ADVERTISEMENT

ಅಂಕ ಹೆಚ್ಚಿಸಿಕೊಳ್ಳಲು 5 ಸಾವಿರ ರೂಪಾಯಿ- ಆಕ್ರೋಶ

ಆರೋಪಿಗಳ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 20:17 IST
Last Updated 14 ಡಿಸೆಂಬರ್ 2012, 20:17 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಬಿಕಾಂ, ಬಿಎಸ್ಸಿ ಹಾಗೂ ಬಿಸಿಎ ಪದವಿಗಳ ಮೌಲ್ಯಮಾಪನ ನಡೆಯುತ್ತಿರುವ ನಗರದ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪವು ವಿವಿಯ ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು.

ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರನ್ನು ವಾಪಸ್ ಕರೆಸಿಕೊಳ್ಳುವುದು ಸೇರಿದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಂಗಾಮಿ ಕುಲಪತಿ ಡಾ.ಎನ್.ರಂಗಸ್ವಾಮಿ ಭರವಸೆ ನೀಡಿದರು. ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸದಸ್ಯ ಕರಣ್ ಕುಮಾರ್ ವಿಷಯ ಪ್ರಸ್ತಾಪಿಸಿದರು.

`ಮಹಾರಾಣಿ ಕಾಲೇಜಿನಲ್ಲಿ ಬಿಎಸ್ಸಿ, ಜಯನಗರದ ಸಿಟಿ ಕಾಲೇಜಿನಲ್ಲಿ ಹಾಗೂ ಯುನೈಟೆಡ್ ಮಿಷನ್ ಪದವಿ ಕಾಲೇಜಿನಲ್ಲಿ ಬಿಕಾಂ ಪದವಿ ಹಾಗೂ ರಾಜಾಜಿನಗರದ ಮರಿಯಪ್ಪ ಕಾಲೇಜಿನಲ್ಲಿ ಬಿಸಿಎ ಪದವಿ ಮೌಲ್ಯಮಾಪನ ನಡೆಯುತ್ತಿದೆ. ಈ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು ಹಾಗೂ ಸಹ ಮೇಲ್ವಿಚಾರಕರು ಮೂರರಿಂದ ಐದು ಸಾವಿರ ರೂಪಾಯಿ ಹಣ ಪಡೆದು ವಿದ್ಯಾರ್ಥಿಗಳಿಗೆ ಶೇ 80 ಅಂಕ ನೀಡುತ್ತಿದ್ದಾರೆ ಎಂಬ ಆರೋಪ ಇದೆ. ಇದರ ವಿರುದ್ಧ ವಿವಿ  ಕ್ರಮ ಕೈಗೊಳ್ಳದಿದ್ದರೆ  ಹೋರಾಟ ಮಾಡಲಾಗುವುದು' ಎಂದು ಎಚ್ಚರಿಸಿದರು.

ಸದಸ್ಯ ಪ್ರೊ.ರಾಮಚಂದ್ರಗೌಡ ಹಾಗೂ ಪ್ರೊ.ನಾರಾಯಣಸ್ವಾಮಿ ಮಾತನಾಡಿ, `ಇಂತಹ ಆರೋಪ ವಿವಿಯಲ್ಲಿ ಬಹಳ ಕಾಲದಿಂದ ಕೇಳಿ ಬರುತ್ತಿದೆ. ಇಂತಹ ಪ್ರವೃತ್ತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯ ಇದೆ' ಎಂದರು. ಸದಸ್ಯ ಜಗದೀಶ ಪ್ರಕಾಶ್, `ಖಾಸಗಿ ಕಾಲೇಜುಗಳಲ್ಲಿ ಮೌಲ್ಯಮಾಪನ ನಡೆಸುವುದರ ಬದಲು ಸರ್ಕಾರಿ ಕಾಲೇಜುಗಳಲ್ಲೇ ನಡೆಸುವುದು ಉತ್ತಮ.

ADVERTISEMENT

ಸರ್ಕಾರಿ ಉಪನ್ಯಾಸಕರು ಹೆಚ್ಚು ವಿಶ್ವಾಸಾರ್ಹತೆಯಿಂದ ಕೆಲಸ ಮಾಡುತ್ತಾರೆ' ಎಂದು ಅಭಿಪ್ರಾಯಪಟ್ಟರು.
ಈ ಹೇಳಿಕೆ ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ನಾಲ್ಕೈದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, `ಎಲ್ಲ ಖಾಸಗಿ ಕಾಲೇಜುಗಳನ್ನು ಒಂದೇ ಮಾನದಂಡದಿಂದ ನೋಡುವುದು ಸರಿಯಲ್ಲ. ಕೆಲವು ಕಾಲೇಜುಗಳು ಅತ್ಯುತ್ತಮ ಮೌಲ್ಯಮಾಪನ ಕಾರ್ಯ ನಡೆಸುತ್ತಿವೆ' ಎಂದರು.

