ADVERTISEMENT

ಅಂಗವಿಕಲರಿಗೆ ಸೌಲಭ್ಯ ಒದಗಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ಬೆಂಗಳೂರು: ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತರ ಕಚೇರಿಯ `ಆ್ಯಕ್ಸಿಸ್ ಆಡಿಟ್~ ಸಮಿತಿ ಸದಸ್ಯರು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ವಿ.ವಿ.ಯ ಕೇಂದ್ರ ಕಚೇರಿ, ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿ (ನ್ಯಾಕ್) ಕಚೇರಿ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕಚೇರಿಗಳಿಗೆ ಮಂಗಳವಾರ ಭೇಟಿ  ನೀಡಿ ಪರಿಶೀಲನೆ ನಡೆಸಿದರು.

ಈ ಕಚೇರಿಗಳಲ್ಲಿ ಅಂಗವಿಕಲರಿಗೆ ಅನುಕೂಲಕರವಾದ ಸೌಲಭ್ಯ ಮತ್ತು ವಾತಾವರಣ ಇಲ್ಲದಿರುವುದನ್ನು ಸಮಿತಿ ಸದಸ್ಯರು ಗುರುತಿಸಿದರು.

ಬೆಂಗಳೂರು ವಿ.ವಿ.ಯ ಕೇಂದ್ರ ಕಚೇರಿಯಲ್ಲಿರುವ ಲಿಫ್ಟ್ ಬದಲಾಯಿಸಬೇಕು, ರ‌್ಯಾಂಪ್ ನಿರ್ಮಿಸಬೇಕು, ಸೆನ್ಸರ್ ಸಹಿತ ಬಾಗಿಲುಗಳನ್ನು ಅಳವಡಿಸಬೇಕು, ಅಂಧರು ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ತಿಳಿದುಕೊಳ್ಳುವಂತೆ ಅನುಕೂಲ ಮಾಡಿಕೊಡಲು ಜಾಸ್ ಸಾಫ್ಟ್‌ವೇರ್ ಅಳವಡಿಸಬೇಕು, ಅಂಗವಿಕಲರು ಬಳಸುವಂತಹ ಶೌಚಾಲಯ ನಿರ್ಮಿಸಬೇಕು ಎಂಬ ಸಲಹೆಯನ್ನು ಸಮಿತಿಯ ನೇತೃತ್ವ ವಹಿಸಿದ್ದ ರಾಜ್ಯ ಅಂಗವಿಕಲ ವ್ಯಕ್ತಿಗಳ ಕಚೇರಿಯ ಆಯುಕ್ತ ಕೆ.ವಿ. ರಾಜಣ್ಣ ನೀಡಿದರು.


ಈ ಸಲಹೆಗಳನ್ನು ಕಾರ್ಯರೂಪಕ್ಕೆ ತರುವುದಾಗಿ ಕುಲ ಸಚಿವ ಪ್ರೊ. ಬಿ.ಸಿ. ಮೈಲಾರಪ್ಪ ಭರವಸೆ ನೀಡಿದರು.
`ಪ್ರಧಾನ ಕಚೇರಿಯಲ್ಲಿ ಅಂಗವಿಕಲರು ಬಂದು ಹೋಗಲು ಸೂಕ್ತ ಸೌಕರ್ಯ ಕಲ್ಪಿಸಿಲ್ಲ. ಹಳೆಯದಾಗಿರುವ ಲಿಫ್ಟ್‌ನಲ್ಲಿ ವೀಲ್‌ಚೇರ್ ಸಮೇತ ವ್ಯಕ್ತಿಯೊಬ್ಬ ಹೋಗಲು ಸಾಧ್ಯವಿಲ್ಲ. ರ‌್ಯಾಂಪ್ ನಿರ್ಮಿಸಲಾಗಿದೆ. ಆದರೆ ಅದು ವೈಜ್ಞಾನಿಕವಾಗಿಲ್ಲ. ಅದನ್ನು ಬಳಸಲು ಸಾಧ್ಯವಾಗದು. ಆದ್ದರಿಂದ ಇದನ್ನು ಸರಿಪಡಿಸಿಕೊಳ್ಳುವಂತೆ ಹೇಳಿದ್ದೇವೆ~ ಎಂದು ರಾಜಣ್ಣ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

