ಚಿಕ್ಕೋಡಿ: ತಾಲ್ಲೂಕಿನ ಕಬ್ಬೂರು ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಹಸಿರು ಹೊದ್ದು ಕಂಗೊಳಿಸುತ್ತಿದೆ. ಒಂದೂವರೆ ಎಕರೆಯಲ್ಲಿರುವ ವಸತಿ ನಿಲಯ ಮೇಲ್ವಿಚಾರಕ ನಾಗೇಶ ಕಾಪಶಿ ಅವರ ಆಸಕ್ತಿಯ ಕಾರಣ ಸುಂದರ ವನವಾಗಿದೆ.
ಬಂಜರು ಭೂಮಿಯಾಗಿದ್ದ 1 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಹಕಾರದಿಂದ ಚಿಕ್ಕು, ತೇಗ, ತೆಂಗು, ಹುಣಸೆ ಮುಂತಾದ ಮರ– ಗಿಡಗಳನ್ನು ಬೆಳೆಸಲಾಗಿದೆ. 135 ಪೇರಲ ಗಿಡಗಳು, 6 ಪಪ್ಪಾಯ, 6 ಲಿಂಬೆ, 30 ತೇಗದ ಮರ, 15 ತೆಂಗಿನ ಮರ, 8 ಹುಣಸೆ ಮರ, 20 ಚಿಕ್ಕು ಹಣ್ಣಿನ ಗಿಡಗಳನ್ನು ಬೆಳಸಲಾಗಿದೆ. ಪಕ್ಷಿಗಳು ಇಲ್ಲಿಗೆ ಲಗ್ಗೆ ಇಡುತ್ತವೆ. ಇವುಗಳ ಕಲರವ ಕೇಳುವುದೇ ಮನಸ್ಸಿಗೆ ಆನಂದ ನೀಡುತ್ತದೆ. ಪಕ್ಷಿಗಳಿಗಾಗಿ ನೀರು ಮತ್ತು ಆಹಾರ ಇರಿಸುವ ವ್ಯವಸ್ಥೆ ಮಾಡಲಾಗಿದೆ.
ಕೊಳವೆಬಾವಿಯಿಂದ ಪೈಪ್‌ಲೈನ್ ಮಾಡಲಾಗಿದೆ. ನೀರು ಸರಬರಾಕು, ಕಳೆ ತೆಗೆಯುವುದು, ಪಾತಿ ಮಾಡುವುದನ್ನೂ ವಿದ್ಯಾರ್ಥಿಗಳು ಸಂಭ್ರಮಿಸುತ್ತಿದ್ದಾರೆ.
ಅಡುಗೆಗೆ ತರಕಾರಿ: 20 ಗುಂಟೆಯಲ್ಲಿ ವಿಶೇಷ ಉದ್ಯಾನ ನಿರ್ಮಿಸಲಾಗಿದ್ದು, ಇಲ್ಲಿ ವಿವಿಧ ಫ್ಯಾಷನ್ ಗಿಡಗಳು, ಹೂವಿನ ಗಿಡಗಳು ಮನ ಸೆಳೆಯುವಂತಿವೆ. ಬದನೆ, ಟೊಮೆಟೊ, ಮೂಲಂಗಿ, ಕೊತ್ತಂಬರಿ ಮುಂತಾದ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಇವುಗಳನ್ನೇ ಅಡುಗೆಗೂ ಬಳಸಲಾಗುತ್ತದೆ. ಹಣ್ಣುಗಳನ್ನೂ ವಿದ್ಯಾರ್ಥಿಗಳಿಗೇ ನೀಡುತ್ತಿವುದು ವಿಶೇಷ.
ಬಂಜರು ಭೂಮಿಯಾಗಿದ್ದ ವಸತಿ ನಿಲಯದ ಆವರಣದಲ್ಲಿ ಅರಣ್ಯ ಇಲಾಖೆಯ ಸಹಕಾರದಿಂದ ವಿವಿಧ ಮರಗಿಡಗಳನ್ನು ಬೆಳೆಸಲಾಗಿದೆ. ಮನಸ್ಸಿಗೆ ಆನಂದವಾಗುತ್ತದೆ.– ನಾಗೇಶ ಕಾಪಶಿ, ವಸತಿ ನಿಲಯ ಮೇಲ್ವಿಚಾರಕ ಕಬ್ಬೂರ
ವಾರ್ಡನ್ ನಾಗೇಶ ಕಾಪಶಿ ಅವರು ಹಾಸ್ಟೆಲ್‌ಗೆ ನಯನ ಮನೋಹರ ರೂಪ ನೀಡಿದ್ದಾರೆ. ಎಲ್ಲ ಕಡೆ ಇಂಥ ಪ್ರಯತ್ನ ಮಾಡಲು ಉದ್ದೇಶಿಸಲಾಗಿದೆ.– ಅರ್ಚನಾ ಸಾನೆ, ಗ್ರೇಡ್–1 ಸಹಾಯಕ ನಿರ್ದೇಶಕಿ ಸಮಾಜ ಕಲ್ಯಾಣ ಇಲಾಖೆ ಚಿಕ್ಕೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.