ADVERTISEMENT

ಅಂಗಾಂಗ ಕಸಿ ಪರವಾನಗಿ ರದ್ದು

ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 19:46 IST
Last Updated 4 ಜನವರಿ 2014, 19:46 IST

ಬೆಂಗಳೂರು:  ರಾಜ್ಯದ ಅಂಗಾಂಗ ಕಸಿ ಪ್ರಾಧಿಕಾರವು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಅಂಗಾಂಗ ಕಸಿ ಪರವಾನಗಿಯನ್ನು ರದ್ದುಪಡಿಸಿ ಡಿ.26 ರಂದು ಆದೇಶವನ್ನು ಹೊರಡಿಸಿದೆ.

ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿವೃತ್ತ ಮೇಜರ್‌ ಪಂಕಜ್‌ ರೈ ಅವರು, ‘ನನ್ನ ಪತ್ನಿ ಸೀಮಾ ರೈ ಅವರು ಸಾವನ್ನಪ್ಪಲು ಫೋರ್ಟಿಸ್ ಆಸ್ಪತ್ರೆಯ ವೈದ್ಯರ ಲೋಪವೇ ಕಾರಣ ಎಂಬುದು ರಾಜ್ಯದ ಅಂಗಾಂಗ ಕಸಿ ಪ್ರಾಧಿಕಾರದ ತನಿಖೆಯಿಂದ ಸ್ಪಷ್ಟವಾಗಿದೆ’ ಎಂದು ತಿಳಿಸಿದರು.

‘ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲು ಸೀಮಾ ರೈ 2010ರಲ್ಲಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ವೈದ್ಯರು ಸೀಮಾ ಅವರ ಅನುಮತಿ ಪಡೆಯದೆ ಮೂತ್ರಪಿಂಡ ಕಸಿಯ ಬದಲು ಮೇದೋಜೀರಕ ಗ್ರಂಥಿ ಕಸಿ ಶಸ್ತ್ರ ಚಿಕಿತ್ಸೆ ನಡೆಸಿದ್ದರು. ಶಸ್ತ್ರ ಚಿಕಿತ್ಸೆಯಾದ ನಂತರ ಸೀಮಾ ಮೃತಪಟ್ಟರು’ ಎಂದರು.

‘ಫೋರ್ಟಿಸ್‌ ಆಸ್ಪತ್ರೆಯು ಅಂಗಾಂಗ ಕಸಿ ವಿಚಾರದಲ್ಲಿ ವ್ಯಾವಹಾರಿಕ ದೃಷ್ಟಿಕೋನವನ್ನು ಹೊಂದಿದೆ.  ಇಂತಹ ಆಸ್ಪತ್ರೆಯ ಮೇಲೆ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಆದೇಶದ ವಿರುದ್ಧ ಮೇಲ್ಮನವಿ
‘ಸೀಮಾ ರೈ ಅವರಿಗೆ 2010ರ ಮೇ ತಿಂಗಳಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ರಾಜ್ಯದ ಅಂಗಾಂಗ ಕಸಿ ಪ್ರಾಧಿಕಾರವು ನೀಡಿರುವ ವಿರುದ್ಧ ಕೇಂದ್ರ ಆರೋಗ್ಯ ಇಲಾಖೆಗೆ ಮೇಲ್ಮನವಿ ಸಲ್ಲಿಸಲಾಗುವುದು’ ಎಂದು ಫೋರ್ಟಿಸ್‌ ಆಸ್ಪತ್ರೆ ಪ್ರತಿಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.