ಬೆಂಗಳೂರು: ಭಾರತವು ಪ್ರಜಾಪ್ರಭುತ್ವ, ಜಾತ್ಯತೀತತೆ, ಲಿಂಗ ಸಮಾನತೆ ಹಾಗೂ ಆರ್ಥಿಕ ಸಮಾನತೆ ಹೊಂದಿರುವ ರಾಷ್ಟ್ರವಾಗಿರುವುದರಿಂದಲೇ ಪಾಕಿಸ್ತಾನಕ್ಕಿಂತ ಮುಂದಿದೆ. ಪಾಕಿಸ್ತಾನದಲ್ಲಿ ಈ ಯಾವ ಅಂಶಗಳೂ ಇಲ್ಲ ಎಂದು ಖ್ಯಾತ ಅಂಕಣಕಾರ ಎಂ.ಜೆ. ಅಕ್ಬರ್ ಅವರು ಪ್ರತಿಪಾದಿಸಿದರು.
ನಗರದಲ್ಲಿ ಗುರುವಾರ ಅವರ ‘ಟಿಂಡರ್‌ಬಾಕ್ಸ್: ದಿ ಪಾಸ್ಟ್ ಅಂಡ್ ಫ್ಯೂಚರ್ ಆಫ್ ಪಾಕಿಸ್ತಾನ್’ ಕೃತಿ ಬಿಡುಗಡೆ ಕಾರ್ಯಕ್ರಮದ ನಂತರ ಏರ್ಪಡಿಸಿದ್ದ ಸಂವಾದದಲ್ಲಿ ‘ಭಾರತ ಹಾಗೂ ಪಾಕಿಸ್ತಾನ ದೇಶಗಳ ಸಾಮ್ಯತೆ ಹಾಗೂ ವೈರುಧ್ಯ’ಗಳ ಕುರಿತು ಮಾತನಾಡಿದ ಅವರು, ‘ಪಾಕಿಸ್ತಾನ ಧರ್ಮ ಪ್ರಧಾನ ದೇಶವಾಗಿರುವುದರಿಂದ ಭಾರತ ಹೊಂದಿರುವ ಆಧುನಿಕತೆಯನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಇಂದಿನ ಪಾಕಿಸ್ತಾನಿ ಯುವಕ ಭಾರತೀಯ ಯುವಕನಂತೆಯೇ ಆಧುನಿಕತೆಯ ಬಗ್ಗೆ ಯೋಚಿಸುತ್ತಿದ್ದಾನೆ’ ಎಂದು ನುಡಿದರು.
ಭಾರತದ ಜಾತ್ಯತೀತ ಲಕ್ಷಣದ ಬಗ್ಗೆ ವಿವರಿಸಿದ ಅವರು, ‘ಮಹಾತ್ಮ ಗಾಂಧೀಜಿ ಜಾತ್ಯತೀತರಾಗಿದ್ದರು ಎಂಬ ಮಾತ್ರಕ್ಕೆ ಭಾರತ ಜಾತ್ಯತೀತ ಲಕ್ಷಣ ಹೊಂದಲಿಲ್ಲ. ಬದಲಾಗಿ ಭಾರತ ಜಾತ್ಯತೀತ ದೇಶವಾಗಿದ್ದರಿಂದಲೇ ಗಾಂಧೀಜಿ ಜಾತ್ಯತೀತರಾಗಿದ್ದರು’ ಎಂದು ಬಣ್ಣಿಸಿದರು.
ಭಾರತ ಹಾಗೂ ಪಾಕಿಸ್ತಾನ ವಿಭಜನೆಯಾದಾಗ ಎರಡೂ ದೇಶಗಳಲ್ಲಿ ಹಿಂದು ಮುಸ್ಲಿಮರು ಹೊಂದಿಕೊಂಡು ಬಾಳಿದ್ದರು. ಉದಾಹರಣೆಗೆ ಜಿನ್ನಾ ಅವರ ನೇತೃತ್ವದಲ್ಲಿ ಪಾಕಿಸ್ತಾನ ಆಗಸ್ಟ್ 11, 1947ರಂದು ದೇಶ ರಚನೆಗೆ ಮುಂದಾದಾಗ ಸಂಸತ್ತಿನ ಸ್ಪೀಕರ್, ಕ್ಯಾಬಿನೆಟ್ ಸಚಿವರು ಅಷ್ಟೇ ಏಕೆ ರಾಷ್ಟ್ರಗೀತೆಯನ್ನು ಬರೆದವರೂ ಹಿಂದೂ ಆಗಿದ್ದರು’ ಎಂದು ಹೇಳಿದರು.
