ADVERTISEMENT

ಅಂಚೆ ಇಲಾಖೆ ಬ್ಯಾಂಕ್‌ ಏಪ್ರಿಲ್‌ನಲ್ಲಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 19:51 IST
Last Updated 28 ಮಾರ್ಚ್ 2018, 19:51 IST
ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭದಲ್ಲಿ ಲಯನ್ಸ್‌ ಇಂಟರ್‌ನ್ಯಾಷನಲ್‌ ಐ ಬ್ಯಾಂಕ್‌ ವ್ಯವಸ್ಥಾಪಕ ಟ್ರಸ್ಟಿ (ಎಡದಿಂದ) ಪಿ.ಎಸ್‌.ಪ್ರೇಮನಾಥ್‌, ಕೆ .ದಿನೇಶ್‌, ಗೌರವ ಕಾರ್ಯದರ್ಶಿ ಐ.ಎಸ್‌.ಪ್ರಸಾದ್‌, ಡಾ.ಚಾರ್ಲ್ಸ್‌ ಲೋಬೊ, ವೈದ್ಯಕೀಯ ನಿರ್ದೇಶಕಿ ಡಾ.ರೇಖಾ ಗ್ಯಾನ್‌ಚಂದ್‌ ಇದ್ದರು –ಪ್ರಜಾವಾಣಿ ಚಿತ್ರ
ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭದಲ್ಲಿ ಲಯನ್ಸ್‌ ಇಂಟರ್‌ನ್ಯಾಷನಲ್‌ ಐ ಬ್ಯಾಂಕ್‌ ವ್ಯವಸ್ಥಾಪಕ ಟ್ರಸ್ಟಿ (ಎಡದಿಂದ) ಪಿ.ಎಸ್‌.ಪ್ರೇಮನಾಥ್‌, ಕೆ .ದಿನೇಶ್‌, ಗೌರವ ಕಾರ್ಯದರ್ಶಿ ಐ.ಎಸ್‌.ಪ್ರಸಾದ್‌, ಡಾ.ಚಾರ್ಲ್ಸ್‌ ಲೋಬೊ, ವೈದ್ಯಕೀಯ ನಿರ್ದೇಶಕಿ ಡಾ.ರೇಖಾ ಗ್ಯಾನ್‌ಚಂದ್‌ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಭಾರತೀಯ ಅಂಚೆ ಇಲಾಖೆಯ ಪೇಮೆಂಟ್ಸ್‌ ಬ್ಯಾಂಕ್‌ (ಐಪಿಪಿಬಿ) ಏಪ್ರಿಲ್‌ನಿಂದ ಕಾರ್ಯಾರಂಭ ಮಾಡಲಿದೆ ಎಂದು ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ.ಚಾರ್ಲ್ಸ್‌ ಲೋಬೊ ತಿಳಿಸಿದರು.

ಲಯನ್ಸ್‌ ಇಂಟರ್‌ ನ್ಯಾಷನಲ್‌ ಐ ಬ್ಯಾಂಕ್‌ 30,000 ನೇತ್ರದಾನ ಮಾಡಿಸಿರುವ ಪ್ರಯುಕ್ತ ಭಾರತೀಯ ಅಂಚೆ ಇಲಾಖೆ ಹೊರ ತಂದಿರುವ ವಿಶೇಷ ಅಂಚೆ ಲಕೋಟೆಯನ್ನು ನಗರದಲ್ಲಿ ಬುಧವಾರ ಬಿಡುಗಡೆ ಮಾಡಿ ಮಾತನಾಡಿದರು.

150 ವರ್ಷಗಳ ಇತಿಹಾಸದಲ್ಲೇ ಅಂಚೆ ಇಲಾಖೆ ಸ್ವಂತ ಬ್ಯಾಂಕ್‌ ಹೊಂದುವ ಮಹತ್ವದ ಹೆಜ್ಜೆಯನ್ನು ಇಡುತ್ತಿದೆ. ಬ್ಯಾಂಕಿಂಗ್‌ ವ್ಯವಸ್ಥೆಗೆ ಬೇಕಾದ ಸಾಫ್ಟ್‌ವೇರ್‌ ಕೂಡ ಸಿದ್ಧಗೊಂಡಿದೆ. ಪೇಮೆಂಟ್ಸ್‌ ಬ್ಯಾಂಕ್‌ ಶಾಖೆಗಳು ಸನ್ನದ್ಧವಾಗಿವೆ ಎಂದರು.

