ADVERTISEMENT

ಯೋಗ ದಿನ; ಜಲಯೋಗ ಈ ಬಾರಿಯ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 12:38 IST
Last Updated 17 ಜೂನ್ 2019, 12:38 IST
ಯೋಗ ದಿನ ಆಚರಣೆ ಕುರಿತು ಪೂರ್ವಸಿದ್ಧತಾ ಸಭೆಯು ಬೆಳಗಾವಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು
ಯೋಗ ದಿನ ಆಚರಣೆ ಕುರಿತು ಪೂರ್ವಸಿದ್ಧತಾ ಸಭೆಯು ಬೆಳಗಾವಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು   

ಬೆಳಗಾವಿ: ‘ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ, ಆಯುಷ್ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇದೇ 21ರಂದು ನಗರದ ಗಾಂಧಿಭವನದಲ್ಲಿ ಆಚರಿಸಲಾಗುವುದು. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು.

ವಿಶ್ವ ಯೋಗ ದಿನಾಚರಣೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಅಂದು ಬೆಳಿಗ್ಗೆ 7ರಿಂದ 8ಗಂಟೆಯವರೆಗೆ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದು ಗಂಟೆಯ ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ವಿವಿಧ ಬಗೆಯ ಆಸನಗಳ ಪ್ರದರ್ಶನ, ಪ್ರಾಣಾಯಾಮ, ಧ್ಯಾನ ನಡೆಯಲಿದೆ’ ಎಂದರು.

ADVERTISEMENT

ಅಂಗವಿಕಲರಿಗೂ ಆಹ್ವಾನ: ‘ಈ ಕಾರ್ಯಕ್ರಮಕ್ಕೆ ಅಂಗವಿಕಲರನ್ನೂ ಆಹ್ವಾನಿಸಲಾಗಿದೆ. ಯೋಗಾಸನಗಳನ್ನು ಪ್ರದರ್ಶಿಸಲು ಅವರಿಗೂ ಅವಕಾಶ ನೀಡಲಾಗಿದೆ’ ಎಂದು ಹೇಳಿದರು.

ಜಲ ಯೋಗ: ‘ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಕಳೆದ ಬಾರಿಯಂತೆ ಈ ಸಲವೂ ಜಿಲ್ಲಾಡಳಿತ ಹಾಗೂ ಈಜುಗಾರರ ಕ್ಲಬ್ ವತಿಯಿಂದ ಜಲಯೋಗ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಅಂದು ಸಂಜೆ ಜಿಲ್ಲಾ ಕ್ರೀಡಾಂಗಣದ ಸಮೀಪ ಇರುವ ಕೆಎಲ್‌ಇ ಸಂಸ್ಥೆಯ ಸುವರ್ಣ ಜೆಎನ್‌ಎಂಸಿ ಒಲಿಂಪಿಕ್ ಈಜುಕೊಳದಲ್ಲಿ ಜಲಯೋಗ ಪ್ರದರ್ಶನ ಹಮ್ಮಿಕೊಳ್ಳಲಾಗುವುದು. ಅಂತರ್‌ರಾಷ್ಟ್ರೀಯ ಖ್ಯಾತಿಯ ಈಜು ತರಬೇತುದಾರರಾದ ಉಮೇಶ್ ಕಲಘಟಗಿ ಅವರ ನೇತೃತ್ವದಲ್ಲಿ 40 ಜನರ ತಂಡವು ಜಲಯೋಗ ಪ್ರದರ್ಶನ ನೀಡಲಿದೆ. ಈ ತಂಡದಲ್ಲಿ ಕಿವುಡ- ಮೂಗ, ವಿಕಲಚೇತನ, ದೃಷ್ಟಿಹೀನ ಮಕ್ಕಳು ಇರುವುದು ವಿಶೇಷ’ ಎಂದು ಹೇಳಿದರು.

ಯೋಗ ನಡಿಗೆ- ಜಾಥಾ:
ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಒಂದು ದಿನ ಮುಂಚಿತವಾಗಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಇದೇ ತಿಂಗಳ 20ರಂದು ಯೋಗ ನಡಿಗೆ ಜಾಗೃತಿ ಜಾಥಾ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭಗೊಳ್ಳಲಿರುವ ಜಾಥಾ ಬೋಗಾರವೇಸ್ ವೃತ್ತದವರೆಗೆ ನಡೆಯಲಿದೆ. ಯೋಗ ಸಂಘಟನೆಗಳ ಸದಸ್ಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ಶ್ರೀಕಾಂತ ಸುಣಧೋಳಿ ಹೇಳಿದರು.

ಡಿಸಿಪಿ ಯಶೋಧಾ ಒಂಟಿಗೋಡಿ, ಜಿಲ್ಲಾ ಆಯುಷ್ ಅಧಿಕಾರಿ ಸುರೇಶ ದೊಡ್ಡವಾಡ, ಯುಜನಸೇವೆ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಸಿ.ಬಿ.ರಂಗಯ್ಯ, ನೆಹರೂ ಯುವ ಕೇಂದ್ರದ ಮುತಾಲಿಕ ದೇಸಾಯಿ, ವಾರ್ತಾ ಇಲಾಖೆಯ ಪ್ರಭಾರ ಉಪನಿರ್ದೇಶಕ ಗುರುನಾಥ ಕಡಬೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.