ADVERTISEMENT

ಜಿ.ಪಂ. ಚುನಾವಣೆ ಗೆಲುವಿಗೆ ಶ್ರಮಿಸಿ

ಕಾರ್ಯಕರ್ತರಿಗೆ ಸತೀಶ ಜಾರಕಿಹೊಳಿ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 11:50 IST
Last Updated 9 ಆಗಸ್ಟ್ 2021, 11:50 IST
ಬೆಳಗಾವಿಯಲ್ಲಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ  ಅಧಿಕಾರ ಸ್ವೀಕರಿಸಿದ ಪ್ರದೀಪ್ ಎಂ.ಜೆ. ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮತ್ತು ಮುಖಂಡ ಅಶೋಕ ಪಟ್ಟಣ ಸೋಮವಾರ ಅಭಿನಂದಿಸಿದರು
ಬೆಳಗಾವಿಯಲ್ಲಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ  ಅಧಿಕಾರ ಸ್ವೀಕರಿಸಿದ ಪ್ರದೀಪ್ ಎಂ.ಜೆ. ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮತ್ತು ಮುಖಂಡ ಅಶೋಕ ಪಟ್ಟಣ ಸೋಮವಾರ ಅಭಿನಂದಿಸಿದರು   

ಬೆಳಗಾವಿ: ಕಾಂಗ್ರೆಸ್ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಪ್ರದೀಪ ಎಂ.ಜೆ. ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ಅಧಿಕಾರ ಹಸ್ತಾಂತರಿಸಿದರು.

ನಂತರ ನಡೆದ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸದ್ಯದಲ್ಲೇ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆ ಎದುರಾಗಲಿದೆ. ಈ ನಿಟ್ಟಿನಲ್ಲಿ, ತಳಮಟ್ಟದಿಂದ ಪಕ್ಷ ಸಂಘಟನೆ ಹಾಗೂ ಬಲವರ್ಧನೆ ಉದ್ದೇಶದಿಂದ ಪ್ರದೀಪ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಮುಂಬರುವ ಚುನಾವಣೆಗಳಲ್ಲಿ ಅವರು ಶಕ್ತಿ ಪ್ರದರ್ಶನ ಮಾಡಬೇಕು’ ಎಂದು ಸೂಚಿಸಿದರು.

‘ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯಕರ್ತರ ಮೇಲೆ ಬಹಳಷ್ಟು ನಿರೀಕ್ಷೆ ಇಡಲಾಗಿದೆ. ಪಕ್ಷದ ಶಿಸ್ತನ್ನು ಮೈಗೂಡಿಸಿಕೊಂಡು ಕಾರ್ಯನಿರ್ವಹಿಸಬೇಕು. ಎಲ್ಲಾ ಕಾಂಗ್ರೆಸ್ ಶಾಸಕರು ಹಾಗೂ ನಾಯಕರ ಬೆಂಬಲವಿದೆ. ಗ್ರಾಮೀಣ ಪ್ರದೇಶದ ಮನೆ-ಮನೆಗೂ ತೆರಳಿ, ಕಾಂಗ್ರೆಸ್ ಸರ್ಕಾರವಿದ್ದಾಗ ಜಾರಿಗೊಳಿಸಿದ್ದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಬೇಕು’ ಎಂದು ಹೇಳಿದರು.

ADVERTISEMENT

‘ತಳಮಟ್ಟದಲ್ಲಿ ಪಕ್ಷ ಬಲಿಷ್ಠವಾದರೆ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಅನುಕೂಲವಾಗುತ್ತದೆ. ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲು ಇದು ಒಳ್ಳೆಯ ಅವಕಾಶ. ಹಗಲಿರುಳು ಪಕ್ಷದ ಸಂಘಟನೆಗಾಗಿ ಕೆಲಸ ಮಾಡಬೇಕು. 2023ರಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳನ್ನು ನಮ್ಮ ಪಾಲಾಗಿಸಿಕೊಳ್ಳುವ ಗುರಿ ಇಟ್ಟಕೊಂಡು ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಸಮಿತಿಯ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮುಖಂಡರಾದ ಅಶೋಕ ಪಟ್ಟಣ, ಸುನೀಲ ಹನಮನ್ನವರ, ವಿಶ್ವಾಸ್ ವೈದ್ಯ, ಅರವಿಂದ ದಳವಾಯಿ ಮತ್ತು ಜಿಲ್ಲಾ‌ ಘಟಕದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.