ADVERTISEMENT

ದುಡಿದರೆ ಕೈಲಾಸ ಸೃಷ್ಟಿಸಬಹುದು

ಪ್ರವಚನ ಕಾರ್ಯಕ್ರಮದಲ್ಲಿ ಸಿದ್ಧೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 13:03 IST
Last Updated 4 ಜನವರಿ 2021, 13:03 IST
ತೆಲಸಂಗದ ಹನುಮಾನ ದೇವಸ್ಥಾನದ ಉದ್ಘಾಟನೆ ನಿಮಿತ್ತ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು
ತೆಲಸಂಗದ ಹನುಮಾನ ದೇವಸ್ಥಾನದ ಉದ್ಘಾಟನೆ ನಿಮಿತ್ತ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು   

ತೆಲಸಂಗ: ‘ಮಾಡುವ ಕಾರ್ಯ, ಹೇಳುವ ಮಾತು ಸ್ವಚ್ಛವಾಗಿರಬೇಕು. ದೇವರು ಕೊಟ್ಟ ಕೈಗಳಿಗೆ ಭೂಮಿಯಲ್ಲಿನ ಸಂಪತ್ತು ತೆಗೆಯುವ ಸಾಮರ್ಥ್ಯವಿದೆ. ಸ್ವಾಭಿಮಾನಿ ರೈತ ಯಾರ ಮುಂದೆಯೂ ಕೈ ಒಡ್ಡಬಾರದು. ಕೆಟ್ಟದ್ದನ್ನು ತ್ಯಜಿಸಿ ಮೈಮುರಿದು ದುಡಿದರೆ ಕೈಲಾಸ ಸೃಷ್ಟಿಯಾಗುತ್ತದೆ’ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಗ್ರಾಮದ ಹನುಮಾನ ದೇವಸ್ಥಾನದ ಉದ್ಘಾಟನೆ ನಿಮಿತ್ತ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.

‘ಸುಂದರವಾದ ಭರತ ಖಂಡದಲ್ಲಿ ಭಗವಂತ ಎಲ್ಲವನ್ನೂ ನೀಡಿದ್ದಾನೆ. ಹೇಗೆ ಸಂತೋಷದಿಂದ ಬದುಕಬೇಕು ಎನ್ನುವುದನ್ನು ಪ್ರಕೃತಿಯನ್ನು ನೋಡಿ ನಾವು ಕಲಿಯಬೇಕು. ಕೈ, ಕಾಲು, ದೇಹವನ್ನು ನೀಡಿರುವ ದೇವರು ಧರ್ಮದಿಂದ ಬದುಕುವ ಮಾರ್ಗವನ್ನು ತೋರಿಸಿದ್ದಾನೆ. ಆ ಕೈ, ಕಾಲು, ಮನಸ್ಸು ಹೊಲಸಾಗದಂತೆ ನೋಡಿಕೊಳ್ಳಬೇಕು. ಬಹಿರಂಗ ಶುದ್ಧವಿದ್ದರೆ ಸಾಲದು. ಅಂತರಂಗದಲ್ಲೂ ಶುದ್ಧವಾಗಿರಬೇಕು’ ಎಂದರು.

ADVERTISEMENT

‘ಹಳ್ಳಿಗರು ಸ್ವಚ್ಛ ಮನಸ್ಸಿನವರು. ಶುದ್ಧ ಜೀವನ ನಡೆಸುವವರು. ದೇವಸ್ಥಾನ ನಿರ್ಮಿಸಿದರೆ ಸಾಲದು. ನಮ್ಮ ನಡೆ–ನುಡಿ ಸರಿ ಇರಬೇಕು. ಆಗ, ಇಲ್ಲಿನ ಹನುಮ ದೇವರು ತೃಪ್ತನಾಗುತ್ತಾನೆ. ಮನೆಗಳೆಲ್ಲ ರಾಮನ ಮನೆಗಳಾಗುತ್ತವೆ. ಊರು ಅಯೋಧ್ಯೆ ಆಗುತ್ತದೆ. ಒಳ್ಳೆಯ ಜೀವನ ನಡೆಸುವ ಮೂಲಕ ಸದಾ ಹನುಮಂತನು ದೇವಸ್ಥಾನದಲ್ಲಿ ನೆಲೆಸಿರುವಂತೆ ನೋಡಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಹಂಚಿಕೊಂಡು ತಿನ್ನುವುದಕ್ಕಾಗಿಯೇ ದೇವರು ಬದುಕು ಮತ್ತು ಭೂಮಿ ಕೊಟ್ಟಿದ್ದಾನೆ. ದುರಾಸೆಗೆ ಒಳಗಾಗಿ ಪರಸ್ಪರ ಕಿಚ್ಚು ಹಚ್ಚುವ ಕೆಲಸವನ್ನೂ ಯಾರೂ ಮಾಡಬಾರದು. ಯುವಕರು ಶಕ್ತಿ ಸಾಧನೆ ಮಾಡಬೇಕು. ತಲೆಯಲ್ಲಿ ವಿದ್ಯೆ ಇರಬೇಕು. ಮಾತಿನಲ್ಲಿ ಸವಿ ಇರಬೇಕು. ಮೈಯ್ಯಲ್ಲಿ ಶಕ್ತಿ ಇರಬೇಕು. ಇರುವುದೆಲ್ಲ ಒಳ್ಳೆತನಕ್ಕೆ ಖರ್ಚಾಗಬೇಕು’ ಎಂದು ತಿಳಿಸಿದರು.

ಹಿರೇಮಠದ ವೀರೇಶ್ವರ ದೇವರು ಮಾತನಾಡಿ, ‘ಜಗತ್ತು ಕೆಟ್ಟಿದೆ ಎಂದು ಹೇಳುವ ಬದಲು ನಮ್ಮನ್ನು ನಾವು ಸರಿಪಡಿಸಿಕೊಳ್ಳೋಣ’ ಎಂದರು.

ಕುಂಬಾರ ಗುರುಪೀಠದ ಬಸವಗುಂಡಯ್ಯ ಸ್ವಾಮೀಜಿ, ಆತ್ಮಾರಾಮ ಸ್ವಾಮೀಜಿ, ಹೊನವಾಡದ ಬಾಬುರಾವ ಮಹಾರಾಜ, ಶಂಕರಾನಂದ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.