ಮುನವಳ್ಳಿ: ಸಮೀಪದ ಯಕ್ಕುಂಡಿ ಪ್ರಾಥಮಿಕ ಆರೋಗ್ಯ ಕಂದ್ರದಲ್ಲಿ ಕಳೆದ ಮೂರು ತಿಂಗಳಿಂದ ವೈದ್ಯರಿಲ್ಲದೇ ರೋಗಿಗಳು ಪರದಾಡುವಂತಾಗಿದೆ. ಈ ಗ್ರಾಮದ ಸುತ್ತಲಿನ ಹಳ್ಳಿಗಳಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಎಲ್ಲರಿಗೂ ಇದೇ ಕೇಂದ್ರ ಆಸ್ಪತ್ರೆ. ವೈದ್ಯರೆ ಇಲ್ಲದ ಕಾರಣ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ.
ಯಕ್ಕುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಯಕ್ಕುಂಡಿ, ಧೂಪದಾಳ, ಕಾರ್ಲಕಟ್ಟಿ, ಕಾರ್ಲಕಟ್ಟಿ ತಾಂಡಾಗಳ ಜನ ಇದೇ ಆಸ್ಪತ್ರೆ ಅವಲಂಬಿಸಿದ್ದಾರೆ. ಅಲ್ಲದೇ, ಬಡ್ಲಿ, ಕಾತ್ರಾಳ, ಬಡ್ಲಿತಾಂಡಾ, ಕಾಗಿಹಾಳ ತಾಂಡಾ, ಮಲ್ಲೂರ ಸೇರಿ ನಾನಾ ಗ್ರಾಮಗಳಿಂದ ಜನರು ಚಿಕಿತ್ಸೆಗೆ ಬರುತ್ತಾರೆ.
ಇಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಡಾ.ನರಸಾರಡ್ಡಿ ಈ ಭಾಗದ ಜನರ ಪಾಲಿಗೆ ಆರೋಗ್ಯದ ಭರವಸೆಯ ಬೆಳಕಾಗಿದ್ದರು. ಅವರು ಸಿಬ್ಬಂದಿ ಕೊರತೆ ಇದ್ದಾಗಲೂ ಸಹ ಈ ಆಸ್ಪತ್ರೆಗೆ ಬಂದಮೇಲೆ ಪ್ರತಿದಿನ ಅಂದಾಜು 200 ಸಾರ್ವಜನಿಕರಿಗೆ ಚಿಕಿತ್ಸೆ ಮತ್ತು ಔಷಧೋಪಚಾರ ನೀಡುತ್ತಿದ್ದರು. ಸಾಂಕ್ರಾಮಿಕ ರೋಗಗಳಾದ ಡೆಂಗಿ, ಮಲೇರಿಯಾ ಟೈಪೈಡ್‌ನಂಥ ಕಾಯಿಲೆಗಳ ಬಗ್ಗೆ ಅರಿವು ಮೂಡಿಸಿದ್ದರು.
ಅವರ ಸೇವೆ ಪರಿಗಣಿಸಿ 2022ರಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ‘ಕಾಯಕಲ್ಪ ಅವಾರ್ಡ್’ ನೀಡಿ ಗೌರವಿಸಿತ್ತು. 2024 ಹಾಗೂ 2025ರ ರಾಜ್ಯಮಟ್ಟದ ಪ್ರಶಸ್ತಿಗಳನ್ನೂ ಅವರು ಪಡೆದಿದ್ದಾರೆ. ಅವರು ವರ್ಗವಾಗಿ ಹೋದ ಮೇಲೆ ಗ್ರಾಮೀಣ ಜನರ ಗೋಳು ಕೇಳುವವರೇ ಇಲ್ಲವಾಗಿದೆ.
ಇರುವವರ ಮೇಲೆ ಒತ್ತಡ: ಸದ್ಯ ಇಲ್ಲಿ ಒಬ್ಬ ಮಹಿಳಾ ಆಯುಷ್ ವೈದ್ಯಾಧಿಕಾರಿ, ಇಬ್ಬರು ಸ್ಟಾಫ್ ನರ್ಸ್, ಒಬ್ಬ ಡಿ ದರ್ಜೆ ನೌಕರ ಮಾತ್ರ ಇದ್ದಾರೆ. ಪ್ರತಿದಿನ 200ಕ್ಕೂ ಹೆಚ್ಚು ರೋಗಿಗಳು ಈಗಲೂ ಬರುತ್ತಿದ್ದಾರೆ.
