ADVERTISEMENT

ಬೆನ್ನು ಹುರಿ ಸಮಸ್ಯೆ: ಅರಿವು ಅಗತ್ಯ- ಕೆಎಲ್‌ಇ ಸಂಸ್ಥೆಯಿಂದ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 14:49 IST
Last Updated 25 ಅಕ್ಟೋಬರ್ 2021, 14:49 IST
ಬೆಳಗಾವಿಯಲ್ಲಿ ಕೆಎಲ್‌ಇ ಆಸ್ಪತ್ರೆಯಿಂದ ಆಯೋಜಿಸಿದ್ದ ಬೆನ್ನುಹುರಿ ಜಾಗೃತಿ ಜಾಥಾಕ್ಕೆ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೋರೆ ಚಾಲನೆ ನೀಡಿದರು
ಬೆಳಗಾವಿಯಲ್ಲಿ ಕೆಎಲ್‌ಇ ಆಸ್ಪತ್ರೆಯಿಂದ ಆಯೋಜಿಸಿದ್ದ ಬೆನ್ನುಹುರಿ ಜಾಗೃತಿ ಜಾಥಾಕ್ಕೆ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೋರೆ ಚಾಲನೆ ನೀಡಿದರು   

ಬೆಳಗಾವಿ: ವಿಶ್ವ ಬೆನ್ನು ಹುರಿ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದ ನರಶಸ್ತ್ರಚಿಕಿತ್ಸಾ ವಿಭಾಗದಿಂದ ಬೆನ್ನುಹುರಿ ಜಾಗೃತಿ ಜಾಥಾ ನಡೆಸಲಾಯಿತು.

ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಚಾಲನೆ ನೀಡಿದರು.

ಬಳಿಕ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಕುಲಪತಿ ಪ್ರೊ.ವಿವೇಕ ಸಾವೊಜಿ, ‘ಬೆನ್ನುಹುರಿ ಮಾನವನ ಅತ್ಯಂತ ಪ್ರಮುಖವಾದ ಅಂಗ. ಇದಕ್ಕೆ ಸ್ವಲ್ಪ ತೊಂದರೆಯಾದರೂ ವ್ಯಕ್ತಿಯು ತೀವ್ರ ನೋವಿನಿಂದ ಬಳಲಬೇಕಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ವಿಶ್ವದಲ್ಲಿ ಸುಮಾರು 54 ಕೋಟಿಗೂ ಅಧಿಕ ಜನರು ಬೆನ್ನುಹುರಿ ತೊಂದರೆಯಿಂದದ ಬಳಲುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಗಾಯ ಅಥವಾ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಪ್ರತಿಯೊಬ್ಬರೂ ಅರಿವು ಹೊಂದಬೇಕಾಗುತ್ತದೆ. ಅದಕ್ಕಾಗಿ ಗ್ರಾಮಿಣ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು’ ಎಂದರು.

‘ಬೆನ್ನುಹುರಿ ಸಮಸ್ಯೆಯು ಬಹುಕ್ಲಿಷ್ಟಕರವಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಂಗವಿಕಲತೆ ಉಂಟಾಗಬಹುದು. ಶಸ್ತ್ರಚಿಕಿತ್ಸೆಯೂ ಬಹಳ ಸೂಕ್ಷ್ಮವಾಗಿರುತ್ತದೆ. ಚಿಕ್ಕ ರಂದ್ರದ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆ ನೆರವೇರಿಸಬೇಕು. ಸಂಶೋಧನೆ ಹಾಗೂ ಅತ್ಯಾಧುನಿಕತೆ ಹೆಚ್ಚು ಒತ್ತು ನೀಡಬೇಕು’ ಎಂದು ತಿಳಿಸಿದರು.

ಜವಾಹರಲಾಲ್‌ ನೆಹರೂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನಿರಂಜನಾ ಎಸ್. ಮಹಾಂತಶೆಟ್ಟಿ ಮಾತನಾಡಿದರು.

ಬೆಂಗಳೂರಿನ ನಿಮ್ಹಾನ್ಸ್‌ನ ನರಶಸ್ತ್ರಚಿಕಿತ್ಸಾ ತಜ್ಞ ಡಾ.ನೂಪೂರ ಪೃಥ್ವಿ, ಸಿಎಂಐ ಆಸ್ಪತ್ರೆಯ ಡಾ.ಉಮೇಶ ಶ್ರಿಕಾಂತ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಮಾತನಾಡಿದರು.

ಕುಲಸಚಿವ ಡಾ.ವಿ.ಎ. ಕೋಠಿವಾಲೆ, ಜೆಎನ್‌ಎಂಸಿ ಉಪಪ್ರಾಚಾರ್ಯ ಡಾ.ರಾಜೇಶ ಪವಾರ, ಡಾ.ಪ್ರಕಾಶ ಮಹಾಂತಶೆಟ್ಟಿ, ಡಾ.ಪ್ರಫುಲ್ ಮಾಸ್ತೆ, ಡಾ.ಅಭಿಷೇಕ ಪಾಟೀಲ, ಡಾ.ಪ್ರಕಾಶ ರಾಥೋಡ, ಡಾ.ವಿ.ಡಿ. ಪಾಟೀಲ, ಡಾ.ರವಿಶಂಕರ ನಾಯಕ, ಡಾ.ಸರೋಜಾ, ಡಾ.ಪ್ರಕಾಶ ಮಹಾಂತಶೆಟ್ಟಿ, ಡಾ.ರವಿರಾಜ ಘೋರ್ಪಡೆ, ಡಾ.ರಾಜೇಶ ಶೆಣೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.