ADVERTISEMENT

ಬೆಳಗಾವಿ ಲೋಕಸಭಾ ಕ್ಷೇತ್ರ ಉಪ ಚುನಾವಣೆ| ಟಿಕೆಟ್‌ ಯಾರಿಗೆ? ಇದು ಈಗಿನ ಕುತೂಹಲ

ಉಪ ಚುನಾವಣೆಗೆ ಮುಹೂರ್ತ ನಿಗದಿ: ಗರಿಗೆದರಿಕೆ ಚಟುವಟಿಕೆ

ಎಂ.ಮಹೇಶ
Published 16 ಮಾರ್ಚ್ 2021, 13:22 IST
Last Updated 16 ಮಾರ್ಚ್ 2021, 13:22 IST
ಬೆಳಗಾವಿ ಲೋಕಸಭಾ ಕ್ಷೇತ್ರದ ನಕ್ಷೆ
ಬೆಳಗಾವಿ ಲೋಕಸಭಾ ಕ್ಷೇತ್ರದ ನಕ್ಷೆ   

ಬೆಳಗಾವಿ: ಬಹುನಿರೀಕ್ಷಿತ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಮುಹೂರ್ತ ನಿಗದಿ ಆಗುತ್ತಿದ್ದಂತೆಯೇ, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಪ್ರತಿಷ್ಠೆಯ ಅಖಾಡದಲ್ಲಿ ಟಿಕೆಟ್‌ ಯಾರಿಗೆ ಸಿಗುತ್ತದೆ ಎನ್ನುವ ಕುತೂಹಲ ಉಂಟಾಗಿದ್ದು, ಜಿಲ್ಲೆಯಾದ್ಯಂತ ಸದ್ಯ ಚರ್ಚೆಗೆ ಗ್ರಾಸವಾಗಿರುವ ಪ್ರಮುಖ ವಿಷಯ ಇದಾಗಿದೆ.

ಬಿಜೆಪಿಯ ಹಿರಿಯ ನಾಯಕರಾಗಿದ್ದ ಸುರೇಶ ಅಂಗಡಿ ಅವರು ಸತತ 4ನೇ ಬಾರಿಗೆ ಪ್ರತಿನಿಧಿಸುತ್ತಿದ್ದ ಕ್ಷೇತ್ರವಿದು. ಅವರ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ಎದುರಾಗಿದೆ.

ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳನ್ನು ಇನ್ನೂ ಘೋಷಿಸಿಲ್ಲ. ಎರಡೂ ಪಕ್ಷಗಳ ವರಿಷ್ಠರು ಚುನಾವಣಾ ದಿನಾಂಕ ಘೋಷಣೆಗಾಗಿ ಕಾದಿದ್ದರು. ಈಗ, ಪ್ರಕಟವಾಗಿರುವುದರಿಂದ ಇನ್ಮುಂದೆ ಚಟುವಟಿಕೆಗಳು ಬಿರುಸು ಪಡೆಯಲಿವೆ. ಪ್ರತಿಷ್ಠೆಯ ಕಣವಾಗಿರುವ ಈ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಹಾಗೂ ಕಸಿದುಕೊಳ್ಳಲು ಕಾಂಗ್ರೆಸ್‌ ನಡುವೆ ಹಣಾಹಣಿ ಕಂಡುಬರುವ ಸಾಧ್ಯತೆಗಳು ನಿಚ್ಚಳವಾಗಿವೆ.

ADVERTISEMENT

ಬಿಜೆಪಿಯಲ್ಲಿ:

