ADVERTISEMENT

ಸದಲಗಾ ಪಟ್ಟಣದ ನೂತನ ಕಟ್ಟಡ ಉದ್ಘಾಟನೆ ಯಾವಾಗ?

₹ 27.20 ಕೋಟಿ ವೆಚ್ಚದಲ್ಲಿ ಕೇಂದ್ರೀಯ ವಿದ್ಯಾಲಯ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 5:47 IST
Last Updated 16 ಜೂನ್ 2025, 5:47 IST
ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದ ಹೊರವಲಯಲದಲ್ಲಿ ₹ 27.20 ಕೋಟಿ ಮೊತ್ತದಲ್ಲಿ ತಲೆ ಎತ್ತಿ ನಿಂತಿರುವ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ
ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದ ಹೊರವಲಯಲದಲ್ಲಿ ₹ 27.20 ಕೋಟಿ ಮೊತ್ತದಲ್ಲಿ ತಲೆ ಎತ್ತಿ ನಿಂತಿರುವ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ   

ಚಿಕ್ಕೋಡಿ: ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ  ತಾಲ್ಲೂಕಿನ ಸದಲಗಾ ಪಟ್ಟಣದ ಹೊರವಲಯದಲ್ಲಿ ₹ 27.20 ಕೋಟಿ ವೆಚ್ಚದಲ್ಲಿ, 8 ಎಕರೆ ಪ್ರದೇಶದಲ್ಲಿ ಕೇಂದ್ರೀಯ ವಿದ್ಯಾಲಯದ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಶೈಕ್ಷಣಿಕ ವರ್ಷ ಪ್ರಾರಂಭವಾದರೂ ಇನ್ನೂ ಕಟ್ಟಡ ಲೋಕಾರ್ಪಣೆಗೊಳ್ಳದಿರುವುದು ಸ್ಥಳೀಯರಿಗೆ ಯಕ್ಷ ಪ್ರಶ್ನೆಯಾಗಿದೆ.

ಸ್ಥಳೀಯ ಶಾಸಕ ಗಣೇಶ ಹುಕ್ಕೇರಿ ಹಾಗೂ ವಾಯವ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಪ್ರಯತ್ನದಿಂದ ಪಟ್ಟಣದಿಂದ 4 ಕಿ.ಮೀ ದೂರದಲ್ಲಿ ತಲೆ ಎತ್ತಿ ನಿಂತಿರುವ ಕೇಂದ್ರೀಯ ವಿದ್ಯಾಲಯದ 3 ಅಂತಸ್ತಿನ ಕಟ್ಟಡದ ಹಲವು ಸೌಲಭ್ಯಗಳನ್ನು ಹೊಂದಿದೆ. 24 ತರಗತಿ ಕೋಣೆಗಳಿದ್ದು, ಕಂಪ್ಯೂಟರ್, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಸೇರಿದಂತೆ ವಿವಿಧ ಸುಸಜ್ಜಿತ ಪ್ರಯೋಗಾಲಯಗಳಿವೆ.

ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯಲ್ಲಿ ಈಗಾಲಗೇ ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಕೇಂದ್ರೀಯ ವಿದ್ಯಾಲಯ ನೂತನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚಿಕ್ಕೋಡಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ನೂರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಹಾಗೇನೇ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ 2021ರಲ್ಲಿ ಸದಲಗಾ ಪಟ್ಟಣದಲ್ಲಿಯೂ ಕೇಂದ್ರೀಯ ವಿದ್ಯಾಲಯ ಮಂಜೂರಾತಿಯಾಗಿದೆ.

ADVERTISEMENT

ಅಷ್ಟೇ ಅಲ್ಲದೇ, 2022ರಲ್ಲಿ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ ಕಾಮಗಾರಿ ಪ್ರಾರಂಭಗೊಂಡಿದ್ದು, ಇದೀಗ ಪೂರ್ಣಗೊಂಡಿದೆ. ವಿದ್ಯಾಲಯ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಆರ್ಟ್ ರೂಮ್, ಇ-ಕ್ಲಾಸ್ ಸೌಲಭ್ಯ ಸೇರಿದಂಥೆ ಹೈಟೆಕ್ ತರಗತಿ ಕೋಣೆಗಳನ್ನು ಹೊಂದಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲಿ ಎಂಬ ಉದ್ದೇಶದಿಂದ ವಿದ್ಯಾಲಯದ ಆವರಣದಲ್ಲಿ 200 ಮೀಟರ್ ಟ್ರ್ಯಾಕ್, ಬಾಸ್ಟೆಕ್ ಬಾಲ್, ವಾಲಿಬಾಲ್, ಖೋ ಖೋ, ಕಬಡ್ಡಿ, ಬ್ಯಾಡ್ಮಿಂಟನ್ ಗ್ರೌಂಡ್ ನಿರ್ಮಿಸಲಾಗಿದೆ.

ಸದಲಗಾ ಪಟ್ಟಣದ ಕೇಂದ್ರೀಯ ವಿದ್ಯಾಲಯ 1- 9ರ ವರೆಗೆ ತರಗತಿಗಳಿದ್ದು, 262 ವಿದ್ಯಾರ್ಥಿಗಳು ಓದುತ್ತಿದ್ದಾರೆ. ವಿದ್ಯಾಲಯದಲ್ಲಿ 24 ಮಂಜೂರಾತಿ ಹುದ್ದೆಗಳ ಪೈಕಿ, ಓರ್ವ ಪ್ರಾಚಾರ್ಯ, 7 ಜನ ಖಾಯಂ ಶಿಕ್ಷಕರಿದ್ದಾರೆ. 8 ಜನ ಶಿಕ್ಷಕರು ಹಾಗೂ 8 ಜನ ಬೋಧಕೇತರ ಸಿಬ್ಬಂದಿ ಸೇವೆಯನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗಿದೆ.

