
ಸವದತ್ತಿ: ‘ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರ, ಯುಜಿಡಿ, ನಗರ ಸಭೆ, ಮನೆ ಮನೆಗೆ ನೀರು ಹಾಗೂ ಹತ್ತು ಹಲವು ಸೌಲಭ್ಯಗಳೊಂದಿಗೆ ಸವದತ್ತಿ ಕ್ಷೇತ್ರ ಇತಿಹಾಸ ಪುಟದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತೆ ಅಭಿವೃದ್ಧಿಯತ್ತ ಮುನ್ನಡೆದಿದೆ’ ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
ಇಲ್ಲಿನ ಎಸ್.ಕೆ. ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಜರುಗಿದ 77ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘₹213 ಕೋಟಿ ಅನುದಾನದ ಯಲ್ಲಮ್ಮ ದೇವಸ್ಥಾನದ ಕಾಮಗಾರಿಗಳಿಗೆ ಶೀಘ್ರವೇ ಸಿ.ಎಂ ಸಿದ್ಧರಾಮಯ್ಯ ಅವರಿಂದ ಭೂಮಿಪೂಜೆ ನೆರವೇರಿಸಲಾಗುವುದು. ಕ್ಷೇತ್ರಕ್ಕೆ ಪ್ರತ್ಯೇಕ ಆರ್‌ಟಿಒ ಕಚೇರಿ, ಯರಗಟ್ಟಿಗೆ ಪೊಲೀಸ್ ಠಾಣೆ, ನೂರು ಹಾಸಿಗೆಯ ಸೌಲಭ್ಯವುಳ್ಳ ಸುಸಜ್ಜಿತ ತಾಲ್ಲೂಕು ಆಸ್ಪತ್ರೆಗೆ ₹ 41 ಕೋಟಿ, ಪಿಎಚ್‌ಸಿಗಳನ್ನು ಸಮುದಾಯ ಆಸ್ಪತ್ರೆಗಳನ್ನಾಗಿಸುವುದು. ಕೆಲವೆಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯುವ ಯೋಜನೆಗಳಿವೆ. ಉಪವಿದ್ಯುತ್ ಕೇಂದ್ರವನ್ನು ಸವದತ್ತಿ ಹೆಸ್ಕಾಂ ವಿಭಾಗವನ್ನಾಗಿಸಲಾಗುವುದು’ ಎಂದರು.
ತಹಶೀಲ್ದಾರ ಎಂ.ಎನ್. ಹೆಗ್ಗನ್ನವರ, ಬಿಇಒ ಎ.ಎ. ಖಾಜಿ ಮಾತನಾಡಿದರು.
ಪಿಎಸ್‌ಐ ಲಕ್ಷ್ಮಣ ಗೋಡಿ ನೇತೃತ್ವದಲ್ಲಿ ಪೊಲೀಸ್, ಗೃಹರಕ್ಷಕದಳ, ಎನ್‌ಸಿಸಿ, ಸ್ಕೌಟ್ಸ ಮತ್ತು ಗೈಡ್ಸ್ ಗಳಿಂದ ಶಾಸಕ ವಿಶ್ವಾಸ್ ವೈದ್ಯ ಗೌರವ ರಕ್ಷೆ ಸ್ವೀಕರಿಸಿದರು. ವಿವಿಧ ಶಾಲೆಗಳ ಮಕ್ಕಳು ದೇಶಾಭಿಮಾನದ ರೂಪಕಗಳನ್ನು ಪ್ರದರ್ಶಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ₹ 50 ಸಾವಿರ ನಗದು ನೀಡಿ ಸನ್ಮಾನಿಸಲಾಯಿತು. ಕೃಷಿ, ಕುಸ್ತಿ, ಕರಾಟೆ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಅಶ್ವಥ್ ವೈದ್ಯ, ಪೌರಾಯುಕ್ತ ಸಂಗನಬಸಯ್ಯ, ಪಿಆಯ್ ಸುರೇಶ ಬೆಂಡೆಗುಂಬಳ, ಇಒ ಆನಂದ ಬಡಕುಂದ್ರಿ, ಶಿವಕುಮಾರ ರಾಠೋಡ, ಜಗದೀಶ ಶಿರಸಂಗಿ, ಪ್ರವೀಣ ರಾಮಪ್ಪನವರ, ಶಿವಾನಂದ ಪಟ್ಟಣಶೆಟ್ಟಿ, ಕಲ್ಲಪ್ಪ ಪೂಜೇರ, ಕಿರಣ ಕುರಿ ಇದ್ದರು.