ADVERTISEMENT

ಎಲ್ಲ ಬ್ಯಾಂಕುಗಳಂತೆಯೇ ಅಂಚೆ ಇಲಾಖೆ ಪೇಮೆಂಟ್ಸ್‌ ಬ್ಯಾಂಕ್‌ ಉಳಿತಾಯ ಖಾತೆ, ಸಣ್ಣ ಉಳಿತಾಯ ಠೇವಣಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಠೇವಣಿ, ಎನ್‌ಸಿಇ ಸೇರಿ ಎಲ್ಲ ರೀತಿಯ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಿದೆ. ಬೇರೆಲ್ಲ ಬ್ಯಾಂಕುಗಳು ಜನರಿಂದ ಸಂಗ್ರಹಿಸುವ ಹಣ ಮತ್ತೆ ಸಾಲದ ರೂಪದಲ್ಲಿ ಗ್ರಾಹಕರ ಕೈ ಸೇರುತ್ತದೆ. ಆದರೆ, ಪೇಮೆಂಟ್ಸ್‌ ಬ್ಯಾಂಕ್‌ ಸಂಗ್ರಹಿಸುವ ಹಣ ನೇರವಾಗಿ ಹಣಕಾಸು ಇಲಾಖೆಗೆ ಹೋಗಲಿದೆ. ಆ ನಂತರ ಅದು
ಅಭಿವೃದ್ಧಿ ಚಟುವಟಿಕೆಯಲ್ಲಿ ಬಂಡವಾಳವಾಗಿ ಹೂಡಿಕೆಯಾಗಲಿದೆ ಎಂದು ತಿಳಿಸಿದರು.

‘ಆರೋಗ್ಯ ಕ್ಷೇತ್ರದಲ್ಲೂ ಅನೇಕ ರೀತಿಯ ಬ್ಯಾಂಕುಗಳು ಇವೆ. ಬ್ಲಡ್‌ ಬ್ಯಾಂಕ್‌, ವೀರ್ಯ ಬ್ಯಾಂಕ್‌, ಎದೆಹಾಲಿನ ಬ್ಯಾಂಕುಗಳಿರುವಂತೆ ಕಣ್ಣಿನ ಬ್ಯಾಂಕ್‌ ಇದೆ. ಲಯನ್ಸ್‌ ಇಂಟರ್‌ ನ್ಯಾಷನಲ್‌ ಐ ಬ್ಯಾಂಕ್‌ ದೇಶದ ಎರಡನೇ ಕಣ್ಣಿನ ಬ್ಯಾಂಕ್‌ ಹೊಂದಿದೆ. ಇದುವರೆಗೆ 30,000 ನೇತ್ರ ದಾನ ಮಾಡಿಸಿರುವುದು ಒಂದು ಮೈಲುಗಲ್ಲು. ನೇತ್ರದಾನದಲ್ಲಿ ದೊಡ್ಡ ಕ್ರಾಂತಿಯೇ ನಡೆಯಬೇಕೆಂದು ವಿಶೇಷ ಅಂಚೆ ಲಕೋಟೆ ತಂದಿದ್ದೇವೆ’ ಎಂದರು.

ಇನ್ಫೊಸಿಸ್‌ ಸಹ ಸಂಸ್ಥಾಪಕ ಕೆ.ದಿನೇಶ್‌ ಮಾತನಾಡಿ, ‘ನಾವು ಆಧುನಿಕ ಯುಗದಲ್ಲಿದ್ದೇವೆ. ಸದ್ಯದ ಸಮಾಜದಲ್ಲಿ ತಂತ್ರಜ್ಞಾನ ಮತ್ತು ಜ್ಞಾನ ಪ್ರಮುಖ ಪಾತ್ರ ವಹಿಸುತ್ತಿವೆ. ಮುಂದಿನ ಶತಮಾನದಲ್ಲಿ ಕೃತಕ ಬುದ್ಧಿಮತ್ತೆ, ದತ್ತಾಂಶ, ಜ್ಞಾನ ಹಾಗೂ ಕೌಶಲವೇ
ಪ್ರಧಾನವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.