ವಿದ್ಯಾಲಯ ಭದ್ರತೆಗೆ ವಿಶೇಷವಾದ ಪ್ರಾಧಾನ್ಯತೆಯನ್ನು ನೀಡಲಾಗಿದ್ದು, ಸುತ್ತಲೂ ಸುಸಜ್ಜಿತವಾದ ಆವರಣಗೋಡೆ ನಿರ್ಮಿಸಲಾಗಿದೆ. ವಿದ್ಯಾಲಯದ ಆವರಣದಲ್ಲಿ ಸಂಪೂರ್ಣ ಪ್ರದೇಶದಲ್ಲಿ ಸಿಸಿಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೆ ವಿದ್ಯಾಲಯಕ್ಕೆ ಆಗಮಿಸುವ ರಸ್ತೆ ಮಾತ್ರ ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕಾಗಿ ಜನರು ಪರದಾಡಬೇಕಾದ ಪರಿಸ್ಥಿತಿ ಇದೆ. ಅಲ್ಲದೇ, ಪಟ್ಟಣದಿಂದ 4 ಕಿ.ಮೀ ದೂರದಲ್ಲಿ ವಿದ್ಯಾಲಯ ನಿರ್ಮಾಣ ಮಾಡಲಾಗಿದ್ದು, ಇಲ್ಲಿಗೆ ಬರಲು ಹೋಗಲು ಬಸ್ ವ್ಯವಸ್ಥೆ ಇಲ್ಲದಿರುವುದು ಪಾಲಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ತಪ್ಪಿದ್ದಲ್ಲ ಎಂಬುವುದು ಸ್ಥಳೀಯರ ಆರೋಪವಾಗಿದೆ.

8 ಎಕರೆ ಪ್ರದೇಶದಲ್ಲಿ ಕೇಂದ್ರೀಯ ವಿದ್ಯಾಲಯದ ಕಟ್ಟಡ ನಿರ್ಮಾಣ 24 ತರಗತಿ ಕೋಣೆಗಳಿದ್ದು, ಕಂಪ್ಯೂಟರ್, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಸೇರಿ ಸುಸಜ್ಜಿತ ಪ್ರಯೋಗಾಲಯ ಕೇಂದ್ರೀಯ ವಿದ್ಯಾಲಯ 1- 9ರ ವರೆಗೆ ತರಗತಿಗಳಿದ್ದು, 262 ವಿದ್ಯಾರ್ಥಿಗಳು ಅಭ್ಯಾಸ

ಒಂದೇ ತಾಲ್ಲೂಕಿನಲ್ಲಿ ಎರಡು ಕೇಂದ್ರೀಯ ವಿದ್ಯಾಲಯಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದು ಚಿಕ್ಕೋಡಿ ಹಾಗೂ ಸದಲಗಾ ಎರಡೂ ಕಡೆಗೆ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಶೀಘ್ರದಲ್ಲಿಯೇ ಸದಲಗಾ ಪಟ್ಟಣದಲ್ಲಿಯ ಕಟ್ಟಡ ಲೋಕಾರ್ಪಣೆಗೊಳಿಸಲಾಗುವುದು

- ಪ್ರಕಾಶ ಹುಕ್ಕೇರಿ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ

ನಾಲ್ಕು ವರ್ಷಗಳ ಹಿಂದೆ ಸದಲಗಾ ಪಟ್ಟಣದಲ್ಲಿಯೇ ಶಾಲೆಯೊಂದರಲ್ಲಿ ಕೇಂದ್ರೀಯ ವಿದ್ಯಾಲಯದ ತರಗತಿಗಳನ್ನು ನಡೆಸಲಾಗುತ್ತಿದ್ದು ಇದೀಗ ನೂನತ ಕಟ್ಟಡ ನಿರ್ಮಾಣ ಮಾಡಿದ್ದು ಸಂತಸ ತಂದಿದೆ. ಆಧುನಿಕ ಸೌಲಭ್ಯಗಳೊಂದಿಗೆ ಮಕ್ಕಳಿಗೆ ಇನ್ನೂ ಗುಣಮಟ್ಟದ ಶಿಕ್ಷಣ ನೀಡಲಾಗುವುದು

-ಹೇಮಂತಕುಮಾರ ಚವ್ಹಾಣ್ ಪ್ರಾಚಾರ್ಯ ಕೇಂದ್ರೀಯ ವಿದ್ಯಾಲಯ ಸದಲಗಾ

ಸದಲಗಾ ಪಟ್ಟಣದಿಂದ 4 ಕಿ.ಮೀ ದೂರದಲ್ಲಿರುವ ಕೇಂದ್ರೀಯ ವಿದ್ಯಾಲಯದ ರಸ್ತೆ ಕೆಟ್ಟು ಹೋಗಿದೆ. ಸುಸಜ್ಜಿತ ರಸ್ತೆ ನಿರ್ಮಿಸುವುದರೊಂದಿಗೆ ಬಸ್ ಸೌಕರ್ಯವನ್ನೂ ಕೂಡ ಇಲ್ಲಿ ಕಲ್ಪಿಸಿಕೊಟ್ಟಲ್ಲಿ ಮತ್ತಷ್ಟು ಅನುಕೂಲವಾಗುದು

-ಸಂಜಯ ಲಠ್ಠೆ ಅಧ್ಯಕ್ಷರು ಕರವೇ ಘಟಕ ಸದಲಗಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.