ADVERTISEMENT

ಗಡಿ ಕನ್ನಡಿಗರ ಅಭಿವೃದ್ಧಿಯೆ ಧ್ಯೇಯ

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 15:14 IST
Last Updated 28 ಜನವರಿ 2021, 15:14 IST
ಅಥಣಿಯ ಮೋಟಗಿ ಮಠದಲ್ಲಿ ಗುರುವಾರ ನಡೆದ ಶರಣ ಸಂಸ್ಕೃತಿ ಮೇಳದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ ಮಾತನಾಡಿದರು
ಅಥಣಿಯ ಮೋಟಗಿ ಮಠದಲ್ಲಿ ಗುರುವಾರ ನಡೆದ ಶರಣ ಸಂಸ್ಕೃತಿ ಮೇಳದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ ಮಾತನಾಡಿದರು   

ಅಥಣಿ: ‘ಗಡಿ ಭಾಗದ ಕನ್ನಡಿಗರ ಅಭಿವೃದ್ಧಿ ನಮ್ಮ ಪ್ರಮುಖ ಧ್ಯೇಯವಾಗಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ ಹೇಳಿದರು.

ಇಲ್ಲಿನ ಮೋಟಗಿ ಮಠದಲ್ಲಿ ನಡೆದ ಶರಣ ಸಂಸ್ಕೃತಿ ಮೇಳ-2021 ಉದ್ಘಾಟಿಸಿ ಅವರು ಮಾತನಾಡಿದರು.

‘ಭಾಷಾವಾರು ಪ್ರಾಂತ್ಯಗಳನ್ನು ವಿಂಗಡಿಸಿದ ನಂತರ ಗಡಿ ಪ್ರದೇಶದಲ್ಲಿ 52 ತಾಲ್ಲೂಕುಗಳಿವೆ. ಹೊಸ 11 ತಾಲ್ಲೂಕು ಸೇರಿದರೆ ಒಟ್ಟು 63 ಆಗುತ್ತವೆ. ಗಡಿಯಲ್ಲಿ ಒಟ್ಟು 6 ರಾಜ್ಯಗಳು ಬರುತ್ತವೆ. ಗೋವಾ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು ಗಡಿಯಲ್ಲಿರುವ ಕನ್ನಡಿಗರ ಹಿತ ಕಾಯಲು ನಾವು ಹೆಚ್ಚು ಗಮನಹರಿಸುತ್ತಿದ್ದೇವೆ’ ಎಂದರು.

ADVERTISEMENT

‘ಗಡಿ ಪ್ರದೇಶದಲ್ಲಿ ಕನ್ನಡದ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಈ ವಿಷಯದಲ್ಲಿ ಸರ್ಕಾರದೊಂದಿಗೆ ವೀರಶೈವ ಮಠಗಳು ಬಹಳ ಹಿಂದಿನಿಂದಲೂ ಕೈಜೋಡಿಸುತ್ತಾ, ಕನ್ನಡದ ಬೆಳವಣಿಗೆಗೆ ಶ್ರಮಿಸುತ್ತಿವೆ. 2010ರಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆರಂಭವಾಗಿದೆ. ಗಡಿ ಭಾದ ಶಾಲೆಗಳ ಅಭಿವೃದ್ಧಿಗೆ, ಗ್ರಂಥಾಲಯಗಳಿಗೆ ಸಹಾಯ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

‘ವಚನ ಸಾಹಿತ್ಯ ಮೂಲೆಯಲ್ಲಿ ಕುಳಿತು ರಚಿಸಿದ್ದಲ್ಲ. ಅದು ಅನುಭಾವ ಸಾಹಿತ್ಯ. ನಿಜ ಬದುಕಿನ ಸಮಗ್ರ ಚಿತ್ರಣ ಮತ್ತು ಅನುಭವ ಸಾಹಿತ್ಯದ ರೂಪದಲ್ಲಿ ಬಂದಿದೆ’ ಎಂದರು.

‘ಅಥಣೇಶ-ಅಂಕಿತ ಪ್ರಶಸ್ತಿ-2021’ ಸ್ವೀಕರಿಸಿದ ಹುಲಪ್ಪ ವಣಕಿಹಾಳ, ‘ನಾನು ಪ್ರಶಸ್ತಿ ಅಥವಾ ಕೀರ್ತಿ ಬೆನ್ನತ್ತಿ ಹೋದವನಲ್ಲ. ಎಲ್ಲ ಪ್ರಶಸ್ತಿಗಳೂ ತಾನಾಗಿಯೇ ಬಂದಿವೆ. ದೊರೆತ ಹಣವನ್ನು ನಾನು ಕಾರ್ಯನಿರ್ವಹಿಸುವ ಸರ್ಕಾರಿ ಶಾಲೆಗೆ ನೀಡುತ್ತಿದ್ದೇನೆ’ ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಪ್ರಾಧಿಕಾರದ ನಿರ್ದೇಶಕ ಮಹಾಂತೇಶ ಮ. ಪಾಟೀಲ ಮಾತನಾಡಿ, ‘ಸಮಾಜವನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸುತ್ತಿದ್ದೇವೆ. ತಾಲ್ಲೂಕಿಗೊಂದು ವೀರಶೈವ ಲಿಂಗಾಯತ ಭವನ ನಿರ್ಮಿಸುವ ಗುರಿ ಇದೆ. ಯುವಕರು ಯುಪಿಎಸ್‌ಸಿ, ಕೆಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಭುಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಅಂಕಿತ ಪ್ರಕಾಶನದ ಮುಖ್ಯಸ್ಥ ಪ್ರಕಾಶ್ ಕಂಭತ್ತಳ್ಳಿ, ಪಾಲನೇತ್ರ, ಪ್ರಕಾಶ ಮತ್ತಿಹಳ್ಳಿ ಮಾತನಾಡಿದರು.

ಮುಖಂಡರಾದ ರಮೇಶಗೌಡ ಪಾಟೀಲ, ಧರೆಪ್ಪ ಠಕ್ಕಣ್ಣವರ, ಶಿವಾನಂದ ಬುರ್ಲಿ, ಅನಿಲ ಸುಣದೋಳಿ, ವಿಜಯಕುಮಾರ ನೇಮಗೌಡ ಹಾಜರಿದ್ದರು.

ಬಿ.ಎಲ್. ಪಾಟೀಲ ಸ್ವಾಗತಿಸಿದರು. ಸಾಹಿತಿ ವಾಮನ ಕುಲಕರ್ಣಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.