ADVERTISEMENT

ಅಕ್ರಮ ಗ್ಯಾಸ್ ಮಾರಾಟ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST
ಅಕ್ರಮ ಗ್ಯಾಸ್ ಮಾರಾಟ
ಅಕ್ರಮ ಗ್ಯಾಸ್ ಮಾರಾಟ   

ಬೆಂಗಳೂರು: ಅಡುಗೆ ಅನಿಲವನ್ನು ಗ್ರಾಹಕರಿಗೆ ನೀಡದೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಕೂಡಲೇ ವಿತರಕರನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ಜಯನಗರದ ಗ್ಯಾಸ್ ಏಜೆನ್ಸಿಯ ಮುಂದೆ ಸ್ಥಳೀಯ ಗ್ರಾಹಕರು ಶನಿವಾರ ಪ್ರತಿಭಟನೆ ನಡೆಸಿದರು.

ಕಳೆದ ಆರು ತಿಂಗಳಿಂದ ಜಯನಗರದ ಸುತ್ತಮುತ್ತಲ ಮನೆಗಳಿಗೆ ಸರಿಯಾಗಿ ಅಡುಗೆ ಅನಿಲದ ಪೂರೈಕೆಯಾಗುತ್ತಿಲ್ಲ. ಪ್ರತಿ 93 ದಿನಗಳಿಗೊಮ್ಮೆ ಒಂದು ಸಿಲಿಂಡರ್ ನೀಡಲಾಗುತ್ತಿದೆ. ಪ್ರತಿದಿನ ಹೋಟೆಲ್‌ನಲ್ಲಿ ಊಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಡುಗೆ ಅನಿಲಕ್ಕಾಗಿ ಆನ್‌ಲೈನ್ ಮೂಲಕ ಹೆಸರು ನೊಂದಾಯಿಸಬೇಕು ಎಂಬ ಹೊಸ ನಿಯಮ ಜಾರಿಗೆ ತಂದಿದ್ದಾರೆ. ಆನ್‌ಲೈನ್‌ನಲ್ಲಿ ಹೆಸರು ನೊಂದಾಯಿಸಿ 45 ದಿನಗಳಾದರೂ ಇನ್ನೂ ಪೂರೈಕೆಯಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಆಟೊ ಚಾಲಕರಿಗೆ ಹಾಗೂ ಹೆಚ್ಚು ಹಣ ಕೊಡುವವರಿಗೆ ಅಡುಗೆ ಅನಿಲವನ್ನು ನೀಡುವ ಮೂಲಕ ಗ್ರಾಹಕರನ್ನು ವಂಚಿಸಲಾಗುತ್ತಿದೆ, ಕೂಡಲೇ ವಿತರಕರನ್ನು ಬದಲಾವಣೆ ಮಾಡಬೇಕು ಅಥವಾ ಪರ್ಯಾಯ ವ್ಯವಸ್ಥೆಯನ್ನಾದರೂ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
 
ಈ ಸಂಬಂಧ ಮುಖ್ಯಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಇದರ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎನ್ನುತ್ತಾರೆ. ಸಮಸ್ಯೆಯನ್ನು ಪರಿಹರಿಸುವಂತೆ ಶೀಘ್ರವೇ ಸರ್ಕಾರಕ್ಕೂ ಮನವಿ ಸಲ್ಲಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.