ADVERTISEMENT

ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಮಿಂಚಿದ ಸಚಿನ್

ಖಾನಾಪುರ ತಾಲ್ಲೂಕು ಕಕ್ಕೇರಿಯ ಪ್ರತಿಭೆ

ಪ್ರಸನ್ನ ಕುಲಕರ್ಣಿ
Published 16 ಏಪ್ರಿಲ್ 2019, 20:00 IST
Last Updated 16 ಏಪ್ರಿಲ್ 2019, 20:00 IST
ಸಚಿನ ಅಂಬೋಜಿ
ಸಚಿನ ಅಂಬೋಜಿ   

ಖಾನಾಪುರ: ತಾಲ್ಲೂಕಿನ ಕಕ್ಕೇರಿ ಗ್ರಾಮದ ನಿವಾಸಿ, ಅಪ್ಪಟ ಗ್ರಾಮೀಣ ಪ್ರತಿಭೆಯಾದ ಸಚಿನ ಭೀಮಪ್ಪ ಅಂಬೋಜಿ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಮಿಂಚುತ್ತಿದ್ದಾರೆ.

ಕಕ್ಕೇರಿಯ ಕೃಷಿಕ ಭೀಮಪ್ಪ ಅವರ ಪುತ್ರರಾದ ಸಚಿನ್ ಇತ್ತೀಚೆಗೆ ಉತ್ತರ ಪ್ರದೇಶದ ಗೋಂಡಾ ಎಂಬಲ್ಲಿ ನಡೆದ 61 ಕೆ.ಜಿ. ವಿಭಾಗದ ಫ್ರೀ ಸ್ಟೈಲ್ ಕುಸ್ತಿ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು. ಪಂದ್ಯದಲ್ಲಿ ಎದುರಾಳಿಯಾಗಿದ್ದ ಗುಜರಾತ್ ತಂಡದ ಕುಸ್ತಿಪಟುವನ್ನು 12ನೇ ನಿಮಿಷದಲ್ಲಿ ಮಣಿಸುವ ಮೂಲಕ ರಾಷ್ಟ್ರಮಟ್ಟದ ಕುಸ್ತಿಪಟು ಎಂಬ ಮನ್ನಣೆಗೆ ಭಾಜನರಾಗಿದ್ದಾರೆ.

ಕುಸ್ತಿ ಕ್ರೀಡೆಯಲ್ಲಿ ವಿಶೇಷ ಸಾಧನೆಗಾಗಿ ಉತ್ಕಟ ಛಲದಿಂದ ಚಿಕ್ಕಂದಿನಿಂದಲೇ ಸತತ ಅಭ್ಯಾಸ ಮಾಡುತ್ತಿದ್ದಾರೆ. ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಯಶಸ್ಸು ಗಳಿಸಿದ ಹಿನ್ನೆಲೆಯಲ್ಲಿ ಅವರನ್ನು ರಾಷ್ಟ್ರೀಯ ಕುಸ್ತಿ ಸಂಘದ ಅಧ್ಯಕ್ಷ ವಿ.ಎನ್ ಪ್ರಸಾದ ಮತ್ತು ಉತ್ತರ ಪ್ರದೇಶದ ಸಂಸದ ಬ್ರಿಜಭೂಷಣ ಕರಣಸಿಂಗ್ ಪ್ರಶಸ್ತಿಪತ್ರ ಹಾಗೂ ಚಿನ್ನದ ಪದಕವನ್ನು ನೀಡಿ ಗೌರವಿಸಿದ್ದಾರೆ.

ADVERTISEMENT

ಧಾರವಾಡದಲ್ಲಿ ರಾಜ್ಯ ಕ್ರೀಡಾ ಇಲಾಖೆಯಿಂದ ನಡೆಸಲಾಗುತ್ತಿರುವ ಸಾಯಿ ಕ್ರೀಡಾ ವಸತಿನಿಲಯದಲ್ಲಿದ್ದುಕೊಂಡು ಬಿ.ಎ. ವ್ಯಾಸಂಗ ಮಾಡುತ್ತಿದದ್ದಾರೆ. ಮೈಸೂರಿನಲ್ಲಿ ನಡೆಯುವ ನಾಡಹಬ್ಬ ದಸರಾ ಮಹೋತ್ಸವ, ಹಂಪಿ ಉತ್ಸವ ಸೇರಿದಂತೆ ಜಿಲ್ಲೆ, ರಾಜ್ಯ ಮತ್ತು ಪ್ರಾದೇಶಿಕ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ತಮ್ಮ ‘ಪಟ್ಟು’ಗಳನ್ನು ಪ್ರದರ್ಶಿಸಿದ್ದಾರೆ. ಅಖಾಡದಲ್ಲಿ ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಿ, ಕುಸ್ತಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮೊದಲ ಬಾರಿ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಭಾಗವಹಿಸಿ ಮೊದಲ ಯತ್ನದಲ್ಲೇ ಎದುರಾಳಿಯನ್ನು ಸೋಲಿಸಿ ಪದಕ ಗೆದ್ದ ಅವರಿಗೆ ಕ್ರೀಡಾ ವಸತಿನಿಲಯದ ತರಬೇತುದಾರ ಅದೃಶ್ಯ ಮಂತುರ್ಗಿ ಮಾರ್ಗದರ್ಶನ ನೀಡಿದ್ದರು. ಗ್ರಾಮದ ಬಿಷ್ಠಾದೇವಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯವರು ಅವರಿಗೆ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಭಾಗವಹಿಸಲು ಅಗತ್ಯ ಸಹಾಯ-ಸಹಕಾರ ನೀಡಿ ಪ್ರೋತ್ಸಾಹಿಸಿದ್ದರು. ಅವರು ಅಲ್ಲಿ ಪದಕ ಗೆಲ್ಲುವುದರೊಂದಿಗೆ ಊರಿನ ಕೀರ್ತಿಯನ್ನೂ ಹೆಚ್ಚಿಸಿರುವುದಕ್ಕೆ ಅಭಿನಂದನೆಗೆ ಪಾತ್ರವಾಗಿದ್ದಾರೆ. ಮತ್ತಷ್ಟು ಕ್ರೀಡೆಗಳಿಗಾಗಿ ದೇಹವನ್ನು ಸಜ್ಜುಗೊಳಿಸುತ್ತಿದ್ದಾರೆ.

‘ನಿಯಮಿತವಾಗಿ ತರಬೇತಿ ಪಡೆಯುತ್ತಿದ್ದೇನೆ. ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವ ಬಯಕೆ ಇದೆ. ಪೋಷಕರು, ಮಾರ್ಗದರ್ಶಕರು ಬಹಳ ಪ್ರೋತ್ಸಾಹ ನೀಡುತ್ತಿದ್ದಾರೆ. ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಪ‍ಂದ್ಯಗಳಲ್ಲಿ ಪಾಲ್ಗೊಳ್ಳಬೇಕು. ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಸರು ತರಬೇಕು ಎನ್ನುವ ಆಸೆ ಇದೆ‌’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.