ಪಂಚಲಿಂಗೇಶ್ವರ ಕುಸ್ತಿ ಮೈದಾನ: ಗಣರಾಜ್ಯೋತ್ಸವ
ಮುನವಳ್ಳಿ: ಪಟ್ಟಣದ ಪಂಚಲಿಂಗೇಶ್ವರ ಕುಸ್ತಿ ಮೈದಾನದಲ್ಲಿ ಸೋಮವಾರ ಗಣರಾಜ್ಯೋತ್ಸವ ಜರುಗಿತು.
ಮಹಾತ್ಮಾ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷ ಸಿ.ಬಿ ಬಾಳಿ ಪೂಜೆ ಸಲ್ಲಿಸಿದರು. ಪುರಸಭೆ ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ ಸಾರ್ವಜನಿಕ ಧ್ವಜಾರೋಹಣವನ್ನು ನೆರವೇರಿಸಿದರು.
ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ, ಪಥ ಸಂಚಲನ ಜರುಗಿತು. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ವಿವಿಧ ಕ್ಷೆತ್ರಗಳಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯರು, ಸಿಬ್ಬಂದಿ, ಟಿ.ಎನ್.ಮುರಂಕರ ಶ್ರೀಶೈಲ ಹಂಜಿ, ಮೋಹನ ಕಾಮಣ್ಣವರ, ಅನಿಲ ಗಿಡ್ನಂದಿ, ಯಲ್ಪಪ್ಪ ಭಜಂತ್ರಿ, ಸಾರ್ವಜನಿಕರು ಇದ್ದರು.
ಕಾಯಕಯೋಗಿ ಬ್ಯಾಂಕ್, ಶಿವಲಿಂಗೇಶ್ವರ ಬ್ಯಾಂಕ್, ಬಸವೇಶ್ವರ ಬ್ಯಾಂಕ್, ಹರಿಯಂತ ಬ್ಯಾಂಕ್, ಸಾಯಿ ಬ್ಯಾಂಕ್‌ನಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
‘ದೇಶದ ಅಭಿವೃದ್ಧಿಗೆ ಸಂವಿಧಾನವೇ ಮಾರ್ಗಸೂಚಿ’
ರಾಯಬಾಗ: ‘ಸಂವಿಧಾನವು ದೇಶದ ಅಭಿವೃದ್ಧಿಗೆ ಮಾರ್ಗಸೂಚಿಯಾಗಿರುವ ನೀಲನಕ್ಷೆಯಾಗಿದ್ದು ಅದರ ಮೌಲ್ಯಗಳನ್ನು ಪಾಲಿಸದೇ ಯಾವುದೇ ಸಾಮಾಜಿಕ ಅಥವಾ ಆರ್ಥಿಕ ಪರಿವರ್ತನೆ ಸಾಧ್ಯವಿಲ್ಲ. ಸಮಾನತೆ ನ್ಯಾಯ ಮತ್ತು ಸ್ವಾತಂತ್ರ್ಯ ಎಂಬ ಮೂಲ ತತ್ವಗಳೇ ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬಲವಾಗಿವೆ’ ಎಂದು ಹೇಳಿದರು. ಪಟ್ಟಣದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಪಟ್ಟಣ ಪಂಚಾಯಿತಿ ಆವರಣದಲ್ಲಿ ಅಂಗವಿಕಲರಿಗೆ ನಗರೋತ್ಥಾನ ಯೋಜನೆಯಡಿ ಮಂಜೂರಾದ ಐದು ತ್ರಿಚಕ್ರ ವಾಹನಗಳನ್ನು ವಿತರಿಸಿದರು. ತಹಶೀಲ್ದಾರ್ ಮಹಾದೇವ ಸನಮುರಿ ಮಾತನಾಡಿದರು. ಗಣ್ಯರು ಪಾಲ್ಗೊಂಡಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಪೋಲಿಸ್ ಸಿಬ್ಬಂದಿಯಿಂದ ಪಥಸಂಚಲನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ದೇಶದ ಅಖಂಡತೆ ಕಾಪಾಡಲು ಸಲಹೆ
ಹುಕ್ಕೇರಿ: ‘ದೇಶದ ಅಖಂಡತೆ ಕಾಪಾಡುವಲ್ಲಿ ಪ್ರತಿಯೊಬ್ಬ ಪ್ರಜೆಯೂ ಜವಾಬ್ದಾರಿಯಿಂದ ವರ್ತಿಸಬೇಕು’ ಎಂದು ತಹಶೀಲ್ದಾರ್ ಬಲರಾಮ್ ಕಟ್ಟಿಮನಿ ಹೇಳಿದರು. ಸ್ಥಳೀಯ ಎಸ್.ಕೆ.