ಬೆಂಗಳೂರು:`ಬದುಕಿನಲ್ಲಿ ಮನುಷ್ಯ ಎಲ್ಲ ರೀತಿಯ ಆಘಾತಗಳನ್ನೂ ಎದುರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು~ ಎಂದು ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘ ರಾಜೇಂದ್ರ ಶರಣರು ಕರೆ ನೀಡಿದರು.
ನಗರದಲ್ಲಿ ಬುಧವಾರ ಬಸವಕೇಂದ್ರ ಮತ್ತು ಕರ್ನಾಟಕ ರಾಜ್ಯ ವೀರಶೈವ ನೌಕರರ ಲಿಂಗಾಯಿತ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ `ಶರಣ ಸಂಗಮ - ಅರಿವಿನ ಅಂಗಳ~ ಕಾರ್ಯಕ್ರಮದಲ್ಲಿ ಅವರ ಮಾತನಾಡಿದರು.
`ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿನ ಜನರಲ್ಲಿಯೂ ಜಿಗುಪ್ಸೆ ಹಾಗೂ ಜಡತ್ವಗಳು ಹೆಚ್ಚುತ್ತಿವೆ. ವಿದ್ಯಾರ್ಥಿಗಳಲ್ಲಿ ಸೋಲಿನ ಬಗ್ಗೆ ಸಾಕಷ್ಟು ಭೀತಿಗಳು ಹುಟ್ಟಿಕೊಂಡಿವೆ. ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳ ಕಾರಣಕ್ಕೆ ತಾವೇ ದುರಂತಗಳಿಗೆ ಈಡಾಗುವ ವಿದ್ಯಾರ್ಥಿಗಳು ಹೆಚ್ಚಾಗುತ್ತಿದ್ದಾರೆ.
ಕೇವಲ ಅಂಕಗಳ ವಿದ್ಯೆಯೇ ಬದುಕಿನಲ್ಲಿ ಮುಖ್ಯವಲ್ಲ ಎಂಬ ವಿಚಾರವನ್ನು ಎಲ್ಲ ವಿದ್ಯಾರ್ಥಿಗಳು ಅರಿಯಬೇಕು. ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ತುಂಬುವ ಬಗ್ಗೆ ಎಲ್ಲರೂ ಯೋಚಿಸಬೇಕು~ ಎಂದರು. ಕಾರ್ಯಕ್ರಮದಲ್ಲಿ ಸಮಾಜದ ಎಸ್.ಚಂದ್ರಣ್ಣ, ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎ. ದೇವಪ್ರಕಾಶ್, ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ಬಿ.ಸಚ್ಚಿದಾನಂದ ಹಾಗೂ ಸೈಯ್ಯದ್ ಜಮಾಲ್ ಅವರನ್ನು ಸನ್ಮಾನಿಸಲಾಯಿತು.
ಶ್ರೀಪಾದಗಡ್ಡಿ ಮತ್ತು ತಂಡದವರು ವಚನ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಕರ್ನಾಟಕ ರಾಜ್ಯ ವೀರಶೈವ ನೌಕರರ ಲಿಂಗಾಯಿತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಸೋಮೇಶ್ ಚಿಕ್ಕಮಠ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.