ಬೆಳಗಾವಿ: ಮಾರ್ಗದುದ್ದಕ್ಕೂ ಕನ್ನಡ ಅಭಿಮಾನ ಪಸರಿಸುತ್ತಾ ಪಾದಯಾತ್ರೆ ಹಮ್ಮಿಕೊಂಡಿರುವ ಚಿಕ್ಕಬಳ್ಳಾಪುರ ಹಾಲಿನ ಡೇರಿಯ ಉದ್ಯೋಗಿ ಮಂಜುನಾಥ ಭದ್ರಶೆಟ್ಟಿ ಅವರನ್ನು ಜಿಲ್ಲಾ ಕನ್ನಡ ಸಂಘನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅಭಿಮಾನಪೂರ್ವಕವಾಗಿ ಬರ ಮಾಡಿಕೊಂಡು, ನಿಪ್ಪಾಣಿಯತ್ತ ಬೀಳ್ಕೊಟ್ಟರು.
‘ಆಂಧ್ರದ ಕಾಂಚಿನಪಲ್ಲಿಯಿಂದ ಮಹಾರಾಷ್ಟ್ರದ ಗಡಿಯವರೆಗೆ ಸುಮಾರು 650 ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದೇನೆ. ಗಡಿಯಲ್ಲಿ ಕನ್ನಡ ಉಳಿಯಬೇಕು– ಬೆಳೆಯಬೇಕು ಎಂಬ ಆಶಯ ನನ್ನದು’ ಎಂದು ಮಂಜುನಾಥ ತಿಳಿಸಿದರು.
‘ಕನ್ನಡಿಗರು ಕನ್ನಡಕ್ಕಾಗಿ ದಿಲ್ಲಿಯವರೆಗಲ್ಲ, ಗಲ್ಲಿಗೆ ಹೋಗಲೂ ಸಿದ್ಧರು’, ‘ಕನ್ನಡವೆಂದರೆ ವಿಶ್ವ ಲಿಪಿಗಳ ರಾಣಿ’ ಎಂಬಿತ್ಯಾದಿ ಘೋಷಣೆಗಳುಳ್ಳ ಫಲಕಗಳನ್ನು ಬೆನ್ನಿಗೆ ಕಟ್ಟಿಕೊಂಡು ಅವರು ಬಂದಿದ್ದರು. ಕನ್ನಡ ಬಾವುಟದ ಬಣ್ಣದ ಅಂಗಿ ಹಾಗೂ ಪ್ಯಾಂಟ್ ಧರಿಸಿದ್ದರು. ಕೆಲವು ಕವನಗಳನ್ನು ಕನ್ನಡದಲ್ಲಿ ಅದರಲ್ಲೂ ರಕ್ತದಲ್ಲಿ ಬರೆದಿದ್ದುದನ್ನು ಪ್ರದರ್ಶಿಸಿದರು.
ಶಿಗ್ಗಾಂವಿ ತಾಲೂಕಿನ ಮುಗಳಿ ಗ್ರಾಮದ ಅವರು, ಬಿ.ಇಡಿ. ಪದವೀಧರ. ಸದ್ಯ ಹಾವೇರಿಯ ಜಾನಪದ ವಿಶ್ವವಿದ್ಯಾಲಯದಲ್ಲಿ ಎಂಎ ಓದುತ್ತಿದ್ದಾರೆ. ‘ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ಮತ್ತು ಸರ್ಕಾರಿ ವಲಯದ ನೌಕರಿಯಲ್ಲಿ ಮೊದಲ ಆದ್ಯತೆ ಸಿಗಬೇಕು. ಪ್ರತಿ ತಾಲ್ಲೂಕಿನಲ್ಲಿ ಭುವನೇಶ್ವರಿ ಮಂದಿರ ನಿರ್ಮಿಸಬೇಕು. ನಾಡಿನಲ್ಲಿದ್ದುಕೊಂಡು, ಸೌಲಭ್ಯಗಳನ್ನು ಅನುಭವಿಸಿ ರಾಜ್ಯದ ವಿರುದ್ಧವೇ ಮಾತಾಡುವುದನ್ನು ನಿಲ್ಲಿಸಬೇಕು’ ಎಂದು ಮಂಜುನಾಥ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.