ADVERTISEMENT

ಬೆಳಗಾವಿ: ಕೃಷಿಯಲ್ಲಿ ಮಹಿಳೆಯರ ಪಾತ್ರ ಅನನ್ಯ

ಮತ್ತಿಕೊಪ್ಪ ಕೆವಿಕೆಯಲ್ಲಿ ರೈತ ಮಹಿಳಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 13:46 IST
Last Updated 15 ಅಕ್ಟೋಬರ್ 2020, 13:46 IST
ಮತ್ತಿಕೊಪ್ಪದಲ್ಲಿ ಗುರುವಾರ ನಡೆದ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಸಾಧನೆ ತೋರಿದ ಅಕ್ಕತಂಗೇರಹಾಳದ ಮಹಾದೇವಿ ಪಾಟೀಲ ಮತ್ತು ಕಿಟದಾಳದ ಶಾಂತಾ ಕಮ್ಮಾರ ಅವರನ್ನು ಗೌರವಿಸಲಾಯಿತು
ಮತ್ತಿಕೊಪ್ಪದಲ್ಲಿ ಗುರುವಾರ ನಡೆದ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಸಾಧನೆ ತೋರಿದ ಅಕ್ಕತಂಗೇರಹಾಳದ ಮಹಾದೇವಿ ಪಾಟೀಲ ಮತ್ತು ಕಿಟದಾಳದ ಶಾಂತಾ ಕಮ್ಮಾರ ಅವರನ್ನು ಗೌರವಿಸಲಾಯಿತು   

ಬೆಳಗಾವಿ: ‘ಕೃಷಿಯಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದೆ. ಆದರೆ, ಅವರಿಗೆ ಪುರುಷರಿಗೆ ಸಿಗುವಷ್ಟು ಆದ್ಯತೆ ದೊರೆಯುತ್ತಿಲ್ಲ’ ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಎಚ್‌.ಡಿ. ಕೊಳೇಕರ ಹೇಳಿದರು.

ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆಯರು ಜಮೀನಿನಲ್ಲಿ ಎಲ್ಲ ಕೆಲಸಗಳನ್ನೂ ಮಾಡುತ್ತಾರೆ. ಪುರುಷರಿಗೆ ಸಮನಾಗಿ ದುಡಿಯುವವರು ಬಹಳಷ್ಟಿದ್ದಾರೆ. ಯಾವುದೇ ಧಾನ್ಯಗಳ ತಳಿಗಳನ್ನು ಅತಿ ವಿಶಿಷ್ಟವಾಗಿ ಸಂರಕ್ಷಿಸುವ ಜಾಣ್ಮೆ ಹೆಣ್ಣಿನಲ್ಲಿರುತ್ತದೆ. ಬೀಜವನ್ನು ತುದಿಬೆರಳಿನಿಂದ ಸಾಲುಗಳನ್ನು ನಿರ್ಮಿಸಿ ಬಿತ್ತುವ ಕಲೆಯೂ ಅವರಿಗೆ ತಿಳಿದಿದೆ. ಕಳೆ ನಿರ್ವಹಣೆಯಲ್ಲಿ ಹೆಚ್ಚಿನ ಪಾತ್ರ ಅವರದೆ. ಶ್ರಮದಲ್ಲಿ ವ್ಯತ್ಯಾಸವಿಲ್ಲದಿದ್ದರೂ ಸಂಬಳದಲ್ಲಿ ವ್ಯತ್ಯಾಸವಿದೆ. ಯಾವುದೇ ಕೆಲಸ ಕೊಟ್ಟರೂ ನೈಪುಣ್ಯದಿಂದ ಮತ್ತು ಶ್ರದ್ಧೆಯಿಂದ ನಿರ್ವಹಿಸುತ್ತಾರೆ. ಆದರೆ, ಅವರು ಬೆಳಕಿಗೆ ಬರುತ್ತಿರುವುದು ಕಡಿಮೆ’ ಎಂದು ವಿಷಾದಿಸಿದರು.

ADVERTISEMENT

ಹೆಚ್ಚಿನ ಜವಾಬ್ದಾರಿಯಿಂದ:‘ರೈತ ಮಹಿಳೆಯರು ಆದಾಯ ಹೆಚ್ಚಿಸಿಕೊಳ್ಳಲು ಸ್ವ-ಸಹಾಯ ಸಂಘಗಳು ಸಹಾಯಕಾರಿಯಾಗಿವೆ’ ಎಂದು ತಿಳಿಸಿದರು.