‘ಗಾಂಧೀಜಿ ಅವರು ಭಾರತದಲ್ಲಿ ಹಿಂದೂಗಳ ಪ್ರಾಬಲ್ಯದೊಂದಿಗೆ ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಯತ್ನಿಸಿದ್ದಂತೆಯೇ ಮಹಮ್ಮದ್ ಅಲಿ ಜಿನ್ನಾ ಮುಸ್ಲಿಂ ಪ್ರಾಬಲ್ಯದೊಂದಿಗೆ ಪಾಕಿಸ್ತಾನದಲ್ಲಿ ಜಾತ್ಯತೀತ ರಾಷ್ಟ್ರ ನಿರ್ಮಾಣವನ್ನು ಗುರಿಯಾಗಿಸಿಕೊಂಡಿದ್ದರು. ಗಾಂಧೀಜಿ ಅದನ್ನು ಸಾಧಿಸಿದರು. ಆದರೆ ಜಿನ್ನಾರಿಂದ ಈ ಪ್ರಕ್ರಿಯೆ ಸಾಧ್ಯವಾಗಲಿಲ್ಲ’ ಎಂದು ವಿಶ್ಲೇಷಿಸಿದರು.
ಭಾರತೀಯತೆ ಹಾಗೂ ಪಾಕಿಸ್ತಾನಿ ಪರಿಕಲ್ಪನೆ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಭಾರತೀಯನಿಗಿಂತ ಭಾರತೀಯತೆ ಎಂಬುದು ಮುಖ್ಯವಾಗಿದೆ. ಆದರೆ ಪಾಕಿಸ್ತಾನಿಗಿಂತ ಪಾಕಿಸ್ತಾನ ಎಂಬುದು ಮುಖ್ಯವಾಗುತ್ತದೆ’ ಎಂದು ಹೇಳಿದರು.
‘ಇಸ್ಲಾಂನಲ್ಲೂ ಭಿನ್ನ ಬಗೆಗಳಿವೆ. ಅದರಲ್ಲಿ ಏಕತೆ ಇದ್ದರೆ 22 ಅರಬ್ ರಾಷ್ಟ್ರಗಳು ಏಕೆ ಇರಬೇಕಿತ್ತು. ಬರೀ ಪಾಕಿಸ್ತಾನ ಒಂದೇ ಇದ್ದರೆ ಸಾಕಿತ್ತಲ್ಲವೇ’ ಎಂದು ಸಭಿಕರನ್ನು ಪ್ರಶ್ನಿಸಿದ ಅಕ್ಬರ್, ‘ಜಿನ್ನಾ ಮಾದರಿಯ ಸರ್ಕಾರ ರಚನೆಯಾಗಿದ್ದರೆ ಅದರ ಭವಿಷ್ಯವೇ ಬೇರೆ ಇರುತ್ತಿತ್ತು. ಆದರೆ ಭಾರತದ ಮೇಲೆ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ‘ಜಿಹಾದ’ನ್ನು ಬಳಕೆ ಮಾಡುತ್ತಿರುವುದರಿಂದ ಎರಡೂ ರಾಷ್ಟ್ರಗಳ ಮಧ್ಯೆ ಸಾಮ್ಯತೆ ಸಾಧ್ಯವಾಗುತ್ತಿಲ್ಲ’ ಎಂದರು.
