ADVERTISEMENT

‘ಝೈಕೋವ್‌–ಡಿ’ ಲಸಿಕೆ ತುರ್ತು ಬಳಕೆಗೆ ಲಭ್ಯ ಸಾಧ್ಯತೆ

ಮಕ್ಕಳ ಮೇಲೆ ಕ್ಲಿನಿಕಲ್‌ ಟ್ರಯಲ್‌: ಸಮಾಧಾನಕರ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 11:07 IST
Last Updated 22 ಜೂನ್ 2021, 11:07 IST

ಬೆಳಗಾವಿ: ‘ಜೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್‌ ಲಸಿಕೆ ‘ಝೈಕೋವ್‌–ಡಿ’ 3ನೇ ಹಂತದ ಕ್ಲಿನಿಕಲ್ ಟ್ರಯಲ್‌ ಭಾಗವಾಗಿ 12ರಿಂದ 18 ವರ್ಷದವರ ಮೇಲೆ ಇಲ್ಲಿ ನಡೆಸಿದ ಪ್ರಯೋಗ ಸಮಾಧಾನಕರ ಫಲಿತಾಂಶ ನೀಡಿದೆ’ ಎಂದು ಇಲ್ಲಿನ ಜೀವನ್‌ರೇಖಾ ಆಸ್ಪತ್ರೆಯ ನಿರ್ದೇಶಕ ಡಾ.ಅಮಿತ್ ಭಾತೆ ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ‘20 ಮಕ್ಕಳ ಮೇಲೆ ಪ್ರಯೋಗ ನಡೆದಿದೆ. ಅವರಲ್ಲಿ ಕೊರೊನಾ ವೈರಾಣು ವಿರುದ್ಧದ ಪ್ರತಿರೋಧಕ ಶಕ್ತಿ ವೃದ್ಧಿ ಆಗಿರುವುದು ಕಂಡುಬಂದಿದೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ. ಮಕ್ಕಳಲ್ಲಿ ಯಾವುದೇ ಅಡ್ಡ ಪರಿಣಾಮ ಕಂಡುಬಂದಿಲ್ಲ. ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ಮಾಹಿತಿ ನೀಡಿದರು.

‘ಮಕ್ಕಳಿಗೆ 3ನೇ ಡೋಸ್ ಕೂಡ ನೀಡಲಾಗಿದೆ. ಪ್ರತಿ ಡೋಸ್ ನೀಡಿದ ಬಳಿಕವೂ ಅವರಲ್ಲಿನ ರೋಗ ನಿರೋಧಕ ಶಕ್ತಿ ಪರೀಕ್ಷಿಸುವುದಕ್ಕಾಗಿ ರಕ್ತದ ಮಾದರಿ ಸಂಗ್ರಹಿಸಲಾಗುತ್ತಿದೆ. ಉತ್ತಮ ಪ್ರಗತಿ ಕಂಡುಬಂದಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಝೈಕೋವ್‌–ಡಿ’ ಲಸಿಕೆಯನ್ನು ಸದ್ಯಕ್ಕೆ ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ಕೋರಿ ಜೈಡಸ್ ಕ್ಯಾಡಿಲಾ ಕಂಪನಿಯು ಭಾರತೀಯ ಔಷಧ ಮಹಾನಿಯಂತ್ರಕರನ್ನು (ಡಿಸಿಜಿಐ) ಕೋರಿದೆ. ಕೋವಿಡ್ 3ನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂಬ ವರದಿಗಳಿರುವುದರಿಂದಾಗಿ, ಗರಿಷ್ಠ ಅಪಾಯದಿಂದ ಅವರನ್ನು ಪಾರು ಮಾಡುವುದಕ್ಕಾಗಿ ಅವರಿಗೆ ಲಸಿಕೆ ನೀಡುವುದು ಅತ್ಯವಶ್ಯವಾಗುತ್ತದೆ. ಈ ನಿಟ್ಟಿನಲ್ಲಿ ಡಿಸಿಜಿಐ ಶೀಘ್ರದಲ್ಲೇ ಅನುಮೋದನೆ ನೀಡುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

‘ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಸಹಯೋಗದಲ್ಲಿ ಹೈದರಾಬಾದ್‌ನ ಭಾರತ್ ಬಯೊಟೆಕ್ ಕಂಪನಿ ಅಭಿವೃದ್ಧಿಪಡಿಸಿದ್ದ ಕೋವ್ಯಾಕ್ಸಿನ್ ಲಸಿಕೆಯನ್ನು ಕ್ಲಿನಿಕಲ್ ಟ್ರಯಲ್ ಹಂತದಲ್ಲಿದ್ದಾಗಲೇ ತುರ್ತು ಸಂದರ್ಭದಲ್ಲಿ ಬಳಸಲು ಡಿಸಿಜಿಐ ಅನುಮೋದನೆ ನೀಡಿತ್ತು’ ಎಂದು ಅವರು ತಿಳಿಸಿದರು.

ಕೋವ್ಯಾಕ್ಸಿನ್ ಕ್ಲಿನಿಕಲ್‌ ಟ್ರಯಲ್ ಕೂಡ ಈ ಆಸ್ಪತ್ರೆಯಲ್ಲಿ ನಡೆದಿತ್ತು. ಮಕ್ಕಳ ಮೇಲೆ ಲಸಿಕೆ (ಝೈಕೋವ್‌–ಡಿ) ಪ್ರಯೋಗ ನಡೆಯುತ್ತಿರುವ ರಾಜ್ಯದ ಏಕೈಕ ಆಸ್ಪತ್ರೆ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.