಂಡುರಂಗ ರುಕ್ಮೀಣಿ ದೇವಸ್ಥಾನದಲ್ಲಿ ವಾರಕರಿ ಭಕ್ತಿ ಪಂಥ ಶತಮಾನೋತ್ಸವ ಸಮಾರಂಭದಲ್ಲಿ ಅಖಂಡ ಹರಿನಾಮ ಪಠಣ ಮಾಡಲಾಯಿತು   

ಮೂಡಲಗಿ: ಮೂಡಲಗಿ ತಾಲ್ಲೂಕಿನ ಹೊಸಟ್ಟಿ ಗ್ರಾಮದ ವಾರಕರಿ ಭಕ್ತಿ ಪಂಥಕ್ಕೆ ನೂರು ವರ್ಷಗಳು ತುಂಬಿದ್ದು, ಗ್ರಾಮದ ಜನರೆಲ್ಲ ಸೇರಿ ಶತಮಾನೋತ್ಸವ ಸಂಭ್ರಮ ಆಚರಿಸುತ್ತಿದ್ದಾರೆ. ಆ.24 ಜರುಗುವ ಸಮಾರೋಪದಲ್ಲಿ ನೂರಾರು ವಾರಕರಿಗಳು, ಸಂತರು ಭಾಗವಹಿಸಲಿದ್ದಾರೆ.

ಹಿನ್ನೆಲೆ: ರೈತಾಪಿ ಜನರು ಇರುವ ಹೊಸಟ್ಟಿ ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ 1925ರಲ್ಲಿ ಗೋಕಾಕದ ಸಂತ ಶಿವರಾಮ ದಾದಾ ಅವರ ಪಂಢರಪುರ ವಿಠ್ಠಲ ದೇವರ ವಾರಕರಿಯು ಗ್ರಾಮಕ್ಕೆ ಆಗಮಿಸಿ ವಾಸ್ತವ್ಯ ಮಾಡಿದರು.

ಗ್ರಾಮಸ್ಥರೆಲ್ಲರನ್ನೂ ಸೇರಿಸಿ ಆಧ್ಯಾತ್ಮಿಕ ಚಿಂತನೆ, ಕೀರ್ತನೆ ಮಾಡಿದರು. ಸಂತರ ಪ್ರಭಾವಕ್ಕೆ ಒಳಗಾಗಿ ಪ್ರಾರಂಭದಲ್ಲಿ ಗ್ರಾಮದಲ್ಲಿ ಬೆರಳಣಿಕೆಯಷ್ಟು ಜನರು ಮಾತ್ರ ದಿಂಡಿ ಸಂಪ್ರದಾಯಕ್ಕೆ ಪರವಶಗೊಂಡು ಗ್ರಾಮದಲ್ಲಿ ಭಕ್ತಿ ಪಂಥವನ್ನು ಶುರು ಮಾಡಿದರು.

ADVERTISEMENT

ಕೆಲವು ದಶಕಗಳ ನಂತರ ಗ್ರಾಮದ ಲಗಮಣ್ಣ ಪಾಟೀಲ ಅವರು ದೇಣಿಗೆಯಾಗಿ ನೀಡಿದ್ದ ಜಾಗದಲ್ಲಿ ಸಂತರೆಲ್ಲ ಸೇರಿ ವಿಠ್ಠಲ ರುಕ್ಮಿಣಿ ಮಂದಿರ ನಿರ್ಮಿಸಿರುವರು. ಇದರಿಂದಾಗಿ ದೇವಸ್ಥಾನದಲ್ಲಿ ಸಂತರೆಲ್ಲ ಸೇರಿ ನಿತ್ಯ ಭಜನೆ, ಕೀರ್ತನೆ ನಡೆಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಆಷಾಢ ಮಾಸದಲ್ಲಿ ನೂರಾರು ಸಂತರ ಸಮಾಗಮದಲ್ಲಿ 9 ದಿನಗಳ ದಿಂಡಿ ಸಪ್ತಾಹವನ್ನು ತಪ್ಪದೆ ಇಲ್ಲಿ ನಡೆಸಿಕೊಂಡು ಬಂದಿದ್ದಾರೆ.

ಬಿರಡಿಯ ಸಿದ್ದಲಿಂಗ ಮಹಾರಾಜರು, ಜಾಗನೂರ ರಾಮಣ್ಣಾ ಮಹಾರಾಜರ ಸಮ್ಮುಖದ ದಿಂಡಿ ಯಾತ್ರೆಯಲ್ಲಿ ಗ್ರಾಮದ ವಾರಕರಿಗಳು ತಪ್ಪದೆ ಭಾಗವಹಿಸಿ ವಿಠ್ಠಲನ ಸೇವೆಗೈಯುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ ನೂರಾರು ವಾರಕರಿಗಳ ಸಂತತಿ ಬೆಳೆದಿದ್ದು ಜಾತಿ, ಮತ, ಪಂಥ ಬೇಧ ಇಲ್ಲದೆ ಆಧ್ಯಾತ್ಮಿಕ ಚಿಂತನೆಗಳೊಂದಿಗೆ ಗ್ರಾಮವು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸೌಹಾರ್ದದ ತಾಣವಾಗಿದೆ.

