ಯಾದವಾಡದ ಘಟ್ಟಗಿ ಬಸವೇಶ್ವರ ದೇವಸ್ಥಾನ
ಮೂಡಲಗಿ: ತಾಲ್ಲೂಕಿನ ಯಾದವಾಡದ ಕ್ಷೇತ್ರಾಧಿಪತಿ ಶ್ರೀಚೌಕೇಶ್ವರ ಹಾಗೂ ಶ್ರೀಘಟ್ಟಗಿ ಬಸವೇಶ್ವರ ಜಾತ್ರೆಯ ರಥೋತ್ಸವವು ಶನಿವಾರ ಜರುಗಲಿದ್ದು, ಯಾದವಾಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗಳನ್ನು ಸುಣ್ಣ, ಬಣ್ಣ ಬಳಿದು ಸಿಂಗರಿಸಿದ್ದು ಜಾತ್ರೆಯ ತೇರು ಎಳೆಯಲು ಸಜ್ಜಾಗಿದ್ದಾರೆ.
ನಾಡಿನ ವಿವಿಧೆಡೆಯಲ್ಲಿ ಅಪಾರ ಭಕ್ತ ವೃಂದವನ್ನು ಹೊಂದಿರುವ ಘಟ್ಟಗಿ ಬಸವೇಶ್ವರನ ಮಹಿಮೆ ಅಪಾರ. ನಂಬಿದ ಭಕ್ತರನ್ನು ಘಟ್ಟಗಿ ಬಸವಣ್ಣ ಕೈ ಬಿಡಲಾರ ಎನ್ನುವ ಪ್ರತೀತಿ ಇದೆ. ರಥೋತ್ಸವದ ಹಿಂದಿನ ದಿನ ಸಾವಿರಾರು ಭಕ್ತರು ತಮ್ಮ ಇಷ್ಟಾರ್ಥದ ಸಿದ್ಧಿಗಾಗಿ ದೇವಸ್ಥಾನದವರೆಗೆ ಉರಳು ಸೇವೆ ಸಲ್ಲಿಸಿದರು.
ಹಿನ್ನೆಲೆ: 200 ವರ್ಷಗಳ ಪೂರ್ವದಲ್ಲಿ ಯಾದವಾಡ ಗ್ರಾಮಕ್ಕೆ ಭೀಕರ ಬರಗಾಲ ಬಂದು ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಲ್ಲದೆ ಮತ್ತು ಬೆಳೆಗಳು ಇಲ್ಲದೆ ಜನರೆಲ್ಲ ಕಂಗಾಲಾಗಿದ್ದರು. ಗ್ರಾಮಸ್ಥರೆಲ್ಲರೂ ಸೇರಿ ಊರಿಗೆ ಬಂದಿರುವ ಕಷ್ಟವನ್ನು ಪರಿಹರಿಸಬೇಕು ಎಂದು ಮೂಲ ಕರ್ತೃ ಜಗದ್ಗುರು ಚೌಕೇಶ್ವರ ಸ್ವಾಮೀಗಳ ಬಳಿ ಬಂದು ಅಂಗಲಾಚಿದರು. ಜನರ ಕಷ್ಟವನ್ನು ಕಂಡು ಮನದಲ್ಲಿ ಸಂಕಲ್ಪ ಮಾಡಿದ ಶ್ರೀಗಳ ಆಶಯದಂತೆ ಕೆಲವೇ ದಿನಗಳಲ್ಲಿ ಗ್ರಾಮದಲ್ಲಿಯ ಬಡಿಗನೊಬ್ಬರು ಬಡಿಗತನ ಕೆಲಸ ಮಾಡುವಾಗ ಒಂದು ಮರದ ಪೊದೆಯಲ್ಲಿ ಬಸವಣ್ಣನ ಮೂರ್ತಿ ಉದ್ಘವವಾಗಿತ್ತು. ಊರಿನ ಜನರೆಲ್ಲರೂ ಮರದಲ್ಲಿ ಉದ್ಭವವಾಗಿದ್ದ ಕಟ್ಟಿಗೆಯ ಸ್ವರೂಪದಲ್ಲಿದ್ದ ಬಸವಣ್ಣನಿಗೆ ಭಕ್ತಿಭಾವದಿಂದ ನಡೆದುಕೊಳ್ಳಲು ಪ್ರಾರಂಭಿಸಿದರು.
