ADVERTISEMENT

ಶುಕ್ರವಾರ–ಸೋಮವಾರ: ಪೂರ್ಣ ಲಾಕ್‌ಡೌನ್

ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 15:02 IST
Last Updated 1 ಜೂನ್ 2021, 15:02 IST
ಎಂ.ಜಿ. ಹಿರೇಮಠ
ಎಂ.ಜಿ. ಹಿರೇಮಠ   

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ವೈರಾಣು ಸೋಂಕು ಹರಡದಂತೆ ತಡೆಗಟ್ಟಲು ಜೂನ್ 4ರ ಬೆಳಿಗ್ಗೆ 6ರಿಂದ ಜೂನ್ 7ರ ಬೆಳಿಗ್ಗೆ 6ರವರೆಗೆ ಪೂರ್ಣ ಲಾಕ್‌ಡೌನ್‌ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾದ್ಯಂತ ಕೋವಿಡ್-19 ಹರಡುವುದನ್ನು ತಡೆಗಟ್ಟಲು ಜೂನ್ 7ರ ಬೆಳಿಗ್ಗೆ 6ರವರೆಗೆ ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡುವುದನ್ನು ನಿಷೇಧಿಸಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿತ್ತು. ಆದರೆ, ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವಾರಾಂತ್ಯದಲ್ಲಿ ಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಸಂಚರಿಸಲು, ಅಗತ್ಯ ವಸ್ತುಗಳಾದ ಹಾಲು, ಔಷಧಿ ಪೂರೈಕೆ ಮತ್ತು ಖರೀದಿಗೆ ಹಾಗೂ ಆನ್‌ಲೈನ್ ಫುಡ್ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೇ, ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರಿ ಸಭೆಗೆ ಹಾಜರಾಗಲು ಮಾತ್ರ ಅವಕಾಶವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಲಾಕ್‌ಡೌನ್ ಷೋಷಿಸಿರುವ ದಿನಗಳಂದು ಸಾರ್ವಜನಿಕ ವಿತರಣಾ ಪದ್ಧತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 6ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸಬೇಕು. ಅದೇ ರೀತಿ, ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಮಳಿಗೆಗಳು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಂಗಡಿಗಳನ್ನು ತೆರೆದು ಬೀಜ ಹಾಗೂ ರಸಗೊಬ್ಬರಗಳನ್ನು ವಿತರಿಸಲು ಅವಕಾಶವಿರುತ್ತದೆ. ಪ್ರತಿ ಗ್ರಾಮದಿಂದ ಐವರಿಗೆ ಮಾತ್ರ ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಮಳಿಗೆಗಳಿಗೆ ಹೋಗಲು ಅವಕಾಶ ಇರುತ್ತದೆ.

ಬೆಳಗಾವಿ ನಗರದಲ್ಲಿ ಬೀಜ, ರಸಗೊಬ್ಬರ ಹಾಗೂ ಇತರ ಪರಿಕರಗಳ ಮಾರಾಟ ಮಳಿಗೆಗಳು ಲಾಕ್‌ಡೌನ್‌ ದಿನಗಳಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ತೆರೆಯಲು ಅವಕಾಶವಿದೆ. ಅಲ್ಲಿ ತೆರಳುವ ರೈತರು ಗ್ರಾಮ ಪಂಚಾಯಿತಿ ಪಿಡಿಒ ಅಥವಾ ಗ್ರಾಮಲೆಕ್ಕಿಗರ ಅನುಮತಿ ಪಡೆಯಬೇಕು. ಅಲ್ಲದೇ, ಆದೇಶದಲ್ಲಿ ಸೂಚಿಸಿರುವ ದಿನಗಳಂದು ಈಗಾಗಲೇ ಪೂರ್ವಾನುಮತಿ ಪಡೆದುಕೊಂಡು ನಿಗದಿಪಡಿಸಿರುವ ಮದುವೆ ಸಮಾರಂಭಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪೂರ್ಣ ಲಾಕ್‌ಡೌನ್‌ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಹಿಂದಿನ ಎರಡು ವಾರಗಳಲ್ಲಿ ಶನಿವಾರ ಹಾಗೂ ಭಾನುವಾರ ಪೂರ್ಣ ಲಾಕ್‌ಡೌನ್ ಘೋಷಿಸಲಾಗಿತ್ತು. ಈ ಬಾರಿ ಸತತ ಮೂರು ದಿನ ಪೂರ್ಣ ಲಾಕ್‌ಡೌನ್‌ ಮಾಡಲಾಗುತ್ತಿದೆ.

‘87 ಮಂದಿಗೆ ಕಪ್ಪು ಶಿಲೀಂಧ್ರ’

ಬೆಳಗಾವಿ: ಜಿಲ್ಲೆಯಲ್ಲಿ ಇದುವರೆಗೆ 87 ಮಂದಿಯಲ್ಲಿ ಕಪ್ಪು ಶಿಲೀಂಧ್ರ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಈ ಸಮಸ್ಯೆಗೆ ಈಗ ಬಿಮ್ಸ್‌ನಲ್ಲಿ ಚಿಕಿತ್ಸೆ ದೊರೆಯುತ್ತಿದೆ. 10 ಮಂದಿಗೆ ಈಗಾಗಲೇ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸಂಪೂರ್ಣ ಗುಣಮುಖರಾದ ಬಳಿಕ ಬಿಡುಗಡೆ ಮಾಡಲಾಗುತ್ತದೆ’ ಎಂದರು.

‘8 ಖಾಸಗಿ ಆಸ್ಪತ್ರೆಗಳಲ್ಲಿ 38 ಹಾಗೂ ಬಿಮ್ಸ್‌ನಲ್ಲಿ 49 ಮಂದಿ ದಾಖಲಾಗಿದ್ದಾರೆ. ರೋಗಿಗಳಿಗೆ ಬೇಕಾಗುವ ಔಷಧೋಪಚಾರದ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರತಿ ದಿನವೂ ಸರ್ಕಾರದ ಗಮನಕ್ಕೆ ತರಲಾಗುತ್ತಿದೆ. ಜಿಲ್ಲೆಯಲ್ಲಿ ಈ ರೋಗಿಗಳ ಚಿಕಿತ್ಸೆಗೆ ಔಷಧಿ ಕೊರತೆ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.