ADVERTISEMENT

ಹಾಸಿಗೆಗಳ ‘ಪಾಲು’ ಪಡೆಯದ ಜಿಲ್ಲಾಡಳಿತ

ಖಾಸಗಿ ಆಸ್ಪತ್ರೆಗಳ ಪ್ರಭಾವದ ಮುಂದೆ ಮಂಕಾದ ಆದೇಶ

ಎಂ.ಮಹೇಶ
Published 19 ಮೇ 2021, 13:56 IST
Last Updated 19 ಮೇ 2021, 13:56 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬೆಳಗಾವಿ: ಖಾಸಗಿ ಆಸ್ಪತ್ರೆಗಳ ಪ್ರಭಾವದ ಮುಂದೆ ಸರ್ಕಾರದ ಆದೇಶ ಮಂಕಾಯಿತೆ, ಕಾನೂನು ಲೆಕ್ಕಕ್ಕೆ ಬಾರದಂತಾಗಿದೆಯೇ?

– ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಆದೇಶ ಪ್ರಕಾರ, ಶೇ 50ರಷ್ಟು ಹಾಸಿಗೆಗಳನ್ನು ಪಡೆಯದಿರುವ ಜಿಲ್ಲಾಡಳಿತದ ಕ್ರಮ ಇಂತಹ ಪ್ರಶ್ನೆಗಳು ಮೂಡುವುದಕ್ಕೆ ಕಾರಣವಾಗಿದೆ.

ಆಯುಷ್ಮಾನ್-ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟಾರೆ 3,925 ಹಾಸಿಗೆಗಳು ಲಭ್ಯವಿದ್ದು, ಇದರ ಶೇ.50ರಷ್ಟನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾಡಳಿತದ ಸುಪರ್ದಿಗೆ ನೀಡಬೇಕು. ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ಹಾಸಿಗೆಗಳಲ್ಲಿ 2ಸಾವಿರ ಹಾಸಿಗೆಗಳನ್ನು ಬಿಟ್ಟಿಕೊಡಬೇಕು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿ ವಾರಗಳೇ ಕಳೆಯುತ್ತಿವೆ. ಆದರೆ, ಈ ನಿಟ್ಟಿನಲ್ಲಿ ಅನುಷ್ಠಾನಕ್ಕೆ ಕ್ರಮವೇ ಆಗದಿರುವುದು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಡುತ್ತಿದೆ.

ADVERTISEMENT

ಮೃದು ಧೋರಣೆ ಏಕೆ?

ಈಗಿನ ಸಂಕಷ್ಟದ ಹಾಗೂ ತುರ್ತಾಗಿ ಕ್ರಮವಾಗಬೇಕಾದ ಸಂದರ್ಭದಲ್ಲೂ ಜಿಲ್ಲಾಡಳಿತವು ಖಾಸಗಿ ಆಸ್ಪತ್ರೆಗಳ ವಿಷಯದಲ್ಲಿ ಮೃದು ಧೋರಣೆ ತಳೆದಿರುವುದು ಅಚ್ಚರಿ ಮೂಡಿಸಿದೆ. ಆಡಳಿತಾರೂಢ ಪಕ್ಷದ ಜನಪ್ರತಿನಿಧಿಗಳು ಕೂಡ ಈ ವಿಷಯದಲ್ಲಿ ಚಕಾರ ಎತ್ತುತ್ತಿಲ್ಲ.

ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸಹಿತ ಹಾಸಿಗೆಗಳು ಭರ್ತಿಯಾಗಿವೆ. ಹಾಸಿಗೆ ಕೋರಿ ಬರುವವರಿಗೆ ಕಾಯುವಂತೆ ಮಾಡುವ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ಘಟನೆಗಳು ವರದಿ ಆಗುತ್ತಲೇ ಇವೆ. ಆದರೂ ನಿಯಮಾನುಸಾರ ತನ್ನ ಪಾಲಿನ ಹಾಸಿಗೆಗಳನ್ನು ಪಡೆದುಕೊಂಡು ತುರ್ತು ಅಗತ್ಯವಿರುವ ಬಡ ಹಾಗೂ ಮಧ್ಯಮ ವರ್ಗದವರಿಗೆ ಕಲ್ಪಿಸಿಕೊಡುವ ಕೆಲಸವನ್ನು ಜಿಲ್ಲಾಡಳಿತ ಇನ್ನೂ ಮಾಡಿಲ್ಲ.