ಊರಲ್ಲಿ ಧಾರಾಕಾರ ಮಳೆ, ಎಲ್ಲೆಡೆ ಹಚ್ಚುಹಸಿರು ಕೆರೆ,ಬಾವಿಗಳೆಲ್ಲ ತುಂಬಿಕೊಂಡು ಬರಗಾಲದ ಛಾಯೆ ದೂರವಾಗಿ ಜನರ ಮೊಗದಲ್ಲಿ ಸಂಭ್ರಮ ಮನೆಮಾಡಿತು. ಚೌಕೇಶ್ವರ ಸ್ವಾಮಿಗಳು ಬಸವಣ್ಣನ ಜಾತ್ರೆಯನ್ನು ಮಾಡಲು ಸಂಕಲ್ಪ ಮಾಡಿ, ಜನರಿಗೆ ಸೂಚಿಸಿದರು. ಅದರಂತೆ ತಾವೇ ಸ್ವತ: ಕ್ರಿ.ಶ 1817ರಲ್ಲಿ ಎರಡು ರಥಗಳನ್ನು ಕೆತ್ತೆನೆ ಮಾಡಿಸಿದರು.ಕಟ್ಟಿಗೆ ಬಸವಣ್ಣ ಉದ್ಭವಿಸಿದ ಸ್ಥಳದಲ್ಲಿ ಭಕ್ತರು ದೇವಸ್ಥಾನ ಕಟ್ಟಿಸಿದ್ದು, ಕೆಲವು ದಶಕಗಳ ಪೂರ್ವದಲ್ಲಿ ದೇವಸ್ಥಾನ ಅಭಿವೃದ್ಧಿಪಡಿಸಿದ್ದಾರೆ.
ಅಂದಿನಿಂದ ಪ್ರತಿ ವರ್ಷ 9 ದಿನಗಳ ವರೆಗೆ ವಿಜೃಂಭಣೆಯಿಂದ ಜಾತ್ರೆಯನ್ನು ಜನರು ಮಾಡಿಕೊಂಡು ಬಂದಿದ್ದಾರೆ. ಚೌಕೇಶ್ವರ ಸ್ವಾಮೀಜಿಗಳ ಸಂಕಲ್ಪದಿಂದಾಗಿ ಘಟ್ಟಗಿ ಬಸವೇಶ್ವರ ದೇವರ ಜಾತ್ರೆ ನಡೆಯಲು ಕಾರಣವಾಯಿತು. ಹೀಗಾಗಿ ಚೌಕೇಶ್ವರ ಮಠ ಮತ್ತು ಘಟ್ಟಗಿ ಬಸವೇಶ್ವರ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವು ಭಕ್ತರಲ್ಲಿ ಇಂದಿಗೂ ಉಳಿದುಕೊಂಡಿದೆ. ಜಾತ್ರೆ ನಿಮಿತ್ತವಾಗಿ ಜಂಗಿ ನಿಕಾಲಿ ಕುಸ್ತಿಗಳು, ಟಗರಿನ ಕಾಳಗ, ಎತ್ತುಗಳು ಕಲ್ಲು ಜಗ್ಗುವ ಸ್ಪರ್ಧೆ, ಬಂಡಿ ಓಡಿಸುವ ಸ್ಪರ್ಧೆ, ಭಜನೆ, ನಾಟಕ, ರಸಮಂಜರಿ ಕಾರ್ಯಕ್ರಮಗಳು ಜರಗುತ್ತವೆ. ಜಾನುವಾರ ಜಾತ್ರೆ ನಡೆಯುತ್ತದೆ. ಜಾತ್ರೆಯ ನಿಮಿತ್ತ 5 ದಿನಗಳ ವರೆಗೆ ಅನ್ನಸಂತರ್ಪಣೆ ಇರುವುದು ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.
‘ಯಾದವಾಡದ ಚೌಕಿಮಠ ಹಾಗೂ ಘಟ್ಟಿ ಬಸವಣ್ಣ ಕ್ಷೇತ್ರವು ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲ ಜಾತಿ ಧರ್ಮ ಭಕ್ತರ ಭಾವೈಕ್ಯದ ಸಂಗಮವಾಗಿದೆ–ಶಿವಪ್ಪಗೌಡ ಬ. ನ್ಯಾಮಗೌಡರ ಅಧ್ಯಕ್ಷ ಘಟ್ಟಗಿ ಬಸವೇಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಯಾದವಾಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.