ADVERTISEMENT

ಅಕ್ರಮ ಗಣಿಗಾರಿಕೆ- ಬೊಕ್ಕಸಕ್ಕೆ ನಷ್ಟ ತನಿಖೆ: ರಾಜ್ಯಕ್ಕೆ ಸಿಇಸಿ ತಾಕೀತು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 19:55 IST
Last Updated 15 ಮಾರ್ಚ್ 2011, 19:55 IST

ಬೆಂಗಳೂರು: ಧರ್ಮಸಿಂಗ್ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಗೆ ನೆರವಾಗುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟುಮಾಡಿದ್ದಾರೆ ಎಂಬ ಲೋಕಾಯುಕ್ತರ ವರದಿ ಆಧರಿಸಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸುಪ್ರೀಂಕೋರ್ಟ್‌ನ ಉನ್ನತಾಧಿಕಾರ ಸಮಿತಿ (ಸಿಇಸಿ) ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಬಳ್ಳಾರಿ ಜಿಲ್ಲೆಯ ವಿವಿಧೆಡೆ ನಡೆದಿರುವ ಅಕ್ರಮ ಗಣಿಗಾರಿಕೆ ಪ್ರಶ್ನಿಸಿ ಸಮಾಜ ಪರಿವರ್ತನ ಸಮುದಾಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ಅಂಗವಾಗಿ ಇದೇ 25ರಿಂದ 28ರವರೆಗೆ ಸಿಇಸಿ ಬಳ್ಳಾರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದೆ.

ಪ್ರಕರಣದ ತನಿಖೆಯ ಭಾಗವಾಗಿ ಸರ್ಕಾರಕ್ಕೆ ಪತ್ರ ಬರೆದಿರುವ ಸಿಇಸಿ, ಲೋಕಾಯುಕ್ತರ ವರದಿ ಆಧರಿಸಿ ಧರ್ಮಸಿಂಗ್ ಮತ್ತು ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದೆ. ಆರೋಪಿತ ರಾಜಕಾರಣಿಗಳು ಮತ್ತು ಅಧಿಕಾರಿಗಳಿಂದ ನಷ್ಟ ವಸೂಲಿ ಮಾಡಲಾಗಿದೆಯೇ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದೆ.

ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ಮೂಲಕ ಧರ್ಮಸಿಂಗ್ ಸರ್ಕಾರದ ಬೊಕ್ಕಸಕ್ಕೆ 23.22 ಕೋಟಿ ರೂಪಾಯಿ ನಷ್ಟ ಉಂಟುಮಾಡಿದ್ದರು ಎಂಬ ಲೋಕಾಯುಕ್ತರ ವರದಿಯ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆಯೂ ಸಮಿತಿ ಸರ್ಕಾರವನ್ನು ಕೇಳಿದೆ.

ಅರಣ್ಯದಲ್ಲಿ ಗಣಿಗಾರಿಕೆ:ಬಳ್ಳಾರಿ, ಹೊಸಪೇಟೆ ಮತ್ತು ಸಂಡೂರು ಗಣಿ ವಲಯಗಳಲ್ಲಿ 1,081.40 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು 2008ರಲ್ಲಿ ಲೋಕಾಯುಕ್ತರು ವರದಿ ಸಲ್ಲಿಸಿದ್ದರು. ಈ ಸಂಬಂಧ ಸರ್ಕಾರ ಕೈಗೊಂಡ ಕ್ರಮಗಳೇನು? ಎಂಬ ಪ್ರಶ್ನೆಯನ್ನೂ ಸಿಇಸಿ ಸರ್ಕಾರದ ಎದುರು ಇಟ್ಟಿದೆ.

ಸರ್ಕಾರ ನೀಡಿರುವ ಗಣಿ ಗುತ್ತಿಗೆಗಳ ವಿವರ, ನಕ್ಷೆ, ಅರಣ್ಯ ಪ್ರದೇಶದ ಒಳಗಿರುವ ಗಣಿಗಳ ಮಾಹಿತಿ, ಅರಣ್ಯ ಸಂರಕ್ಷಣಾ ಕಾಯ್ದೆಯ ಪ್ರಕಾರ ಗಣಿಗಾರಿಕೆಗೆ ನೀಡಿರುವ ಅನುಮತಿಯ ವಿವರ ಒದಗಿಸುವಂತೆಯೂ ಸಮಿತಿ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ವಿವಿಧ ಖಾಸಗಿ ಕಂಪೆನಿಗಳ ಜೊತೆ ಮಾಡಿಕೊಂಡಿರುವ ಒಡಂಬಡಿಕೆಗಳ ಬಗ್ಗೆಯೂ ಸಿಇಸಿ ತನಿಖೆ ನಡೆಸುತ್ತಿದೆ.

ಸಿಇಸಿ ಬಯಸಿರುವ ಮಾಹಿತಿಯ ವಿವರ
* ಬೇಲೆಕೇರಿ ಬಂದರಿನಿಂದ ಐದು ಲಕ್ಷ ಟನ್ ಅದಿರು ನಾಪತ್ತೆ ಆಗಿರುವ ಪ್ರಕರಣ
* ಅರಣ್ಯ ಭೂಮಿಯನ್ನು ಗಣಿಗಾರಿಕೆಗೆ ಮುಕ್ತಗೊಳಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು.
* ಗಣಿ ಗುತ್ತಿಗೆಗಳನ್ನು ಉಪ ಗುತ್ತಿಗೆಗೆ (ರೇಸಿಂಗ್ ಕಾಂಟ್ರಾಕ್ಟ್) ನೀಡುವುದರ ವಿರುದ್ಧ ಕೈಗೊಂಡ ಕ್ರಮಗಳ ವಿವರ.
* ಎಂಎಸ್‌ಪಿಎಲ್ ಮತ್ತು ಎಸ್‌ಬಿ ಮಿನರಲ್ಸ್ ನಡುವಣ ವಿವಾದದ ಸಂಬಂಧ ಕೈಗೊಂಡ ಕ್ರಮಗಳ ವಿವರ.
* ಅದಿರು ಸಾಗಣೆಗೆ ನೀಡಿರುವ ಪರವಾನಗಿ ಮತ್ತು ರಫ್ತಾಗಿರುವ ಅದಿರಿನ ಪ್ರಮಾಣದ ವರ್ಷವಾರು ಅಂಕಿ-ಅಂಶ ಕುರಿತು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ನೀಡಿದ್ದ ಹೇಳಿಕೆ.
* ಲೋಕಾಯುಕ್ತ ವರದಿ ಆಧರಿಸಿ ಕೈಗೊಂಡ ಕ್ರಮಗಳ ವಿವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.