ಎಲ್ಲಕ್ಕಿಂತ ಹೆಚ್ಚು ಸಮಸ್ಯೆ ಆಗುತ್ತಿರುವುದು ಗರ್ಭಿಣಿ ಹಾಗೂ ಬಾಣಂತಿಯರಿಗೆ. ಪ್ರತಿ ತಿಂಗಳು ಇಲ್ಲಿ ಕನಿಷ್ಠ 10ಕ್ಕೂ ಹೆಚ್ಚು ಹೆರಿಗೆ ಆಗುತ್ತವೆ. ಆದರೆ, ಆರೈಕೆ ಮಾಡಲು ಸೂಕ್ತ ಪ್ರಮಾಣದ ಸಿಬ್ಬಂದಿಯೇ ಇಲ್ಲ. ಇದರಿಂದ ರಾತ್ರಿ ವೇಳೆ ಹೆರಿಗೆ ಬೇನೆ ಬಂದರೆ ಸಂಕಟ ಪಡುವಂತಾಗಿದೆ. ಸದ್ಯ ಈ ಸುತ್ತಲಿನ ಗ್ರಾಮಗಳ ಜನ ಧಾರವಾಡ, ಬೈಲಹೊಂಗಲ ಇಲ್ಲವೇ ಸವದತ್ತಿಯ ಖಾಸಗಿ ಆಸ್ಪತ್ರೆಗಳಿಗೆ ಅಲೆಯುವ ಸ್ಥಿತಿ ಬಂದಿದೆ.
ತುರ್ತಾಗಿ ಈ ಆಸ್ಪತ್ರೆಗೆ ಇಬ್ಬರು ಪುರುಷ ಹಾಗೂ ಇಬ್ಬರು ಮಹಿಳಾ ವೈದ್ಯರನ್ನು ನೇಮಿಸಬೇಕು. ಸಮರ್ಪಕ ನರ್ಸ್ ಹಾಗೂ ಡಿ ದರ್ಜೆ ನೌಕರರ ಹುದ್ದೆ ಮಂಜೂರು ಮಾಡಬೇಕು. ಈ ಬಗ್ಗೆ ಕ್ಷೇತ್ರದ ಶಾಸಕರು, ತಾಲ್ಲೂಕು ಆರೋಗ್ಯಾಧಿಕಾರಗಳು ಗಮನ ಹರಿಸಬೇಕು ಎಂದೂ ಜನ ಆಗ್ರಹಿಸಿದ್ದಾರೆ.
ಮೂರು ತಿಂಗಳಿಂದ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಇಲ್ಲ. ಹೃದಯಾಘಾತ ಹೆರಿಗೆ ಅಪಘಾತದಂಥ ಪ್ರಸಂಗಗಳಲ್ಲಿ ಜನ ಪರದಾಡುವಂತಾಗಿದೆ-ಮಹೇಶ ಪತ್ರೆಪ್ಪ ಹೊಂಗಲ ಉಪಾಧ್ಯಕ್ಷ ಯಕ್ಕುಂಡಿ ಗ್ರಾ.ಪಂ
ಯಕ್ಕುಂಡಿ ಆಸ್ಪತ್ರೆಯಲ್ಲಿದ್ದ ವೈದ್ಯಾಧಿಕಾರಿ ಉನ್ನತ ವ್ಯಾಸಂಗಕ್ಕೆ ಹೋಗಿದ್ದರಿಂದ ಹುದ್ದೆ ಖಾಲಿ ಇದೆ. ಈಗಾಗಲೇ ವೈದ್ಯರ ನಿಯುಕ್ತಿ ಮಾಡುವ ಪ್ರಕ್ರಿಯೆಗಳು ಆರಂಭವಾಗಿವೆ-ಡಾ.ಶ್ರೀಪಾದ ಸಬನಿಸ್, ತಾಲ್ಲೂಕು ವೈದ್ಯಾಧಿಕಾರು ಸವದತ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.