ಚಿಕ್ಕೋಡಿ: ಗಡಿ ಭಾಗದಲ್ಲಿ ಮರಾಠಿ ರಂಗಭೂಮಿಗೆ ಸಡ್ಡು ಹೊಡೆದು ನಿಂತವರು ಚಿಕ್ಕೋಡಿಯ ಶಿವಲಿಂಗ ಶಾಸ್ತ್ರಿ ಅವರು. ಶತಮಾನದ ಹಿಂದೆ ಗಡಿಭಾಗದಲ್ಲಿ ಮರಾಠಿ ರಂಗಭೂಮಿಯೇ ಈ ಭಾಗದಲ್ಲಿ ಆವರಿಸಿಕೊಂಡಿತ್ತು. ಅದಕ್ಕೆ ಸಮನಾಗಿ ನಿಲ್ಲುವಂತೆ ಕನ್ನಡ ರಂಗಭೂಮಿ ಬೆಳೆಸಿದ ಅವರು ಅಜರಾಮರ. ಶತಮಾನದ ಹಿಂದೆಯೇ ಕನ್ನಡ ರಕ್ಷಣೆ ಮಾಡಿದ ಈ ನಾಟಕಕಾರ ನನೆಪು ಈಗ ತೆರೆಮರೆಯ ಹಿಂದೆ ಸರಿದಿದೆ.
ಚಿಕ್ಕೋಡಿಯ ಶಿವಲಿಂಗ ಶಾಸ್ತ್ರಿ 1880ರಲ್ಲಿ ತಂದೆ ಗುರುವಯ್ಯ, ತಾಯಿ ಗಂಗವ್ವ ಉದರದಿಂದ ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾಗಿ ಶಿಕ್ಷಕ ವೃತ್ತಿ ಆರಂಭಿಸಿದರು. ಕನ್ನಡ ಜನ ಮರಾಠಿ ನಾಟಕದ ಮಾತುಗಳನ್ನು ಗುಣುಗುವುದು, ಹಾಡುವುದನ್ನು ಗಮನಿಸಿದರು. ಕನ್ನಡದ ಜನ ಮರಾಠಿ ಭಾಷೆಯ ನಾಟಕಗಳಿಗೆ ಪ್ರಭಾವ ಆಗುತ್ತಿರುವುದನ್ನು ತಡೆಯದೇ ಇದ್ದಲ್ಲಿ ಗಡಿ ಭಾಗದಲ್ಲಿ ಕನ್ನಡಕ್ಕೆ ಉಳಿಗಾಲ ಇಲ್ಲವೆಂದು ಅರಿತರು. ಹೀಗಾಗಿ, ಸರ್ಕಾರಿ ನೌಕರಿ ತ್ಯಜಿಸಿ ಕೊಣ್ಣೂರಿನ ನಾಟಕ ಕಂಪನಿ ಸೇರಿಕೊಂಡು ನಟನೆ, ತರಬೇತಿ, ನಾಟಕ ರಚನೆ ಅನುಭವ ಪಡೆದುಕೊಂಡರು.
ಐತಿಹಾಸಿಕ, ಸಾಮಾಜಿಕ, ಪೌರಾಣಿಕ ನಾಟಕಗಳನ್ನು ರಚಿಸಿ ಪ್ರದರ್ಶನ ಮಾಡಿಸಿದರು. ಆಗಿನ ಕಾಲದಲ್ಲಿ ಪ್ರಸಿದ್ದಿಪಡೆದ ‘ಆ ಜನ್ಮ ಕುಮಾರಿ’ ಹಾಗೂ ‘ಚಂದ್ರಗ್ರಹಣ’ ಮರಾಠಿ ಭಾಷೆಯ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ, ಅಭಿನಯಿಸಿ ಜನಮನ್ನಣೆ ಗಳಿಸಿದರು.
ವೀರರಾಣಿ ಕಿತ್ತೂರ ಚನ್ನಮ್ಮ, ಕೆಳದಿ ಚನ್ನಮ್ಮಾಜಿ, ವೀರರಾಣಿ ಕಿತ್ತೂರ ರುದ್ರಮ್ಮ, ಒಂದೇ ಖಡ್ಗ, ರಾಷ್ಟ್ರಧ್ವಜ, ಅಸ್ಪೃಶ್ಯತಾ ನಿವಾರಣೆ ಎಂಬ ನಾಟಕಗಳನ್ನು ರಚಿಸಿದರು. ಶಿವಲಿಂಗೇಶ್ವರ ನಾಟ್ಯ ಸಂಘ ಚಿಕ್ಕೋಡಿ ಎಂಬ ಸಂಘ ಕಟ್ಟಿ, ಈ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ಕನ್ನಡ ಭಾಷೆಯ ಕಂಪು ಬೀರಿದರು. ದೇಶದ ಸ್ವಾತಂತ್ರ್ಯ ಜಾಗೃತಿ, ಸಾಮಾಜಿಕ ಪಿಡುಗುಗಳ ನಿವಾರಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.
ಗಡಿಭಾಗದಲ್ಲಿ ಕನ್ನಡದ ಪುನರುತ್ಥಾನಕ್ಕೆ ಹೋರಾಟ ಮಾಡಿದ ಶಿವಲಿಂಗ ಶಾಸ್ತ್ರಿ ಅವರ ಶಿಥಿಲಾವಸ್ಥೆಯಲ್ಲಿರುವ ಚಿಕ್ಕೋಡಿಯಲ್ಲಿರುವ ಮನೆಯನ್ನು ರಕ್ಷಣೆ ಮಾಡಬೇಕು. ಅವರ ಸ್ಮರಣೆಯಲ್ಲಿ ಚಿಕ್ಕೋಡಿಯಲ್ಲಿ ರಂಗಮಂದಿರ ನಿರ್ಮಾಣವಾಗಬೇಕು. ಅವರ ಹೆಸರಿನಲ್ಲಿ ರಂಗಭೂಮಿ ನಟರಿಗೆ, ನಾಟಕಕಾರಿಗೆ ಸರ್ಕಾರ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸುವ ಮೂಲಕ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಬೇಕಿದೆ.
ಶಿವಲಿಂಗ ಶಾಸ್ತ್ರಿಯವರು 40ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದು ಅವರ ಸಮಗ್ರ ನಾಟಕಗಳನ್ನು ಸರ್ಕಾರ ಪುನರ್ ಮುದ್ರಣ ಮಾಡಬೇಕುಪ್ರೊ.ಪಿ.ಜಿ. ಕೆಂಪಣ್ಣವರ ಹಿರಿಯ ಸಾಹಿತಿ
ಶಿವಲಿಂಗ ಶಾಸ್ತ್ರಿಯವರ ಸ್ಮರಣಾರ್ಥ ಚಿಕ್ಕೋಡಿಯಲ್ಲಿ ಬೃಹತ್ ರಂಗಮಂದಿರ ನಿರ್ಮಾಣ ಮಾಡಿ ಕಲೆ ಹಾಗೂ ಕಲಾವಿದರನ್ನು ಬೆಳೆಸಬೇಕುಸುಬ್ರಾವ ಎಂಟೆತ್ತಿನವರ ಮಾಜಿ ನಿರ್ದೇಶಕ ಗಡಿ ಅಭಿವೃದ್ಧಿ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.