ಕಾಶ್ಮೀರ ಮುಗಿದ ಅಧ್ಯಾಯ: ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಅದು ಎಂದೋ ಮುಗಿದು ಹೋದ ವಿಷಯ. ಅದು ವಿವಾದತ್ಮಕ ಸಂಗತಿ ಅಲ್ಲವೇ ಅಲ್ಲ. ಈಗ ಅಲ್ಲಿ ಯಾವ ಸ್ಥಿತಿ ಇದೆಯೋ ಅದೇ ಸ್ಥಿತಿ ಮುಂದುವರೆಯಬೇಕು. ದೇಶಗಳು ಇಬ್ಭಾಗವಾದಾಗಿನಿಂದಲೂ ಕಾಶ್ಮೀರ ವಿವಾದ ನಡೆಯುತ್ತಲೇ ಇದೆ. ಇದಕ್ಕೆ ಸಂಬಂಧಪಟ್ಟಂತೆಯೇ ಯುದ್ಧಗಳು ನಡೆದವು. ಆದರೆ ಆರು ದಶಕ ಕಳೆದರೂ ಆರು ಇಂಚು ಜಾಗವನ್ನೂ ಆಚೀಚೆ ಮಾಡಲಾಗಿಲ್ಲ. ಈಗಲೂ ಅದೇ ಸ್ಥಿತಿ ಮುಂದುವರೆಯಬೇಕು’ ಎಂದು ಹೇಳಿದರು.
ರಾಜಕೀಯಕ್ಕೆ ಬಳಕೆ: ‘ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎಂಬ ಶಬ್ದಗಳು ವಾಸ್ತವವಾಗಿ ರಾಜಕೀಯಕ್ಕೆ ಬಳಕೆಯಾಗುತ್ತವೆಯೇ ಹೊರತು ಜನಸಾಮಾನ್ಯರಿಗೆ ಈ ವ್ಯವಹಾರ ತಿಳಿಯುವುದಿಲ್ಲ. ಅಲ್ಪಸಂಖ್ಯಾತ ಎಂಬುದು ರಾಜಕೀಯ ಅಸ್ಮಿತೆಯಾಗಿ ಮಾತ್ರ ಬಳಕೆಯಾಗುತ್ತಿದೆ’ ಎಂದು ಪ್ರತಿಪಾದಿಸಿದರು.
ಕೃತಿ ಬಿಡುಗಡೆ ಮಾಡಿದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಮಾತನಾಡಿ, ‘ವಿದೇಶದಿಂದ ಭಾರತದಕ್ಕೆ ಬಂದ ಮುಸ್ಲಿಮರು ಲೂಟಿಕೋರರು ಎಂಬ ಭಾವನೆ ಬೇರೂರಿದೆ. ಆದರೆ ಮೊಗಲರಿಂದ ಹಿಡಿದು ಟಿಪ್ಪು ಸುಲ್ತಾನನವರೆಗೂ ಮುಸ್ಲಿಮರು ಭಾರತದ ನಿರ್ಮಾಣಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ.
ವಾಸ್ತುಶಿಲ್ಪ, ಸಂಗೀತ, ಕಲೆ, ಲಲಿತಕಲೆಯಂಥ ಸಾಂಸ್ಕೃತಿಕ ಆಯಾಮಗಳನ್ನು ಭಾರತಕ್ಕೆ ಪರಿಚಯಿಸಿದರು. ಆದ್ದರಿಂದಲೇ ಆಗ್ರಾದ ತಾಜ್‌ಮಹಲ್, ದೆಹಲಿಯ ಕೆಂಪು ಕೋಟೆ ಮುಸ್ಲಿಮರ ವಾಸ್ತುಶಿಲ್ಪದ ಅತ್ಯದ್ಭುತ ಶಿಖರಗಳು’ ಎಂದು ಶ್ಲಾಘಿಸಿದರು.
ಹಿರಿಯ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಸಂವಾದವನ್ನು ನಡೆಸಿಕೊಟ್ಟರು. ಐಟಿಸಿ ಗಾರ್ಡೆನಿಯಾ ಹೋಟೆಲ್‌ನ ಪ್ರಾದೇಶಿಕ ವ್ಯವಸ್ಥಾಪಕ ಆನಂದ್‌ರಾವ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.