‘ಸರ್ವೇ ಜನ ಸುಖಿ:ನೋಭವಂತು’ ಸಂದೇಶ ಇಲ್ಲಿ ಸಾಕಾರಗೊಂಡಿದೆ. ‘ಪುಟ್ಟ ಗ್ರಾಮವಾಗಿದ್ದರೂ ಸಹ ಗ್ರಾಮದ ಅನೇಕರು ಶಿಕ್ಷಣ, ಭಾರತೀಯ ಸೇನೆಯಲ್ಲಿ ಅಧಿಕಾರಿಗಳಾಗಿದ್ದಾರೆ. ವಕೀಲರು, ಶಿಕ್ಷಕರು, ವೈದ್ಯರು, ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ’ ಎಂದು ಸಂತ ಪರುಶರಾಮ ಸಲಬಣ್ಣವರ ಮತ್ತು ಸಂತ ಹಣಮಂತ ನಾಯ್ಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮಕ್ಕಳಿಂದ ಹಿಡಿದು ವಯೋವೃದ್ಧರು ಭಾಗಿಯಾಗುವರು. ನೂರು ವರ್ಷ ಪೂರ್ವದಲ್ಲಿ ಅಪ್ಪಣ್ಣ ನಾಯ್ಕ, ನಿಂಗಪ್ಪ ನಾವಿ, ನೀಲಕಂಠ ಪತ್ತಾರ, ಯತಿರಾಜ ಬಾಗಲಕೋಟ ಇವರೆಲ್ಲ ಗ್ರಾಮದಲ್ಲಿ ಭಕ್ತಿ ಪಂಥ ದೀಪ ಹಚ್ಚಿದರು. 90 ವಯಸ್ಸಿನ ಮಾರುತೆಪ್ಪ ಕಬ್ಬೂರ ಈಗಲೂ ದಿಂಡಿಯಲ್ಲಿ ಭಾಗವಹಿಸುವರು.

ಪ್ರತಿ ವರ್ಷವೂ ನನ್ನ ತವರೂರು ಹೊಸಟ್ಟಿ ಗ್ರಾಮದಲ್ಲಿ ನಡೆಯುವ ದಿಂಡಿ ಸಪ್ತಾಹದಲ್ಲಿ ತಪ್ಪದೆ ಭಾಗವಹಿಸುತ್ತೇನೆ. ಶತಮಾನೋತ್ಸವದಲ್ಲಿ ಸಹ ಭಾಗವಹಿಸಲು ಈಗ ಬಂದಿರುವೆ
– ಡಾ.ಪರುಶರಾಮ ನಾಯಿಕ ಕರ್ನಲ್‌ ಭಾರತೀಯ ಸೇನೆ ತೇಜ್‌ಪುರ ಅಸ್ಸಾಂ

ಶತಮಾನೋತ್ಸವ ಸಂಭ್ರಮ

ಶತಮಾನೋತ್ಸವ ಸಂಭ್ರಮಕ್ಕಾಗಿ ಕಳೆದ ಮೂರು ವರ್ಷಗಳಿಂದ ಗ್ರಾಮದಲ್ಲಿ ಜ್ಞಾನೇಶ್ವರ ಪಾರಾಯಣವನ್ನು ನಡೆಸಿಕೊಂಡು ಬಂದಿದ್ದಾರೆ. ಆ. 15ರಿಂದ ಪ್ರಾರಂಭಗೊಂಡಿರುವ ಶತಮಾನೋತ್ಸವ ಸಂಭ್ರಮ ನಿಮಿತ್ತವಾಗಿ ನಿತ್ಯ ಕಾಕಡಾರತಿ ಹರಿಪಾಠ ಪ್ರವಚನ ನಾಮಜಪ ಕೀರ್ತನೆ ಭಜನೆ ಅನ್ನಸಂತರ್ಪಣೆ ಜರುಗಿವೆ. ಕಾಲವಾಗಿರುವ ಗ್ರಾಮದ ವಾರಕರಿಗಳ ನೆನಪಿನಲ್ಲಿ ಹೂವು ಅರ್ಪಿಸುವರು. ಅಹೋರಾತ್ರಿ ದೇವಸ್ಥಾನದಲ್ಲಿ ಸಂತರಿಂದ ನಡೆದುಕೊಂಡು ಬಂದಿರುವ ವೀಣೆ ಸೇವೆಯೊಂದಿಗೆ ‘ಶ್ರೀ ರಾಮಕೃಷ್ಣ ಹರೆ’ ಪಠಣವು ಭಾನುವಾರ ಸಂಪನ್ನವಾಗುಗುವುದು. ಅನ್ನಸಂತರ್ಪಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.