ಚಿಕ್ಕೋಡಿ: ಕೃಷ್ಣಾ ನದಿಯಿಂದ ₹ 210 ಕೋಟಿ ಮೊತ್ತದಲ್ಲಿ ಚಿಕ್ಕೋಡಿ ಉಪ ಕಾಲುವೆಗೆ ನೀರು ಹರಿಸಿ ಕೇರೂರ, ಕಾಡಾಪೂರ, ಜೋಡಕುರಳಿ, ನಣದಿ, ಬಸವನಾಳಗಡ್ಡಿ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೊಂದಿಗೆ ಚರ್ಚಿಸಿ ಬರುವ ಜೂನ್ ತಿಂಗಳಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗುವುದು’ ಎಂದು ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ತಾಲ್ಲೂಕಿನ ಕೇರೂರ ಗ್ರಾಮದಲ್ಲಿ ಕೇರೂರ-ಕೆಂಪಟ್ಟಿ ರಸ್ತೆಯಿಂದ ಪೂಜೇರಿ, ಹೆಗಡೆ ತೋಟಗಳ ಮೂಲಕ ಜೋಡಕುರಳಿ ಗ್ರಾಮದವರೆಗೆ ₹ 2.40 ಕೋಟಿ ಅನುದಾನದಲ್ಲಿ ರಸ್ತೆ ಸುಧಾರಣಾ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ನೀರಾವರಿಗೊಳಪಟ್ಟ ಬಳಿಕ ಈ ಭಾಗದ ರೈತರಿಗೆ ವಿದ್ಯುತ್ ವ್ಯತ್ಯಯವಾಗದಿರಲಿ ಎಂಬ ಕಾರಣದಿಂದ ಈಗಾಗಲೇ ಕೇರೂರ ಗ್ರಾಮದಲ್ಲಿ 33 ಕೆವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರವನ್ನು 110ಕೆವಿಗೆ ಏರಿಸಲಾಗಿದೆ. ಪಟ್ಟಣಕುಡಿಯಲ್ಲಿಯ 33ಕೆವಿ ವಿದ್ಯುತ್ ವಿತರಣಾ ಕೇಂದ್ರವನ್ನು ಶೀಘ್ರದಲ್ಲಿಯೇ 110ಕೆವಿಗೆ ಏರಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಅಲ್ಲದೇ, ನಾಗರಾಳ ಗ್ರಾಮದಲ್ಲಿ 33ಕೆವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದ ಸ್ಥಾಪನೆಗೆ 10 ಎಕರೆ ಭೂಮಿಯನ್ನು ಖರೀದಿಸಲಾಗಿದೆ" ಎಂದರು.
ಮುಖಂಡ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ‘ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿಯವರ ಪ್ರಯತ್ನದಿಂದ ಈಗಾಗಲೇ ಕೇರೂರ ಗ್ರಾಮದ ವ್ಯಾಪ್ತಿಯಲ್ಲಿ ₹ 5 ಕೋಟಿ ಮೊತ್ತದಲ್ಲಿ ರಸ್ತೆ ಸುಧಾರಣಾ ಕಾಮಗಾರಿ ನಡೆಯುತ್ತಿದ್ದು, ಇನ್ನೂ ₹ 5 ಕೋಟಿ ಮೊತ್ತದ ಅನುದಾನವನ್ನು ಇನ್ನಷ್ಟು ರಸ್ತೆ ರಿಪೇರಿಗೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಮುಂದಿನ ತಿಂಗಳು ರಸ್ತೆ ಕಾಮಗಾರಿ ಪೂರ್ಣಗೊಂಡು ರೈತರಿಗೆ ಕಬ್ಬು ಸಾಗಾಟ ಮಾಡಲು ಅನುಕೂಲವಾಗಲಿದೆ’ ಎಂದರು.
ಕೇರೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರೇಂದ್ರ ಪಾಟೀಲ, ಮಲ್ಲಪ್ಪ ಬಾಗಿ, ವಿಠ್ಠಲ ವಾಳಕೆ, ರಾಜೇಸಾಬ ಸಯ್ಯದ, ರವಿ ಪಾಟೀಲ, ಸತ್ಯಪ್ಪ ಖೋತ, ವಿಠ್ಠಲ ಬೀಳಗೆ, ಸಂಭಾಜಿ ಹಕ್ಯಾಗೋಳ, ನರಸಗೌಡ ಮಾಂಗನೂರೆ, ಗುತ್ತಿಗೆದಾರ ಸೋಮಶೇಖರ ಸಂಕಪಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.