ADVERTISEMENT

‘ಸ್ಕಿಜೊಫ್ರೇನಿಯಾ’ಕ್ಕೆ ಸರಳ ಚಿಕಿತ್ಸೆ ಲಭ್ಯ: ಡಾ.ಆರ್‌.ಜಿ. ನೆಲವಿಗೆ

​ಪ್ರಜಾವಾಣಿ ವಾರ್ತೆ
Published 24 ಮೇ 2019, 15:43 IST
Last Updated 24 ಮೇ 2019, 15:43 IST
ಬೆಳಗಾವಿಯ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ‘ವಿಶ್ವ ಸ್ಕಿಜೊಫ್ರೇನಿಯಾ ದಿನ’ ಕಾರ್ಯಕ್ರಮದಲ್ಲಿ ಡಾ.ಅರ್.ಜಿ. ನೆಲವಿಗೆ ಮಾತನಾಡಿದರು
ಬೆಳಗಾವಿಯ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ‘ವಿಶ್ವ ಸ್ಕಿಜೊಫ್ರೇನಿಯಾ ದಿನ’ ಕಾರ್ಯಕ್ರಮದಲ್ಲಿ ಡಾ.ಅರ್.ಜಿ. ನೆಲವಿಗೆ ಮಾತನಾಡಿದರು   

ಬೆಳಗಾವಿ: ‘ಸ್ಕಿಜೊಫ್ರೇನಿಯಾ ಎನ್ನುವುದು ವ್ಯಕ್ತಿಯು ಹೇಗೆ ಯೋಚಿಸುತ್ತಾನೆ, ಭಾವಿಸುತ್ತಾನೆ ಮತ್ತು ವರ್ತಿಸುತ್ತಾನೆ ಎಂಬುದರ ಮೇಲೆ ಪರಿಣಾಮ ಬೀರುವ ಒಂದು ದೀರ್ಘಕಾಲದ ಮತ್ತು ತೀವ್ರ ಮಾನಸಿಕ ಅಸ್ತವ್ಯಸ್ತತೆಯಾಗಿದೆ’ ಎಂದು ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ನಿಯೋಜಿತ ನಿರ್ದೇಶಕ ಡಾ.ಅರ್.ಜಿ. ನೆಲವಿಗೆ ತಿಳಿಸಿದರು.

ಇಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ಮಾನಸಿಕ ರೋಗ ಚಿಕಿತ್ಸಾ ವಿಭಾಗದಿಂದ ವಿಶ್ವ ಸ್ಕಿಜೊಫ್ರೇನಿಯಾ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾನಸಿಕ ರೋಗವು ಯಾವುದೇ ಪಾಪ–ಪುಣ್ಯದ ಫಲವಲ್ಲ. ಅದು ನಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ವಿಷಯವಾಗಿದೆ. ಸರಳವಾಗಿ ಚಿಕಿತ್ಸೆ ಹೊಂದಿ ನೆಮ್ಮದಿಯ ಜೀವನ ನಡೆಸಬಹುದಾಗಿದೆ. ಕುಟುಂಬದ ಸದಸ್ಯರು ಹೆಚ್ಚಿನ ಭಾವನಾತ್ಮಕ ಪ್ರೋತ್ಸಾಹ ಮತ್ತು ಬೆಂಬಲ ನೀಡಬೇಕಾಗುತ್ತದೆ’ ಎಂದರು.

ADVERTISEMENT

ಕೆಎಲ್ಇ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಎಂ.ಎ. ಉಡಚನಕರ ಮಾತನಾಡಿ, ‘ಸ್ಕಿಜೊಫ್ರೇನಿಯಾ ವಾಸ್ತವತೆಯಿಂದ ವಿಮುಖರಾಗಿರುವ ಸ್ಥಿತಿಯಾಗಿದೆ. ಇದು ಅಪಾಯಕಾರಿಯಲ್ಲದೇ ಇದ್ದರೂ ಸಾಮಾನ್ಯರಂತೆ ಸಹಜ ಜೀವನ ನಡೆಸಲು ಸಾಧ್ಯವಿರುವುದಿಲ್ಲ. ಇಂಥವರಿಗೆ ಔಷಧೋಪಚಾರ, ಮಾನಸಿಕ ರೋಗ ಚಿಕಿತ್ಸಾ ವಿಧಾನ ಹಾಗೂ ಯೋಗಾಭ್ಯಾಸಗಳಿಂದ ಸಹಜ ಜೀವನ ನಡೆಸುವಂತೆ ಮಾಡಬಹುದಾಗಿದೆ. ಈ ರೋಗದ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರ ಮಾಡಿಕೊಳ್ಳಬೇಕು’ ಎಂದು ಮಾಹಿತಿ ನೀಡಿದರು.

ಕೆಎಲ್‌ಇ ಶತಮಾನೋತ್ಸವ ನರ್ಸಿಂಗ್ ವಿಜ್ಞಾನ ಸಂಸ್ಥೆಯ ಪ್ರಾಚಾರ್ಯ ವಿಕ್ರಾಂತ ನೇಸರಿ ಮಾತನಾಡಿ, ‘ಸ್ಕಿಜೊಫ್ರೇನಿಯಾ ಸರಳವಾಗಿ ಉಪಚರಿಸಬಹುದಾದ ರೋಗವಾಗಿದೆ. ಅಂಜದೇ, ಸಕಾಲಕ್ಕೆ ವೈದ್ಯರನ್ನು ಸಂಪರ್ಕಿಸಿದರೆ ಶೀಘ್ರವಾಗಿ ಗುಣ ಹೊಂದಬಹುದು. ಉಪಚರಿಸಲು ವಿಶೇಷ ಕಾಳಜಿ, ತರಬೇತಿಯನ್ನು ದಾದಿಯರು ಹೊಂದಿರಬೇಕಾದ ಅವಶ್ಯಕತೆ ಇದೆ’ ಎಂದರು.

ಡಾ.ಅಶ್ವಿನಿ ಪದ್ಮಶಾಲಿ ಉಪನ್ಯಾಸ ನೀಡಿದರು. ಮಾನಸಿಕ ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ.ಸುಚೆತಾ ವಾಘಮಾರೆ, ಡಾ.ಅಂಟೊನಿಯೊ ಕರವಾಲೊ, ಡಾ.ನಿತಿನ, ಡಾ.ಕೌಸ್ತುಭ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.