ADVERTISEMENT

ಚುನಾವಣೆಗೆ ನಾವು ಬೇಕು; ಈಗ ಬೇಡವೇ?: ಬಿಜೆಪಿಗೆ ಪಂಚಾಕ್ಷರಿ ಸ್ವಾಮೀಜಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 12:01 IST
Last Updated 22 ಜುಲೈ 2021, 12:01 IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಂಬಲಿಸಿ ಕಿತ್ತೂರು ಕಲ್ಮಠದಲ್ಲಿ ಗುರುವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಸ್ವಾಮೀಜಿಗಳು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಂಬಲಿಸಿ ಕಿತ್ತೂರು ಕಲ್ಮಠದಲ್ಲಿ ಗುರುವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಸ್ವಾಮೀಜಿಗಳು.   

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ಚುನಾವಣೆ ಸಂದರ್ಭದಲ್ಲಿ ಹೂವು, ಹಣ್ಣು ತೆಗೆದುಕೊಂಡು ಮಠಗಳಿಗೆ ಭೇಟಿ ನೀಡುತ್ತಾರೆ. ನಿಮ್ಮ ಸಮಾಜದ ಮತಗಳನ್ನು ಬಿಜೆಪಿಗೆ ಹಾಕಿಸುವಂತೆ ಕೇಳಿಕೊಳ್ಳುತ್ತಾರೆ. ಆದರೆ, ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವ ವಿಷಯದಲ್ಲಿ ನಾವು ಬೇಡವೇ? ಸ್ವಾಮೀಜಿಗಳು ರಾಜಕೀಯದಲ್ಲಿ ಭಾಗವಹಿಸಬಾರದು ಎಂದೇಕೆ ಹೇಳುತ್ತಾರೆ’ ಎಂದು ತಾಲ್ಲೂಕಿನ ನಿಚ್ಚಣಕಿ ಗುರುಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಖಾರವಾಗಿ ಪ್ರಶ್ನಿಸಿದರು.

ಇಲ್ಲಿನ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬೇರೆ ಸಮಾಜದವರು ದುಡಿಯಬೇಕು. ಆದರೆ, ಅಧಿಕಾರ ನಾವು ಹೇಳಿದಂತೆ ನಡೆಯಬೇಕು ಎಂಬ ನಿಲುವನ್ನು ಆರ್‌ಎಸ್‌ಎಸ್‌ ಹೊಂದಿದೆ. ಯಡಿಯೂರಪ್ಪ ಅವರ ವಿಷಯದಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಹೈಕಮಾಂಡ್ ತಮ್ಮ ನಿಲುವು ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ತಕ್ಕ ಶಿಕ್ಷೆ ಅನುಭವಿಸುತ್ತದೆ. ನಮ್ಮ ಮನವಿ ತಿರಸ್ಕರಿಸಿದರೆ ಕಾಂಗ್ರೆಸ್ ಪರ ಪ್ರಚಾರ ಮಾಡಲು ಹಿಂಜರಿಯುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ನಾವು ಮೊದಲು ಭಾರತೀಯ ಪ್ರಜೆಗಳು. ಯಡಿಯೂರಪ್ಪ ಬದಲಾವಣೆ ಮಾಡುವುದರ ವಿರುದ್ಧ ನಾವೂ ಮಾತನಾಡುತ್ತೇವೆ. ಕಡ್ಡಿ ಒಯ್ದು ಗುಡ್ಡ ಹಾಗೂ ಗುಡ್ಡ ಒಯ್ದು ಕಡ್ಡಿ ಮಾಡುವುದನ್ನು ಅವರೇ (ಬಿಜೆಪಿ, ಆರ್‌ಎಸ್‌ಎಸ್‌) ಮಾಡುತ್ತಾರೆ. ಚುನಾವಣೆ ವೇಳೆ ಸುತ್ತೂರು ಮಠಕ್ಕೆ ಹೋಗಿ ಯಾರು ಕೂರುತ್ತಾರೆ?’ ಎಂದು ಕೇಳಿದರು.

‘ಯಡಿಯೂರಪ್ಪ ಅಧಿಕಾರ ಹಿಡಿದಾಗಿನಿಂದ ವಿಧಿ ಬೆನ್ನತ್ತಿ ಕಾಡಿದಂತೆ ಸ್ವಪಕ್ಷೀಯರೆ ಕಾಡುತ್ತಿದ್ದಾರೆ. ಇದನ್ನು ಬಿಡಬೇಕು. ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ತಪ್ಪು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ಅವರ ದಾರಿ ಅವರಿಗೆ; ನಮ್ಮ ದಾರಿ ನಮಗೆ’ ಎಂದು ಎಚ್ಚರಿಕೆ ನೀಡಿದರು.

ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ‘ಯಡಿಯೂರಪ್ಪ ಅವರು ನಾಡಿನಾದ್ಯಂತ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರು ಅಧಿಕಾರದ ಅವಧಿ ಪೂರೈಸುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ (ಸ್ವಾಮೀಜಿಗಳ) ನಿಲುವನ್ನು ಕಾಯ್ದು ನೋಡಿ’ ಎಂದರು.

ಮುರಗೋಡ ಹೊಸೂರು ಗಂಗಾಧರೇಶ್ವರ ಸ್ವಾಮೀಜಿ, ದೇಗಾಂವ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ, ದೇವರಶೀಗಿಹಳ್ಳಿಯ ವೀರೇಶ ದೇವರು, ದೇಮಟ್ಟಿಯ ಗುರುಸಿದ್ಧಯ್ಯ ಸ್ವಾಮೀಜಿ, ಬುಡರಕಟ್ಟಿಯ ಮೃತ್ಯುಂಜಯ ಸ್ವಾಮೀಜಿ, ವಿಜಯ ಮಹಾಂತ ದೇವರು, ಮುಖಂಡರಾದ ಗಂಗಣ್ಣ ಕರಿಕಟ್ಟಿ, ಬಿ.ಡಿ. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.