ಅಂಗಡಿ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಅವರ ಬಂಧುಗಳು, ಅಭಿಮಾನಿಗಳು ಹಾಗೂ ಪಕ್ಷದ ಒಂದು ವರ್ಗ ವರಿಷ್ಠರನ್ನು ಒತ್ತಾಯಿಸಿದೆ. ಇನ್ನೊಂದೆಡೆ, ಹೊಸ ಮುಖಗಳಿಗೆ ಅವಕಾಶ ಕೊಡಬೇಕು ಎಂಬ ಆಗ್ರಹವೂ ಇದೆ. ಪಕ್ಷದ ಭದ್ರಕೋಟೆ ಇದಾಗಿರುವುದರಿಂದ ‘ಅಚ್ಚರಿಯ ಪ್ರಯೋಗ’ಕ್ಕೂ ಈ ಉಪ ಚುನಾವಣೆ ಬಳಸಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ಬಿಜೆಪಿ ವಲಯದಲ್ಲಿ ಚರ್ಚೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ದಿವಂಗತ ಸುರೇಶ ಅಂಗಡಿ ಪುತ್ರಿ ಹಾಗೂ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರ ಸೊಸೆಯೂ ಆಗಿರುವ ಶ್ರದ್ಧಾ ಶೆಟ್ಟರ್, ರಾಜ್ಯಸಭಾ ಮಾಜಿ ಸದಸ್ಯರೂ ಆಗಿರುವ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಶಂಕರಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ, ಮಾಜಿ ಸಂಸದ ಅಮರಸಿಂಹ ಪಾಟೀಲ, ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ‍ಪಾಟೀಲ, ಡಾ.ಗಿರೀಶ ಸೋನವಾಲ್ಕರ್, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಪಕ್ಷದ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ, ಡಾ.ರವಿ ಬಿ.ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ದೇಶಪಾಂಡೆ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಿರ್ದೇಶಕಿ ದೀಪಾ ಕುಡಚಿ, ವೈದ್ಯೆ ಡಾ.ಸೋನಾಲಿ ಸರ್ನೋಬತ್‌ ಮೊದಲಾದವರು ಆಕಾಂಕ್ಷಿಗಳಾಗಿದ್ದಾರೆ. ಟಿಕೆಟ್‌ಗಾಗಿ ಲಾಬಿಯಲ್ಲಿ ತೊಡಿದ್ದಾರೆ.

‘ಬಿಜೆಪಿ ಟಿಕೆಟ್‌ ನೀಡಿಕೆ ವಿಷಯದಲ್ಲಿ, ಪಕ್ಷದಿಂದ ಅಚ್ಚರಿಯ ತೀರ್ಮಾನದ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ’ ಎಂದು ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ನಲ್ಲಿ:

ಕಾಂಗ್ರೆಸ್‌ ಪಾಳಯದಲ್ಲಿ ಸಮರ್ಥ ಹಾಗೂ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ. ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರನ್ನು ಅಭ್ಯರ್ಥಿ ಮಾಡಬೇಕು ಎಂಬ ಒತ್ತಾಯ ಆ ಪಕ್ಷದಲ್ಲಿದೆ. ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಕೆಪಿಸಿಸಿ ವಕ್ತಾರೆಯೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ ತಮ್ಮ ಸಹೋದರ ಚನ್ನರಾಜ ಹಟ್ಟಿಹೊಳಿ ಅವರಿಗೆ ಟಿಕೆಟ್‌ ಕೊಡಿಸಲು ಕಸರತ್ತು ನಡೆಸಿದ್ದಾರೆ. ಚಿಕ್ಕೋಡಿ ಕ್ಷೇತ್ರದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಕೂಡ ಕಣ್ಣಿಟ್ಟಿದ್ದಾರೆ. ರಾಮದುರ್ಗದ ಮಾಜಿ ಶಾಸಕ, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಪ್ತ ಅಶೋಕ ಪಟ್ಟಣ ಹೆಸರು ಕೇಳಿಬಂದಿದೆ. ಅವರು ‘ನನಗೆ ಮನಸ್ಸಿಲ್ಲ’ ಎಂದು ತಿಳಿಸಿದ್ದರು.

ಇಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲವಾದ್ದರಿಂದ ಅಭ್ಯರ್ಥಿ ಕಣಕ್ಕಿಳಿಸುವುದು ಅನುಮಾನ ಎನ್ನುವಂತಹ ಪರಿಸ್ಥಿತಿ ಇದೆ ಎನ್ನಲಾಗುತ್ತಿದೆ.

***

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಪಕ್ಷದಿಂದ ಪೂರ್ವ ಸಿದ್ಧತೆ ಮಾಡಿಕೊಂಡಿದ್ದೇವೆ. ಕಾಂಗ್ರೆಸ್‌ ಟಿಕೆಟ್‌ಗಾಗಿ ಮೂರು ಹೆಸರುಗಳನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿದೆ

- ಸತೀಶ ಜಾರಕಿಹೊಳಿ, ಶಾಸಕ

***

ಉಪ ಚುನಾವಣೆಗೆ ಬೇಕಾದ ಪೂರ್ವ ಸಿದ್ಧತೆ ಮಾಡಿಕೊಂಡಿದ್ದೇವೆ. ವಿವಿಧ ಮೋರ್ಚಾಗಳ ಒಂದು ಸುತ್ತಿನ ಸಭೆ ನಡೆಸಿದ್ದೇವೆ. ಪಕ್ಷ ಯಾರಿಗೆ ಟಿಕೆಟ್‌ ನೀಡುತ್ತದೆಯೋ ಅವರ ಪರವಾಗಿ ಕೆಲಸ ಮಾಡುತ್ತೇವೆ

- ಸಂಜಯ ಪಾಟೀಲ,ಅಧ್ಯಕ್ಷ, ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.