ಕುಲಸಚಿವ (ಮೌಲ್ಯಮಾಪನ) ಪ್ರೊ.ಆರ್.ಕೆ.ಸೋಮಶೇಖರ್ ಪ್ರತಿಕ್ರಿಯಿಸಿ, `ಮೇಲ್ವಿಚಾರಕರ ನೇಮಕದ ಸಂದರ್ಭ ಕಳೆದ ಬಾರಿಯ ಮಾನದಂಡವನ್ನೇ ಈ ಬಾರಿಯೂ ಅನುಸರಿಸಲಾಗಿದೆ. ಸರ್ಕಾರಿ ಕಾಲೇಜುಗಳ ಆರು ಪ್ರಾಂಶುಪಾಲರು ಸೇರಿ 9 ಪ್ರಾಂಶುಪಾಲರನ್ನು ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ. ಮೌಲ್ಯಮಾಪನ ಪ್ರಕ್ರಿಯೆಗೆ ಮುನ್ನ ಸಭೆ ಕರೆದು ಅಕ್ರಮ ಚಟುವಟಿಕೆಗೆ ಅವಕಾಶ ಕೊಡದಂತೆ ಎಚ್ಚರಿಕೆ ನೀಡಿದ್ದೇನೆ' ಎಂದು ಸ್ಪಷ್ಟಪಡಿಸಿದರು.

`ಮೌಲ್ಯಮಾಪನ ಕೇಂದ್ರಗಳಲ್ಲಿ ಸ್ಕ್ಯಾನ್ ಆದ ಡಮ್ಮಿ ಉತ್ತರಪತ್ರಿಕೆಗಳು ಇವೆ. ಇವುಗಳನ್ನು ಬಳಸಿ ಅಕ್ರಮ ಚಟುವಟಿಕೆ ನಡೆಸುವುದು ಅಸಾಧ್ಯ. ಅಲ್ಲದೆ ಮರಿಯಪ್ಪ ಕಾಲೇಜಿನ ಬಿಸಿಎ ಮೌಲ್ಯಮಾಪನ ಈಗಾಗಲೇ ಪೂರ್ಣಗೊಂಡಿದೆ. ಉಳಿದ ಮೂರು ಕಾಲೇಜುಗಳ ಮೇಲ್ವಿಚಾರಕರ ವಿರುದ್ಧ ಕ್ರಮ ಕೈಗೊಳ್ಳಲು ಕುಲಪತಿ ಸೂಚಿಸಿದರೆ ಕೂಡಲೇ ಕಠಿಣ ಕ್ರಮ ಕೈಗೊಳ್ಳುತ್ತೇನೆ' ಎಂದರು.

`ಆರೋಪ ಎದುರಿಸುತ್ತಿರುವ ಮೇಲ್ವಿಚಾರಕರ ವಾಪಸ್ ಕರೆಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು' ಎಂದು ಹಂಗಾಮಿ ಕುಲಪತಿ ಭರವಸೆ ನೀಡಿದ ಬಳಿಕ ಈ ವಿಷಯ ತಣ್ಣಗಾಯಿತು.

ಅಣು ಜೀವವಿಜ್ಞಾನ ಎಂ.ಎಸ್ಸಿ ಶುಲ್ಕ ಇಳಿಕೆ
ವಿದ್ಯಾರ್ಥಿಗಳ ಕೊರತೆ ಹಿನ್ನೆಲೆಯಲ್ಲಿ ವಿವಿಯ ಅಣು ಜೀವವಿಜ್ಞಾನ ಎಂ.ಎಸ್ಸಿ ಪದವಿಯ ಶುಲ್ಕದಲ್ಲಿ 5 ಪಟ್ಟು ಇಳಿಕೆ ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.ಪ್ರೊ.ಎನ್.ರಂಗಸ್ವಾಮಿ ಮಾತನಾಡಿ, `ಈ ವಿಭಾಗದ ಸಂಯೋಜಕರು ಪತ್ರ ಬರೆದು ಶುಲ್ಕ ಕಡಿತ ಮಾಡುವಂತೆ ವಿನಂತಿಸಿದ್ದರು.

ಆರಂಭಿಕ ವರ್ಷದಲ್ಲಿ ಈ ಪದವಿಗೆ ಒಬ್ಬನೇ ವಿದ್ಯಾರ್ಥಿ ಸೇರ್ಪಡೆಯಾಗಿದ್ದ. ಈಗಲೂ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಸಂಶೋಧನೆ ಮತ್ತಿತರ ಕ್ಷೇತ್ರದಲ್ಲಿ ಈ ಪದವಿಗೆ ಭಾರಿ ಬೇಡಿಕೆ ಇದೆ. ಪ್ರಸಕ್ತ ಈ ಪದವಿಯ ವಾರ್ಷಿಕ ಶುಲ್ಕ ರೂ 75 ಸಾವಿರ. ಈ ಮೊತ್ತವನ್ನು ರೂ 15,915ಗೆ ಇಳಿಸುವಂತೆ ವಿನಂತಿಸಲಾಗಿದೆ' ಎಂದು ಮಾಹಿತಿ ನೀಡಿದರು. ಸದಸ್ಯರು ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದರು. 2013-14ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಶುಲ್ಕ ಇಳಿಕೆಯ ಲಾಭ ಪಡೆಯಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.