ಕಿಮ್ಮತ್ತು ಕೊಟ್ಟಿಲ್ಲ

ಪ್ರಸ್ತುತ 1,517 ಖಾಸಗಿ ಆಸ್ಪತ್ರೆಗಳು ಇಲಾಖೆಯ ನಿಯಮಗಳ ಪ್ರಕಾರ ಅಂದರೆಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ (ಕೆಪಿಎಂಇ) ನೋಂದಣಿಯಾಗಿವೆ. ಅವುಗಳಲ್ಲಿ 3,925 ಹಾಸಿಗೆಗಳಿವೆ ಎಂದು ಗುರುತಿಸಲಾಗಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಈವರೆಗೆ 641 ಹಾಸಿಗೆಗಳನ್ನು ಮಾತ್ರ ಮೀಸಲಿಡಲಾಗಿದೆ. ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಮುಂದಿನ ವಾರದೊಳಗೆ ಉಳಿದವನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟು ಜಿಲ್ಲಾಡಳಿತಕ್ಕೆ ಒದಗಿಸಬೇಕು ಎಂಬ ಹಿಂದಿನ ಜಿಲ್ಲಾಧಿಕಾರಿ ಡಾ.ಕೆ. ಹರೀಶ್‌ಕುಮಾರ್‌ ಅವರು ನೀಡಿದ್ದ ಕಟ್ಟುನಿಟ್ಟಿನ ಸೂಚನೆಗೂ ಕವಡಡೆ ಕಾಸಿನ ಕಿಮ್ಮತ್ತು ದೊರೆತಿಲ್ಲ.

‘ಕೊರೊನಾ ದಿನ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಎಲ್ಲ ಖಾಸಗಿ ಆಸ್ಪತ್ರೆಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜೊತೆ ಆನ್‌ಲೈನಲ್ಲಿ ನೋಂದಣಿ ಮಾಡಿಕೊಳ್ಳಬೇಕು’ ಎಂಬ ಆದೇಶಕ್ಕೂ ನಿರೀಕ್ಷಿತ ಮನ್ನಣೆ ದೊರೆತಿಲ್ಲ.

‘ಖಾಸಗಿ ಆಸ್ಪತ್ರೆಗಳವರು ತಮ್ಮ ಪ್ರಭಾವ ಬಳಸಿ ನಮ್ಮ ಕೈಕಟ್ಟಿ ಹಾಕುತ್ತಿದ್ದಾರೆ. ಎಲ್ಲ ಆಸ್ಪತ್ರೆಗಳಿಂದಲೂ ಶೇ 50ರಷ್ಟು ಹಾಸಿಗೆಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಆಗದಿರುವುದು ನಿಜ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಡಿಎಚ್‌ಒ ಹಾಗೂ ಜಿಲ್ಲಾಧಿಕಾರಿ ಕರೆ ಸ್ವೀಕರಿಸಲಿಲ್ಲ.

*
ಖಾಸಗಿ ಆಸ್ಪತ್ರೆಗಳಿಂದ ಶೇ 50ರಷ್ಟು ಹಾಸಿಗೆಗಳನ್ನು ಜಿಲ್ಲಾಡಳಿತದ ಸುಪರ್ದಿಗೆ ಪಡೆದುಕೊಳ್ಳುವಂತೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲೂ ಕೋವಿಡ್‌ ಬಾಧಿತರಿಗೆ ಹಾಸಿಗೆಗಳನ್ನು ಹಚ್ಚಿಸುವಂತೆ ಸೂಚಿಸಿದ್ದೇನೆ.
-ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ

*
ಖಾಸಗಿ ಆಸ್ಪತ್ರೆಗಳಲ್ಲಿ ನಿಯಮಾವಳಿಯಂತೆ ಹಾಸಿಗೆಗಳನ್ನು ಪಡೆದುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಮಗೆ ಸಂಪರ್ಕದಲ್ಲಿರುವ ಆಸ್ಪತ್ರೆಗಳವರೊಂದಿಗೆ ನಾವೂ ಚರ್ಚಿಸುತ್ತೇವೆ.
-ಎಂ.ಬಿ. ಝಿರಲಿ, ವಕ್ತಾರ, ರಾಜ್ಯ ಘಟಕ, ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.