`ಅಂಗವಿಕಲರ ಸಮಸ್ಯೆಗಳನ್ನು ಪರಿಹಸರಿಲು ಮತ್ತು ಅವರು ಬೇಡಿಕೆಗಳನ್ನು ಕೇಳಲು ಇನ್‌ಕ್ಲೂಸಿವ್ ಸೆಂಟರ್ ಆರಂಭಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಅಂಗವಿಕಲ ವಿದ್ಯಾರ್ಥಿಗಳ ಸಭೆ ಕರೆದು ಅವರ ಜತೆ ಸಂವಾದ ನಡೆಸಿ ಸಮಸ್ಯೆ ಬಗೆಹರಿಸಬೇಕು. ಆದರೆ ವಿ.ವಿಯಲ್ಲಿ ಈ ಸೆಂಟರ್ ಇಲ್ಲ. ಇದನ್ನು ಆರಂಭಿಸಲು ಸಹ ಹೇಳಲಾಗಿದೆ~ ಎಂದು ಅವರು ಹೇಳಿದರು.

ಇನ್ನು ಮುಂದೆ ಯಾವುದೇ ಕಟ್ಟಡ ನಿರ್ಮಾಣವಾದರೂ ಅಲ್ಲಿ ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಬೇಕು. ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವ ಮುನ್ನ ಈ ಸೌಲಭ್ಯಗಳನ್ನು ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಆ ನಂತರ ಮಂಜೂರು ಮಾಡಿ ಎಂದು ಕುಲಸಚಿವರಿಗೆ ಹೇಳಿದರು.

ಕ್ರಮ ಕೈಗೊಳ್ಳಲಾಗಿದೆ: `ಅಂಗವಿಕಲ ವಿದ್ಯಾರ್ಥಿಗಳು ಓಡಾಡಲು ಅನುಕೂಲವಾಗುವಂತೆ ವೀಲ್ ಚೇರ್‌ಗಳನ್ನು ನೀಡಲಾಗಿದೆ. ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಐನೂರು ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಬ್ರೈಲ್ ಕೇಂದ್ರ ಆರಂಭಿಸಲಾಗಿದ್ದು ಪಠ್ಯವನ್ನು ಬ್ರೈಲ್ ಲಿಪಿಗೆ ತರ್ಜುಮೆ ಮಾಡಿಸಲಾಗಿದೆ. ಸಮಿತಿಯ ಸಲಹೆಯನ್ನು ಸ್ವೀಕರಿಸಲಾಗಿದೆ. ಅಂಗವಿಕಲ ವಿದ್ಯಾರ್ಥಿಗಳ ಸಹಾಯಕ್ಕೆ ಒಬ್ಬ ಅಧಿಕಾರಿಯನ್ನು ನೇಮಿಸಲಾಗುತ್ತದೆ. ವಿಶೇಷ ಸಾಫ್ಟ್‌ವೇರ್‌ಗಳನ್ನು ಖರೀದಿಸಲಾಗುತ್ತದೆ~ ಎಂದು ಮೈಲಾರಪ್ಪ ಹೇಳಿದರು.

ನ್ಯಾಕ್ ಕಚೇರಿಯಲ್ಲಿ ಪ್ರತ್ಯೇಕ ಶೌಚಾಲಯ ಇದೆ. ರ‌್ಯಾಂಪ್ ಮತ್ತು ರೈಲಿಂಗ್ ಸಹ ಇದೆ. ಆದರೆ ಲಿಫ್ಟ್ ಇಲ್ಲ. ಕಾನೂನು ವಿ.ವಿಯಲ್ಲಿ ಸಹ ಅನುಕೂಲಕರವಾದ ವಾತಾವರಣ ಇಲ್ಲ. ನ್ಯಾಕ್ ನಿರ್ದೇಶಕರಾದ ಪ್ರೊ. ಎಚ್.ಎ. ರಂಗನಾಥ್ ಅವರು ಸಕಾರಾತ್ಮವಾಗಿ ಸ್ಪಂದಿಸಿದರು. ಕಾನೂನು ವಿ.ವಿ ಅಧಿಕಾರಿಗಳೂ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ರಾಜಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.