ADVERTISEMENT

ಕೋವಿಡ್ ಕಿತ್ತೊಗೆಯಲು ಹೋರಾಡಬೇಕು: ಜಾಲಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 15:36 IST
Last Updated 26 ಜನವರಿ 2022, 15:36 IST
ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ವಿವಿಧ ಸಂಚಿಕೆಗಳನ್ನು ಗಣ್ಯರು ಬಿಡುಗಡೆ ಮಾಡಿದರು
ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ವಿವಿಧ ಸಂಚಿಕೆಗಳನ್ನು ಗಣ್ಯರು ಬಿಡುಗಡೆ ಮಾಡಿದರು   

ಬೆಳಗಾವಿ: ‘ಕೋವಿಡ್ ಸಾಂಕ್ರಾಮಿಕವನ್ನು ಬೇರು ಸಹಿತ ಕಿತ್ತೊಗೆಯಲು ನಾವೆಲ್ಲರೂ ಹೋರಾಡಬೇಕು’ ಎಂದು ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಹೇಳಿದರು.

ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಕೋವಿಡ್ ರೋಗವು ವೈದ್ಯಕೀಯ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಪ್ರಬಲ ಸವಾಲು ತಂದೊಡ್ಡಿದೆ. ಇಂತಹ ಕಠಿಣ ಪರಿಸ್ಥಿಯಲ್ಲಿ ವೈದ್ಯ ವಿಜ್ಞಾನದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುನ್ನುಗ್ಗಬೇಕಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

‘ಕೇವಲ ವೈದ್ಯಕೀಯ ಕ್ಷೇತ್ರದಿಂದ ನಿವಾರಣೆ ಸಾಧ್ಯವಲ್ಲ. ಸಾರ್ವಜನಿಕರ ಪಾತ್ರವೂ ಅತ್ಯಂತ ಮುಖ್ಯವಾಗಿದೆ’ ಎಂದರು.

‘ಕೋವಿಡ್ ವಿರುದ್ಧದ ಹೋರಾಟ ಇನ್ನೂ ತೀವ್ರವಾಗಿದೆ. ಅದನ್ನು ಕೊನೆಗಾಣಿಸಲು ಲಸಿಕೆಯು ಪ್ರಬಲ ಅಸ್ತ್ರವಾಗಿದ್ದು, ಎಲ್ಲರೂ ಪಡೆದುಕೊಳ್ಳಬೇಕು. ಭಾರತದ ಲಸಿಕಾ ಅಭಿಯಾನವನ್ನು ವಿಶ್ವವೇ ಗುರುತಿಸಿದೆ. ಕೊರೊನಾ ಮುಂಚೂಣಿ ಯೋಧರು ಹೋರಾಟದಲ್ಲಿ ಮುಂದಿದ್ದಾರೆ. ದೇಶದ ಪ್ರತಿ ನಾಗರಿಕರೂ ಕೈಜೋಡಿಸಿದಾಗ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

‘ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಮತ್ತಷ್ಟು ಬೇಕಾಗಿದೆ. ಅದಕ್ಕೆ ತಕ್ಕಂತೆ ಆರೋಗ್ಯ ಸೇವೆಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಗ್ರಾಮೀಣ ಭಾರತದಲ್ಲಿ ವೈದ್ಯಕೀಯ ಸೇವೆ ಒದಗಿಸಿ, ರೋಗ ಬರುವುದಕ್ಕಿಂತ ಮುಂಚೆ ಅದನ್ನು ತಡೆಗಟ್ಟುವ ವಿಧಾನವನ್ನು ತಿಳಿಸಿಕೊಡಬೇಕು. ಶಿಕ್ಷಣ, ಆಪ್ತಸಮಾಲೋಚನೆ ಮೂಲಕ ಅವರಿಗೆ ಆರೋಗ್ಯದ ಅರಿವು ಮೂಡಿಸಬೇಕು. ಕಡಿಮೆ ಔಷಧಿಗಳ ಮೂಲಕ ಒಳ್ಳೆಯ ಚಿಕಿತ್ಸೆ ನೀಡಬೇಕು’ ಎಂದು ಸಲಹೆ ನೀಡಿದರು.

ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದ ಕುಲಪತಿ ಡಾ.ವಿವೇಕ ಸಾವೋಜಿ ಮಾತನಾಡಿದರು.

ಆಸ್ಪತ್ರೆಯು ಪ್ರಕಟಿಸುವ ‘ಲೈಫ್ ಲೈನ್’ ಸಂಚಿಕೆಯನ್ನು ಸಾವೋಜಿ, ‘ಮಧುಮೇಹ ವೈದ್ಯ’ ಅನ್ನು ಡಾ.ಎನ್.ಎಸ್. ಮಹಾಂತಶೆಟ್ಟಿ ಹಾಗೂ ‘ಫೋಕಸ್’ ಅನ್ನು ಡಾ.ವಿ.ಡಿ. ಪಾಟೀಲ ಅವರು ಬಿಡುಗಡೆ ಮಾಡಿದರು.

ಡಾ.ಆರ್.ನಿ. ನೇರಲಿ, ಡಾ.ಸಂತೋಷ ಕುರಬೆಟ್, ಡಾ.ಸಂಜಯ ಕಂಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.