ADVERTISEMENT

ದುಡಿಮೆಯಿಂದ ಆರೋಗ್ಯ ವೃದ್ಧಿ: ಅಥಣಿ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 7:02 IST
Last Updated 9 ಜನವರಿ 2021, 7:02 IST
ತೆಲಸಂಗ ಗ್ರಾಮದಲ್ಲಿ ಹನುಮಾನ ದೇವರ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ ಮತ್ತು  ಕಳಸಾರೋಹಣ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಶ್ರೀಗಳು ಉದ್ಘಾಟಿಸಿದರು
ತೆಲಸಂಗ ಗ್ರಾಮದಲ್ಲಿ ಹನುಮಾನ ದೇವರ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ ಮತ್ತು  ಕಳಸಾರೋಹಣ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಶ್ರೀಗಳು ಉದ್ಘಾಟಿಸಿದರು   

ತೆಲಸಂಗ: ‘ಮೈಮುರಿದು ದುಡಿಯಬೇಕು. ಅದರಲ್ಲಿ ಕ್ರಮ, ನಿಯಮ, ವಿವೇಚನೆ ಮತ್ತು ದಕ್ಷತೆ ಇರಬೇಕು. ದುಡಿಮೆಯು ನಮ್ಮನ್ನು ಮೂರು ಅನಾಹುತಗಳಾದ ಆಲಸ್ಯ, ದುಷ್ಟನಡತೆ ಮತ್ತು ಬಡತನದಿಂದ ರಕ್ಷಿಸುತ್ತದೆ’ ಎಂದು ಅಥಣಿ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಹೇಳಿದರು.

ಗ್ರಾಮದ ಹನುಮಾನ್ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ನಿಮಿತ್ತ ಶುಕ್ರವಾರ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

‘ಯಾವ ವ್ಯಕ್ತಿ ಕಾಯಕ ಮಾಡಿ ಬದುಕುತ್ತಾನೆಯೋ ಅವನನ್ನು ಭಗವಂತ ರಕ್ಷಣೆ ಮಾಡುತ್ತಾನೆ. ಅಂತರಂಗ ಮತ್ತು ಬಹಿರಂಗ ಶುದ್ಧಿ ಮಾಡಿಕೊಳ್ಳುವುದು ಕಾಯಕದಿಂದ ಮಾತ್ರ ಸಾಧ್ಯ. ಉಪವಾಸ ವ್ರತ ಮಾಡಿ ದೇಹವನ್ನು ದಂಡಿಸುವ ಬದಲು ದೇಹವನ್ನು ದುಡಿಮೆಗೆ ತೊಡಗಿಸಿದರೆ ದೇವರು ಒಳ್ಳೆಯ ಆರೋಗ್ಯ ಕೊಡುತ್ತಾನೆ’ ಎಂದು ತಿಳಿಸಿದರು.

ADVERTISEMENT

ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ, ‘ಮನುಷ್ಯರನ್ನು ನಂಬಿ ಬೀದಿಗೆ ಬಂದವರಿದ್ದಾರೆ. ಆದರೆ, ದುಡಿಮೆ ನಂಬಿದವರಾರೂ ಬೀದಿಗೆ ಬಂದಿಲ್ಲ. ನೀರಿನಿಂದ ಸ್ನಾನ ಮಾಡುವವರು ಬಟ್ಟೆ ಮಾತ್ರ ಬದಲಿಸುತ್ತಾರೆ. ಬೆವರಿನಿಂದ ಸ್ನಾನ ಮಾಡುವವರು ಇತಿಹಾಸ ಬರೆಯುತ್ತಾರೆ. ದೇವಸ್ಥಾನ ನಿರ್ಮಿಸಿದರೆ ಸಾಲದು. ಇಡೀ ಗ್ರಾಮವೇ ಮಾದರಿಯಾಗಿ ಪರಿವರ್ತನೆಯಾಗಬೇಕು. ಆಗ ಮಾತ್ರ ಭಕ್ತಿಗೆ ಅರ್ಥ ಬರುತ್ತದೆ’ ಎಂದರು.

ತಿಕೋಟಾದ ಮಲ್ಲಿಕಾರ್ಜುನ ಶ್ರೀ, ಹಿರೇಮಠದ ವೀರೇಶ್ವರ ದೇವರು ಮಾತನಾಡಿದರು.

ಅಥಣಿ ಶಾಸಕ ಮಹೇಶ ಕುಮಠಳ್ಳಿ, ಶೆಟ್ಟರ ಮಠದ ಮರಳಸಿದ್ಧ ಸ್ವಾಮೀಜಿ, ಕವಲಗುಡ್ಡದ ಅಮರೇಶ್ವರ ಸ್ವಾಮೀಜಿ, ಬಿಜೆಪಿ ಮುಖಂಡ ಚಿದಾನಂದ ಸವದಿ, ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ಸದಾಶಿವ ಬುಟಾಳಿ ಮಾತನಾಡಿದರು. ಕುಂಬಾರ ಗುರು ಪೀಠದ ಬಸವಗುಂಡಯ್ಯ ಸ್ವಾಮೀಜಿ, ಹೊನವಾಡದ ಬಾಬುರಾವ ಮಹಾರಾಜರು, ಗುಡುರದ ಅಂದಾನಿ ಶಾಸ್ತ್ರಿ, ಬಸವರಾಜ ಮಹಾರಾಜರು ಇದ್ದರು.

ಇದಕ್ಕೂ ಮುನ್ನ, ಬೆಳಿಗ್ಗೆ 6ರಿಂದ ಮಧ್ಯಾಹ್ನದವರೆಗೆ ಬೀದಿಗಳಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಕುಂಭಮೇಳ ಜರುಗಿತು. ನಂತರ ಮೂರ್ತಿ ಪ್ರತಿಷ್ಠಾಪನೆ,ಕಳಸಾರೋಹಣ, ಅನ್ನಪ್ರಸಾದ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.