ADVERTISEMENT

ಅಂಗವಿಕಲರಿಗೆ ಸೌಕರ್ಯ ಕೊರತೆ

​ಪ್ರಜಾವಾಣಿ ವಾರ್ತೆ
Published 12 ಮೇ 2018, 19:38 IST
Last Updated 12 ಮೇ 2018, 19:38 IST

ಬೆಂಗಳೂರು: ಅಂಗವಿಕಲರೂ ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸಿದರು. ಕೆಲವು ಮತಗಟ್ಟೆಗಳಲ್ಲಿ ಅವರಿಗೆ ಸಿಬ್ಬಂದಿ ನೆರವಾದರು. ಇನ್ನು ಕೆಲವೆಡೆ ಕಹಿ ಅನುಭವ ಎದುರಿಸಿದರು.

ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲು, ರ‍್ಯಾಂಪ್ ವ್ಯವಸ್ಥೆ, ಗಾಲಿಕುರ್ಚಿ ಮುಂತಾದ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಎಲ್ಲ ಮತಯಂತ್ರಗಳಲ್ಲಿ ಬ್ರೈಲ್‌ ಲಿಪಿಯಲ್ಲಿ ಅಭ್ಯರ್ಥಿಯ ಹೆಸರು ಬರೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿತ್ತು. ಆದರೆ,  ಕೆಲವು ಮತಗಟ್ಟೆಗಳಲ್ಲಷ್ಟೇ ಇಂತಹ ಸೌಲಭ್ಯಗಳಿದ್ದವು.ಇನ್ನು ಕೆಲವೆಡೆ ಗಾಲಿ ಕುರ್ಚಿಗಳೇ ಇರಲಿಲ್ಲ. ಹಾಗಾಗಿ ಅಂಗವಿಕಲರು ಮೆಟ್ಟಿಲು ಹತ್ತಲು ಅನ್ಯರ ಸಹಾಯ ಪಡೆಯಬೇಕಾಯಿತು. ಅನೇಕ ಕಡೆ ಅಂಗವಿಕಲರೂ ಸರದಿ ಸಾಲಿನಲ್ಲಿ ನಿಂತೇ ಮತ ಹಾಕಬೇಕಾಗಿ ಬಂತು.

ಎಚ್‌ಎಸ್‌ಆರ್‌ ಬಡಾವಣೆ ಕ್ಷೇತ್ರದ ಲಾರೆನ್ಸ್‌ ಶಾಲೆಯ ಮತಗಟ್ಟೆಯಲ್ಲಿ ಗಾಲಿ ಕುರ್ಚಿ ಸೌಲಭ್ಯ ಇಲ್ಲದ ಕಾರಣ 93 ವರ್ಷದ ವೆಂಕಮ್ಮ ಮತಯಂತ್ರದವರೆಗೆ ತಲುಪಲು ಅನ್ಯರ ನೆರವು ಪಡೆದರು.

ADVERTISEMENT

‘ಮತದಾನ ತುಂಬಾ ಮುಖ್ಯ. ಮುಂದಿನ ಬಾರಿ ಮತ ಚಲಾಯಿಸಲು ನಾನು ಬದುಕಿರುತ್ತೇನೋ ಇಲ್ಲವೋ ಗೊತ್ತಿಲ್ಲ. ಮತ ಚಲಾಯಿಸಲು ಗಾಲಿ ಕುರ್ಚಿ ವ್ಯವಸ್ಥೆ ಮಾಡಿದ್ದರೆ ಒಳ್ಳೆಯದಿತ್ತು’ ಎಂದು ವೆಂಕಮ್ಮ ತಿಳಿಸಿದರು.

ಅಂಗವಿಕಲ ಜೆ.ಆರ್‌.ಗುರುರಾಜ್‌ (43) ಶ್ರೀರಾಂಪುರ ಸರ್ವೋದಯ ಸಂಧ್ಯಾ ಪದವಿ ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

‘ಮತದಾನ ನನ್ನ ಕರ್ತವ್ಯ. ನಾವು ಮತ ಚಲಾಯಿಸದಿದ್ದರೆ, ಸಾರ್ವಜನಿಕ  ಸಮಸ್ಯೆಗಳ ಯಾರನ್ನೂ ದೂರುವಂತಿಲ್ಲ’ ಎಂದು ಗುರುರಾಜ್‌ ತಿಳಿಸಿದರು.

ಮೊದಲ ಬಾರಿ ಮತದಾನ ಮಾಡಿದ ರವಿಕುಮಾರ್‌ (23) ಅಂಧರಿಗೆ ಸೌಕರ್ಯಗಳಿಲ್ಲ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು. ‘ಮತಯಂತ್ರದಲ್ಲಿ ಬ್ರೈಲ್‌ ಲಿಪಿಯಲ್ಲಿ ಅಭ್ಯರ್ಥಿಯ ಹೆಸರು ಇರಲಿಲ್ಲ. ನಮ್ಮಂಥವರಿಗೆ ಪ್ರತ್ಯೇಕ ಸಾಲು ಇರಲಿಲ್ಲ. ನನಗೆ ಯಾವ ಸಿಬ್ಬಂದಿಯೂ ನೆರವಾಗಿಲ್ಲ. ಕೊನೆಗೆ ನಾನು ಸಂಬಂಧಿಕರ ನೆರವು ಪಡೆಯಬೇಕಾಯಿತು’ ಎಂದು ಅವರು ತಿಳಿಸಿದರು.

ಮಹದೇವಪುರ ಕ್ಷೇತ್ರದ ಮತದಾರ ಕೆ.ಚಂದ್ರಶೇಖರ ಅವರು ಅಂಗವಿಕಲರಿಗೆ ಕಲ್ಪಿಸಿದ್ದ ಸೌಕರ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.‌

‘ಪಾದಚಾರಿ ಮಾರ್ಗದಲ್ಲಿ ಬಿದ್ದು ನನ್ನ ಕಾಲು ತುಂಡಾಗಿದೆ. ಆದರೂ ಮತದಾನ ಮಾಡುವುದೆಂದರೆ ನನಗೇನೋ ಖುಷಿ. ಮತಗಟ್ಟೆಗೆ ಕರೆದೊಯ್ಯುವಂತೆ ಪತ್ನಿಯನ್ನು ಒತ್ತಾಯಿಸಿದ್ದೆ. ಇಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಮಾಡಿದ್ದರಿಂದ ಅನುಕೂಲವಾಯಿತು’ ಎಂದು ರಾಜನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.