ADVERTISEMENT

ಅಂತ್ಯಕ್ರಿಯೆಗೆ ಸಿದ್ಧತೆ ಮಾಡುತ್ತಿದ್ದಾಗ ಕಣ್ಬಿಟ್ಟ ಮಹಿಳೆ!

ತಾಲ್ಲೂಕಿನ ಮುಚ್ಚಂಡಿಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 15:26 IST
Last Updated 9 ಜನವರಿ 2020, 15:26 IST

ಬೆಳಗಾವಿ: ಮೃತ‍ಪಟ್ಟರೆಂದು ಭಾವಿಸಿ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಮಹಿಳೆಗೆ ಪ್ರಜ್ಞೆ ಬಂದ ಘಟನೆ ತಾಲ್ಲೂಕಿನ ಮುಚ್ಚಂಡಿ ಗ್ರಾಮದಲ್ಲಿ ನಡೆದಿದೆ.

ಮಾಲು ಯಲ್ಲಪ್ಪ ಚೌಗಲೆ (55) ಸಾವಿನ ಕದ ತಟ್ಟಿ ಬಂದವರು. ವಿಪರೀತ ತಲೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ಮಂಗಳವಾರ ದಾಖಲಿಸಲಾಗಿತ್ತು. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರು. ಆದರೆ, ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಹಾಗೂ ಪ್ರಜ್ಞೆ ಇರಲಿಲ್ಲವಾದ್ದರಿಂದ ಕುಟುಂಬದವರು ಮಾಲು ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಸಾವಿಗೀಡಾದರೆಂದು ತಿಳಿದು ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು. ಸಂಬಂಧಿಕರು ಮತ್ತು ಆಪ್ತರಿಗೆ ಅಂತ್ಯಕ್ರಿಯೆಯ ವಿಷಯ ಮಟ್ಟಿಸಿದ್ದರು. ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಹೋಗಿದ್ದ ಗ್ರಾಮದ ಕೆಲವರು ಪ್ರವಾಸ ಮೊಟಕುಗೊಳಿಸಿ ವಾಪಸಾಗಿದ್ದರು. ಈ ನಡುವೆ, ಮಹಿಳೆಗೆ ಪ್ರಜ್ಞೆ ಬಂದಿದ್ದರಿಂದ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

ವಿಷಯ ತಿಳಿದ ಗ್ರಾಮಸ್ಥರು ‘ಇದೊಂದು ಪವಾಡ’ ಎಂದು ಹಬ್ಬಿಸಿದ್ದಾರೆ. ಹೀಗಾಗಿ, ಸುತ್ತಮುತ್ತಲ ಗ್ರಾಮಗಳ ಜನರು ಮಹಿಳೆಯನ್ನು ನೋಡಲು ಗುರುವಾರ ಬಂದಿದ್ದರು.‌

ADVERTISEMENT

ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಡುತ್ತಿದ್ದಂತೆಯೇ ಆಸ್ಪತ್ರೆಯವರು ಸ್ಪಷ್ಟನೆ ನೀಡಿದ್ದಾರೆ. ‘ಮಿದುಳು ಜ್ವರ ಹಾಗೂ ಫಿಟ್ಸ್‌ ಸಮಸ್ಯೆ ಎಂದು ಕರೆತಂದಾಗ ಮಹಿಳೆಗೆ ಪ್ರಜ್ಞೆ ಇರಲಿಲ್ಲ. ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ಮುಂದುವರಿಸಿದ್ದೆವು. ರೋಗಿಯ ಸ್ಥಿತಿಯನ್ನು ಕುಟುಂಬದವರಿಗೆ ವಿವರಿಸಿದ್ದೆವು. ಆದರೆ, ಪುತ್ರ ಸೇರಿದಂತೆ ಕುಟುಂಬದವರು ವೈದ್ಯಕೀಯ ಸಲಹೆಗೆ ವಿರುದ್ಧವಾಗಿ ಬಿಡುಗಡೆ ಮಾಡಿಸಿಕೊಂಡು ಹೋಗಿದ್ದರು. ಮುಂದಿನ ಘಟನೆಗಳಿಗೆ ಆಸ್ಪತ್ರೆಯವರು ಜವಾಬ್ದಾರಿಯಲ್ಲ ಎಂದು ಬರೆದುಕೊಟ್ಟಿದ್ದರು. ಮಹಿಳೆ ಮೃತಪಟ್ಟಿದ್ದಾರೆ ಎಂದು ನಾವು ಘೋಷಿಸಿರಲಿಲ್ಲ ಅಥವಾ ಮರಣ ಪ್ರಮಾಣಪತ್ರ ನೀಡಿರಲಿಲ್ಲ’ ಎಂದು ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.