ಯರಗಟ್ಟಿ (ಬೆಳಗಾವಿ ಜಿಲ್ಲೆ): ಇಲ್ಲಿನ ಮರಡಿ ಬಸವೇಶ್ವರ ಜಾತ್ರೆ ಅಂಗವಾಗಿ ಬುಧವಾರ, ಪಟ್ಟಣದ ಮುಸ್ಲಿಂ ಸಮಾಜದವರು 5,000ಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ಉಣಬಡಿಸಿದರು.
5 ಕ್ವಿಂಟಲ್ ಅಕ್ಕಿಯ ಅನ್ನ, 8 ಕ್ವಿಂಟಲ್ ಗೋಧಿಯ ಹುಗ್ಗಿ, ಬದನೆಕಾಯಿ ಪಲ್ಯ, ಸಾರು ಬಡಿಸಿದರು. ಭಕ್ತರು ಊಟ ಮಾಡಿದ ನಂತರ ತಟ್ಟೆಗಳನ್ನೂ ಸಮಾಜದವರೇ ತೆಗೆದು ಸಾಮರಸ್ಯ ಸಾರಿದರು.
‘ಬಸವಣ್ಣನವರು ಮಾನವ ಕುಲವೆಲ್ಲ ಒಂದೇ ಎಂದು ಸಾರಿದವರು. ಅವರ ವಚನ ತತ್ವಗಳು ಸಮಾನತೆ ಬೋಧಿಸುತ್ತವೆ. ಜಗತ್ತಿ ಶಾಂತಿ, ನೆಮ್ಮದಿಯಿಂದ ಬದುಕಲು ಏನು ಬೇಕು ಎಂಬುದನ್ನು ಅವರು ವಚನಗಳಲ್ಲಿ ಹೇಳಿದ್ದಾರೆ. ಬಸವೇಶ್ವರರ ಜಾತ್ರೆಯಲ್ಲಿ ಮಹಾಪ್ರಸಾದ ಮಾಡಿಸುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ’ ಎಂದು ಮುಖಂಡ ಇಮ್ತಿಯಾಜ್ ಖಾದ್ರಿ ಹೇಳಿದರು.
ಪಟ್ಟಣದ ವಿವಿಧ ಸಮಾಜಗಳ ಮುಖಂಡರಾದ ಎ.ಎಂ. ಹಾದಿಮನಿ, ಸದಾನಂದ ಹಣಬರ, ಕುಮಾರ ಹಿರೇಮಠ, ದುಂಡಯ್ಯ ಕರ್ಜಗಿಮಠ, ಆಬಿದ್ ಜಮಾದಾರ, ಇಮಾಮಸಾಬ್ ಹುಸೇನ ನಾಯ್ಕರ, ಕಾಸಿಮ್ ಹೊರಟ್ಟಿ, ಆಸೀಫ್ ಗೋಕಾಕ್, ದಿಲಾವರ ಕರ್ನಾಚಿ, ರಾಜು ಗೋಕಾಕ, ಸಿರಾಜ್ ನದಾಫ, ರಾಜು ಕತ್ತಿಶೆಟ್ಟಿ, ಗೋಕಾಕ, ನಜಿರ್ ನದಾಫ, ಸಲೀಮ್ ಜಮಾದಾರ, ಮಂಜು ಬೆಣ್ಣಿ, ರಜಾಕ್ ದಿಲಾವರ ನಾಯ್ಕ್, ಪೀರಸಾಬ ತಹಸೀಲ್ದಾರ್, ದಿಲಾವರಸಾಬ್ ಸಿಕ್ಕಲಗಿ, ಲಿಯಾಖತ್ ಬಾಗವಾನ, ಮುನ್ನಾ ಶಬಶಾಖಾನ ಮುಂತಾದವರು ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.