ಹೈಸ್ಕೂಲ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದಕ್ಕೂ ಮೊದಲು ಅವರು ಹಳೇ ಬಸ್ ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಿಸಿದರು. ಪಥ ಸಂಚಲನ: ಪೊಲೀಸ್ ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡು ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು. ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕ್ಯಾರಗುಡ್ಡ ಆಶ್ರಮದ ಮಂಜುನಾಥ ಸ್ವಾಮೀಜಿ ಪುರಸಭೆ ಮಾಜಿ ಅಧ್ಯಕ್ಷ ಉದಯ ಹುಕ್ಕೇರಿ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ ತಾಲ್ಲೂಕು ಪಂಚಾಯ್ತಿ ಇಒ ಟಿ.ಆರ್.ಮಲ್ಲಾಡದ ಶಾನೂಲ್ ತಹಶೀಲ್ದಾರ್ ಸಿಪಿಐ ಮಹಾಂತೇಶ ಬಸ್ಸಾಪುರ ಬಿಇಒ ಪ್ರಭಾವತಿ ಪಾಟೀಲ್ ಗುರುಶಾಂತ ಪಾವಟೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘ: ಇಲ್ಲಿ ಸೋಮವಾರ ಜರುಗಿದ ಗಣರಾಜ್ಯುತ್ಸವದಲ್ಲಿ ಅಧ್ಯಕ್ಷ ಮಹಾವೀರ ನಿಲಜಗಿ ಧ್ವಜಾರೋಹಣ ನೆರವೇರಿಸಿದರು. ರೆಸಿಡೆಂಟ್ ಎಂಜನಿಯರ್ ನೇಮಿನಾಥ ಖೆಮಲಾಪುರೆ ಇದ್ದರು.
ರಾಷ್ಟ್ರಪ್ರೇಮ ಮೆರೆದ ವಿದ್ಯಾರ್ಥಿಗಳು
ಮೂಡಲಗಿ: ಮೂಡಲಗಿಯಲ್ಲಿ ಸೋಮವಾರ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಪೊಲೀಸ್ ಪಡೆ ಎನ್‌ಸಿಸಿ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳ ಪಥಸಂಚಲನದೊಂದಿಗೆ ಪುರಸಭೆಯಿಂದ ಪ್ರಾರಂಭಗೊಂಡು ಪ್ರಭಾತ ಪೇರಿಯು ಪ್ರಮುಖ ರಸ್ತೆಗಳಲ್ಲಿ ಸಾಗಿ ಮಹಾತ್ಮಾ ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡಿತು. ದಾರಿಯುದ್ದಕ್ಕೂ ರಾಷ್ಟ್ರಧ್ವಜಗಳನ್ನು ಪ್ರದರ್ಶಿಸಿ ‘ವಂದೇ ಮಾತರಂ’ ‘ಭಾರತ ಮಾತಾಕೀ’ ಜಯಘೋಷಗಳು ಮೊಳಗಿಸಿ ರಾಷ್ಟ್ರ ಪ್ರೇಮ ಮೆರೆದರು. ಗಾಂಧಿ ವೃತ್ತದಲ್ಲಿರುವ ಸಾರ್ವಜನಿಕ ಧ್ವಜಾರೋಹಣವನ್ನು ತಹಶೀಲ್ದಾರ್ ಶ್ರೀಶೈಲ್ ಗುಡಮೆ ಅವರು ನೆರವೇರಿಸಿದರು. ನಂತರ ಬಸವರಂಗ ಮಂಟಪದಲ್ಲಿ ಜರುಗಿದ ಸಮಾರಂಭದಲ್ಲಿ ಪಾಲ್ಗೊಂಡರು. ಎಸ್.ಆರ್. ಸೋನವಾಲಕರ ಕ್ಷೇತ್ರ ಶಿಕ್ಷಣಾಧಿಕಾರ ಪ್ರಕಾಶ ಹಿರೇಮಠ ಮಾತನಾಡಿದರು. ಶಿಲ್ಪಕಲಾಕಾರ ಈರಪ್ಪ ಶಂಕರ ಬಡಿಗೇರ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಎಸ್‌ಎಸ್‌ಎಲ್‌ಸಿಯಲ್ಲಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರಾರ್ಥನಾ ಗುಬಚಿ ಸೌಮ್ಯ ಹಿರೇಮಠ ವಿರೇಶ ಹಂಪಣ್ಣನವರ ಅವರಿಗೆ ತಲಾ ₹50000 ಮೌಲ್ಯದ ಚೆಕ್ ವಿತರಿಸಿದರು. ಕೆ.ಟಿ. ಗಾಣಿಗೆರ ಗಫಾರ ಡಾಂಗೆ ರವೀಂದ್ರ ಸಣ್ಣಕ್ಕಿ ಹಣಮಂತ ಗುಡ್ಲಮನಿ ಲಕ್ಷ್ಮಣ ಅಡಿಹುಡಿ ಅನ್ವರ ನದಾಫ ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಎಫ್.ಎಸ್. ಚಿನ್ನನವರ ಯಲ್ಲಪ್ಪ ಗದಾಡಿ ಎಂ.ಎಸ್. ನಾಗನ್ನವರ ಇತರರು ಇದ್ದರು.