ಕೇಂದ್ರದ ಮುಖ್ಯಸ್ಥೆ ಶ್ರೀದೇವಿ ಮಾತನಾಡಿ, ‘ಮಹಿಳೆಯರು ಬಿತ್ತನೆಯಿಂದ ಫಸಲು ಒಕ್ಕಣೆವರೆಗೂ ವಿವಿಧ ಹಂತಗಳಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಉತ್ಪನ್ನಗಳನ್ನು ನೇರವಾಗಿ ಮಾರದೆ ಮೌಲ್ಯವರ್ಧನೆ ಮಾಡಿ ಹೆಚ್ಚಿನ ಆದಾಯ ಗಳಿಸುವುದು ಅವಶ್ಯವಾಗಿದೆ’ ಎಂದು ತಿಳಿಸಿದರು.

‘ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಬೇಕಾಗುವ ತರಬೇತಿಗಳನ್ನು ಕೃಷಿ ವಿಜ್ಞಾನ ಕೇಂದ್ರವು ನೀಡುತ್ತಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವಿವಿಧ ಸ್ಪರ್ಧೆ:ರಂಗೋಲಿ ಸ್ಪರ್ಧೆಯಲ್ಲಿ ಸರಸ್ವತಿ ಸೂರ್ಯವಂಶಿ, ಕವಿತಾ ಮಿಡಕನಟ್ಟಿ ಹಾಗೂ ಶೀದೇವಿ ಕ್ರಮವಾಗಿ ಮೊದಲ ಮೂರು ಬಹುಮಾನ ಗಳಿಸಿದರು. ಪೌಷ್ಟಿಕ ಆಹಾರ ತಯಾರಿಕೆಯಲ್ಲಿ ಸರೋಜಾ ಲಗಮನ್ನವರ. ಜುಬೇದಾ ಜಿಡ್ಡಿಮನಿ ಮತ್ತು ಶಿವಲೀಲಾ ಮೊದಲ ಮೂರು ಸ್ಥಾನಗಳನ್ನು ಪಡೆದರು.

ಬಿ.ಎಂ. ಕಂಕಣವಾಡಿ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ.ಅಶೋಕ ಪಾಟೀಲ, ‘ಕೊರೊನಾ ಹರಡದಂತೆ ಮುಂಜಾಗ್ರತೆ ವಹಿಸಬೇಕು. ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಸಹ ಪ್ರಾಧ್ಯಾಪಕ ಡಾ.ಸಂಜಯ ಮಾತನಾಡಿ, ‘ಮಹಿಳೆಯರು ಮನೆಯಲ್ಲಿ ಪೋಷಕಾಂಶವಿರುವ ಆಹಾರ ಪದಾರ್ಥವನ್ನು ತಯಾರಿಸಬೇಕು ಮತ್ತು ಸೇವಿಸಬೇಕು. ಇದರಿಂದ ಮಧುಮೇಹ, ರಕ್ತದೊತ್ತಡ, ಥೈರಾಯಿಡ್ ಸಮಸ್ಯೆಗಳಿಂದ ದೂರವಿರಬಹುದು’ ಎಂದು ಹೇಳಿದರು.

ಕೃಷಿಯಲ್ಲಿ ಸಾಧನೆ ತೋರಿದ ಅಕ್ಕತಂಗೇರಹಾಳದ ಮಹಾದೇವಿ ಪಾಟೀಲ ಮತ್ತು ಕಿಟದಾಳದ ಶಾಂತಾ ಕಮ್ಮಾರ ಅವರನ್ನು ಗೌರವಿಸಲಾಯಿತು. ಭಾಗ್ಯಶ್ರೀ ಸ. ಅಕ್ಕಿ ಸಿರಿಧಾನ್ಯಗಳಿಂದ ಖಾದ್ಯಗಳ ತಯಾರಿಕೆ ಪಾತ್ಯಕ್ಷಿಕೆ ನೀಡಿದರು.

ತಾಲ್ಲೂಕು ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಬಸವರಾಜ ಬೀರುಕಲ್ ನಿರೂಪಿಸಿದರು. ಉಮೇಶ ಯರಗಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.