ADVERTISEMENT

ಕೆಲಸದಲ್ಲಿ ವಿಫಲರಾದ ಅಧಿಕಾರಿಗಳು ನಮಗೆ ಅಗತ್ಯವಿಲ್ಲ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 12:23 IST
Last Updated 2 ಜೂನ್ 2025, 12:23 IST
<div class="paragraphs"><p>ಸತೀಶ ಜಾರಕಿಹೊಳಿ</p></div>

ಸತೀಶ ಜಾರಕಿಹೊಳಿ

   

ಬೆಳಗಾವಿ: ‘ಜಿಲ್ಲೆಯಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಲು ವಿಫಲವಾದರೆ, ಅವರು ನಮಗೆ ಅಗತ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಎಚ್ಚರಿಕೆ ನೀಡಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರಿಗಳ ವೈಫಲ್ಯಗಳಿಗೆ ನಾವು ಉತ್ತರಿಸಲು ಸಾಧ್ಯವಿಲ್ಲ. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಹಾಗಾಗಿ ನಗರ ಪೊಲೀಸ್ ಕಮಿಷನರ್‌ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಅವರನ್ನು ವರ್ಗಾವಣೆ ಮಾಡಲಾಗಿದೆ’ ಎಂದರು.

ADVERTISEMENT

‘ಅಭಿವೃದ್ಧಿ ವಿಷಯದಲ್ಲಿ ಅಧಿಕಾರಿಗಳಿಗೆ ನಾವೂ ಸಹಕರಿಸುತ್ತೇವೆ. ಆದರೆ, ಪ್ರತಿ ಕೆಲಸವನ್ನು ಮುಖ್ಯಮಂತ್ರಿ ಅಥವಾ ನಾವು ಹೇಳಲಾಗದು. ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ಮತ್ತು ಕಾನೂನು ಮತ್ತು ಸುವ್ಯವಸ್ಥೆ ನಿಭಾಯಿಸದ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶವಿಲ್ಲ’ ಎಂದರು.

‘ಪೊಲೀಸ್ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಅವರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ, ಅನೇಕ ಘಟನೆ ತಡೆಯಬಹುದು. ನಗರ ಪೊಲೀಸ್ ಕಮಿಷನರ್‌ ವರ್ಗಾವಣೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಎಚ್ಚರಿಕೆಯಾಗಿದೆ’ ಎಂದು ಅವರು ಹೇಳಿದರು.

ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗದ್ದರಿಂದ ವಿರೋಧ ಪಕ್ಷದವರು ಗದ್ದಲ ಸೃಷ್ಟಿಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ‘ಕೆಲವು ಬಾರಿ ತಿಂಗಳಲ್ಲಿ ಎರಡು ಸಲ ಹಣ ಜಮೆ ಮಾಡಿದ್ದೇವೆ. ಪ್ರತಿ ತಿಂಗಳ 30ನೇ ತಾರೀಖಿನಿಂದ ಅದನ್ನು ಜಮೆ ಮಾಡಬೇಕು ಎಂದು ಹೇಳಬಾರದು. ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದಕ್ಕೆ ಹಣ ಹಂಚಿಕೆ ಮಾಡಿದೆ’ ಎಂದರು.

ಕಮಲ್‌ ಹಾಸನ್‌ ಕ್ಷಮೆ ಕೇಳಲಿ
ಕನ್ನಡ ಭಾಷೆ ಬಗ್ಗೆ ನಟ ಕಮಲ್ ಹಾಸನ್ ನೀಡಿದ ಹೇಳಿಕೆಯನ್ನು ನಾವೆಲ್ಲರೂ ಖಂಡಿಸಿದ್ದೇವೆ. ಕನ್ನಡ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಪ್ರಾಚೀನ ಭಾಷೆಯಾಗಿದೆ. ಆದರೆ, ನಟ ಯಾವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಅವರು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

‘ನಮಗೆ ತಿಳಿಯದೆ ಹುಬ್ಬಳ್ಳಿ–ಧಾರವಾಡದ ಕೈಗಾರಿಕೆಗಳಿಗೆ ಹಿಡಕಲ್ ಅಣೆಕಟ್ಟೆಯ ನೀರನ್ನು ಹಂಚಿಕೆ ಮಾಡಲಾಗಿದೆ. ಈ ಹಿಂದೆ ಕಾಮಗಾರಿ ಆರಂಭವಾದಾಗ, ನಾವು ಸ್ಥಗಿತಗೊಳಿಸಿದ್ದೆವು. ಆದರೆ, ಈಗ ಜಲಸಂಪನ್ಮೂಲ ಇಲಾಖೆಯು ಕಾಮಗಾರಿ ಅನುಷ್ಠಾನಗೊಳಿಸುತ್ತಿದೆ. ಟೆಂಡರ್‌ ಸಹ ನೀಡಲಾಗಿದೆ. ಹಿಡಕಲ್‌ ಡ್ಯಾಂನಲ್ಲಿ 2.5 ಟಿಎಂಸಿ ಅಡಿ ನೀರನ್ನು ಕೈಗಾರಿಕೆಗಳ ಬಳಕೆಗೆ ಕಾಯ್ದಿರಿಸಲಾಗಿದೆ. ಹಿಡಕಲ್ ಜಲಾಶಯದಿಂದ ಕೈಗಾರಿಕೆಗಳಿಗೆ ನೀರು ಹಂಚಿಕೆ ಮಾಡುವ ಮೊದಲು, ನಮ್ಮ ಸಲಹೆ ಪಡೆಯುವಂತೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ. ಮುಂಬರುವ ವರ್ಷ ಜಿಲ್ಲೆಗೆ ಹೆಚ್ಚಿನ ಕೈಗಾರಿಕೆ ಬರಲಿವೆ. ಆಗ ನಮಗೂ ಅವರ ಅಗತ್ಯತೆ ಪೂರೈಸಲು ನೀರು ಬೇಕಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮೂಲಕ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಆಸಿಫ್‌ ಸೇಠ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.