ಪರಿಸರ ಸಂರಕ್ಷಣೆಗೆ ಕರೆ
ಗೋಕಾಕ: ‘ಭಾರತೀಯರಾದ ನಾವು ಮೂಲಭೂತ ಹಕ್ಕುಗಳನ್ನು ಸರಿಯಾಗಿ ಪರಿಪಾಲನೆ ಮಾಡಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಬೇಕು’ ಎಂದು ತಹಶೀಲ್ದಾರ್ ಮೋಹನ ಭಸ್ಮೆ ಹೇಳಿದರು. ಇಲ್ಲಿನ ಮಹರ್ಷಿ ವಾಲ್ಮೀಕಿ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ತಾ.ಪಂ. ಹಾಗೂ ಗೋಕಾಕ ನಗರಸಭೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿವಿಧ ಸ್ವರ್ಧೆಗಳ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಕೀಲ ಬಿ.ಆರ್.ಕೊಪ್ಪ ಅಶೋಕ ಪೂಜಾರಿ ಸೋಮಶೇಖರ ಮಗದುಮ್ ಪರಶುರಾಮ ಗಸ್ತಿ ರವಿ ರಂಗಸುಭೆ ರವಿ ನಾಯಿಕ ಸುರೇಬಬಾಬು ಎಂ.ಎಂ..ನಧಾಪ ಎಂ.ಎಚ್.ಗಜಾಕೋಶ ಡಾ. ಮುತ್ತಣ್ಣ ಕೊಪ್ಪದ ಎಂ.ಎಲ್.ಜನ್ಮಟ್ಟಿ ಪ್ರಮುಖರು ಇದ್ದರು.
‘ಸರ್ಕಾರಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿ’
ಚನ್ನಮ್ಮನ ಕಿತ್ತೂರು: ‘ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದರ ಜತೆಗೆ ಅಭಿವೃದ್ಧಿ ಕೆಲಸಗಳನ್ನು ಸಾಕಾರಗೊಳಿಸಲು ಅಧಿಕಾರಿಗಳು ಶ್ರಮಿಸಬೇಕಿದೆ’ ಎಂದು ತಹಶೀಲ್ದಾರ್ ಕಲಗೌಡ ಪಾಟೀಲ ಹೇಳಿದರು. ಇಲ್ಲಿಯ ಐತಿಹಾಸಿಕ ಗಡಾದ ಮರಡಿ ಮೇಲೆ ಗಣರಾಜ್ಯೋತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಚನ್ನಮ್ಮ ವರ್ತುಲದಲ್ಲಿಯೂ ತಹಶೀಲ್ದಾರ್ ಧ್ವಜಾರೋಹಣ ನೆರವೇರಿಸಿದರು. ರಾಣಿ ಚನ್ನಮ್ಮ ಸಂಗೊಳ್ಳಿ ರಾಯಣ್ಣ ಮತ್ತು ಅಮಟೂರು ಬಾಳಪ್ಪ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಬಳಿಕ ರಾಣಿ ಚನ್ನಮ್ಮ ಸ್ಮಾರಕ ಭವನದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಸಕ ಬಾಬಾಸಾಹೇಬ ಪಾಟೀಲ ಗೌರವಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಎಫ್. ಜಕಾತಿ ಗಂಗಪ್ಪ ಹುರಕಡ್ಲಿ ನಿಂಗಪ್ಪ ಮಸಳಿ ಚನಬಸಪ್ಪ ತುಬಾಕದ ಶಿವಾನಂದ ಗುಡಗನಟ್ಟಿ ಸಂಜೀವ ಮಿರಜಕರ ಪ್ರವೀಣ ಗಂಗೋಳ ರಾಘವೇಂದ್ರ ಪ್ರಮುಖರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.