ADVERTISEMENT

ಅಕ್ರಮ ಮನೆಗಳ ನೆಲಸಮ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 20:40 IST
Last Updated 15 ಜೂನ್ 2011, 20:40 IST

ಬೆಂಗಳೂರು: ದೊಮ್ಮಲೂರು ಸಮೀಪದ ಅಮರಜ್ಯೋತಿ ನಗರದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಎಂಟು ಮನೆಗಳನ್ನು ಬಿಬಿಎಂಪಿ ಸಿಬ್ಬಂದಿ ಬುಧವಾರ ಬೆಳಿಗ್ಗೆ ನೆಲಸಮಗೊಳಿಸಿದರು.

ಅಮರಜ್ಯೋತಿ ನಗರದಿಂದ ಕೋರಮಂಗಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಈ ಮನೆಗಳನ್ನು ನಿರ್ಮಿಸಲಾಗಿತ್ತು. ಮನೆಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದರು ಪ್ರಯೋಜನ ಆಗಿರಲಿಲ್ಲ. ರಸ್ತೆಗೆ ಅಡ್ಡವಿರುವ ಮನೆಗಳನ್ನು ನೆಲಸಮಗೊಳಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಮನೆಗಳನ್ನು ಕೆಡವಲಾಯಿತು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯ ಮಾಲೀಕರು ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಪೊಲೀಸರ ಭದ್ರತೆಯಲ್ಲಿ ಎಲ್ಲ ಮನೆಗಳನ್ನು ನೆಲಸಮ ಮಾಡಲಾಯಿತು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎನ್.ಎ.ಹ್ಯಾರಿಸ್ ಅವರು ಮನೆ ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

`ಸೂರ್ಯನಾರಾಯಣ ದೇವಸ್ಥಾನದ ಕಾಂಪೌಂಡ್ ಸಹ ರಸ್ತೆಗೆ ಅಡ್ಡವಿದೆ. ದೇವಸ್ಥಾನದ ಮುಖ್ಯಸ್ಥರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿ ಕಾಂಪೌಂಡ್ ಕೆಡವಲಾಗುತ್ತದೆ. ರಸ್ತೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಮಾಡಿಕೊಡುವುದಷ್ಟೇ ಉದ್ದೇಶ~ ಎಂದು ಹ್ಯಾರಿಸ್ ಹೇಳಿದರು. ಪಾಲಿಕೆಯ ಜಂಟಿ ಆಯುಕ್ತ ಶಿವಶಂಕರ್, ಪಶ್ಚಿಮ ವಲಯದ ಮುಖ್ಯ ಎಂಜಿನಿಯರ್ ಸೋಮಶೇಖರ್ ಅವರು ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.