ADVERTISEMENT

ಅಗ್ನಿ ಅನಾಹುತ: ದಿನಬಳಕೆ ವಸ್ತುಗಳು ಭಸ್ಮ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 20:22 IST
Last Updated 20 ಡಿಸೆಂಬರ್ 2013, 20:22 IST

ಬೆಂಗಳೂರು:  ವಸಂತನಗರದ 10ನೇ ಅಡ್ಡರಸ್ತೆಯಲ್ಲಿರುವ ‘ಬೆಂಗಳೂರು ಹೋಂ ನೀಡ್ಸ್ ಡಿಪಾರ್ಟ್‌ಮೆಂಟಲ್‌ ಸ್ಟೋರ್‌್ಸ್‌  ಪ್ರೈವೇಟ್‌ ಲಿಮಿಟೆಡ್’
ಎಂಬ ದಿನಬಳಕೆ ವಸ್ತುಗಳ ಮಾರಾಟ ಮಳಿಗೆಗೆ ಶುಕ್ರವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

ಮಧ್ಯಾಹ್ನ ಮೂರು ಗಂಟೆ ಸುಮಾರಿ­ಗೆ ಮಳಿಗೆಯಲ್ಲಿ ಬೆಂಕಿ ಕಾಣಿಸಿ­ಕೊಂಡಿ­ದ್ದು, ಸ್ಥಳೀಯರು ಹೈಗ್ರೌಂಡ್ಸ್‌ ಠಾಣೆಗೆ ಹಾಗೂ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿ­ದ್ದಾರೆ. ಕೂಡಲೇ ಮೂರು ವಾಹನ­ಗಳಲ್ಲಿ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಸಿಬ್ಬಂದಿ, ಸುಮಾರು ಒಂದೂವರೆ ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಯಾವುದೇ ಪ್ರಾಣಾ­ಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅದು ಮೂರು ಅಂತಸ್ತಿನ ಕಟ್ಟಡ­ವಾಗಿದ್ದು, ಕೇರಳ ಮೂಲದ ಸಾಬು ಎಂಬುವರು ನೆಲಮಹಡಿಯಲ್ಲಿ 20 ವರ್ಷಗಳಿಂದ ದಿನಬಳಕೆಯ ವಸ್ತುಗಳ ಮಾರಾಟ ಮಳಿಗೆ ನಡೆಸುತ್ತಿದ್ದರು. ಅನಾಹುತದ ವೇಳೆ ನೌಕರರು ಹಾಗೂ ಗ್ರಾಹಕರು ಸೇರಿ 20 ಮಂದಿ ಮಳಿಗೆ ಒಳಗಿದ್ದರು. ಹೊಗೆ ಕಾಣಿಸಿಕೊಳ್ಳುತ್ತಿ­ದ್ದಂತೆಯೇ ಎಲ್ಲರೂ ಹೊರಗೆ ಓಡಿ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಈ ಘಟನೆ ನಡೆದಿದ್ದು, ಸ್ಥಳಕ್ಕೆ ತೆರಳಿದ ಕೂಡಲೇ ಪೊಲೀಸರು ಮಳಿಗೆಯಲ್ಲಿದ್ದ ಗ್ಯಾಸ್‌ ಸಿಲಿಂಡರ್‌ಗಳನ್ನು ಹೊರ ಹಾಕಿದ್ದಾರೆ. ಹೀಗಾಗಿ ದೊಡ್ಡ ಮಟ್ಟದ ಅನಾಹುತ ಸಂಭವಿಸಿಲ್ಲ. ಮಳಿಗೆಯಲ್ಲಿದ್ದ ಶೇ.40ರಷ್ಟು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ’ ಎಂದು ಅಗ್ನಿಶಾಮಕ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.