ADVERTISEMENT

ಅಕ್ರಮ ಭೂ ಒತ್ತುವರಿ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST

ಬೆಂಗಳೂರು:  `ಅಕ್ರಮ ಭೂ ಒತ್ತುವರಿಯ ಕುರಿತು ಸರ್ಕಾರ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಅಕ್ರಮ ಭೂ ಒತ್ತುವರಿಯಲ್ಲಿ ಪ್ರಬಲವಾದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಭೂ ಮಾಫಿಯಾದವರಿದ್ದು ಅವರ ವಿರುದ್ಧ ಈ ಕೂಡಲೇ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.

`ಸಮಾಜ ಪರಿವರ್ತನಾ ಸಮುದಾಯವು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅನ್ವಯ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ರಾಮಮೋಹನ ರೆಡ್ಡಿ ಮತ್ತು ಎಲ್ ನಾರಾಯಣ ಸ್ವಾಮಿ ಅವರನ್ನೊಳಗೊಂಡ ಪೀಠವು ಅರಣ್ಯ ಇಲಾಖೆ, ಸರ್ಕಾರ ಮತ್ತು ಕರ್ನಾಟಕ ಭೂ ನಿಗಮಗಳಿಗೆ ಮೇ 3 ರಂದು ನೋಟಿಸ್ ಜಾರಿ ಮಾಡಿದೆ' ಎಂದು ಮಾಹಿತಿ ನೀಡಿದರು.

`ಬೆಂಗಳೂರು ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ರಾಮಾಂಜನೇಯ ಅವರನ್ನು ಭ್ರಷ್ಟಾಚಾರ ಆರೋಪದ ಮೇಲೆ ಬಂಧಿಸಲಾಗಿದೆ. ಆದರೆ, 428 ಭೂ ಒತ್ತುವರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಅಂದಿನ ಬೆಂಗಳೂರು ಪ್ರಾದೇಶಿಕ ಆಯುಕ್ತರು ತನಿಖೆ ಮಾಡಿ ವರದಿಯನ್ನು ನೀಡಿದ್ದಾರೆ. ಆದರೆ, ಈ ಒತ್ತುವರಿಯ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಬೆಂಗಳೂರಿನ 2,800 ಎಕರೆಯಷ್ಟು (850 ಕಿ.ಮೀ) ರಾಜಕಾಲುವೆ ಮತ್ತು ಕೆರೆಗಳನ್ನು ಒತ್ತುವರಿ ಮಾಡಲಾಗಿದೆ. ಕರ್ನಾಟಕ ಭೂ ಕಾಯ್ದೆಯ 1999 ರ ತಿದ್ದುಪಡಿಯ ಹೊರತಾಗಿಯೂ ನಗರದ ಸುತ್ತಮುತ್ತ 5,000 ಎಕರೆಯಷ್ಟು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಅಲ್ಲದೇ ಬಿಬಿಎಂಪಿಯ ಮುಂದೆ 15,000 ಎಕರೆ ಪ್ರದೇಶಕ್ಕೆ ಬಂದಿರುವ ಕೋರಿಕೆ ಅರ್ಜಿಗಳನ್ನು ತಿರಸ್ಕರಿಸದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.