ಹೊಸಕೋಟೆ: ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಶಾಲಾ ಬಾಲಕಿಯೊಬ್ಬಳ ಸಾವಿಗೆ ಕಾರಣನಾದ ಚಾಲಕನಿಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಮೂರು ತಿಂಗಳ ಶಿಕ್ಷೆ ವಿಧಿಸಿದೆ.
ಇಲ್ಲಿನ ಪಾರ್ವತಿಪುರದ ನಿವಾಸಿ ನಾಗರಾಜು (48) ಶಿಕ್ಷೆಗೊಳಗಾದ ಚಾಲಕ. ಸೇಂಟ್ ಜೋಸೆಫ್ ಶಾಲಾ ವಾಹನದ ಚಾಲಕನಾಗಿದ್ದ ಈತ, 2007ರ ಮಾರ್ಚ್ 3ರಂದು ಶಾಲಾ ಮಕ್ಕಳನ್ನು ಖಾಜಿ ಹೊಸಹಳ್ಳಿ ಗ್ರಾಮಕ್ಕೆ ಬಿಟ್ಟು ಬರಲು ಹೋಗಿದ್ದ. ವಾಹನದಿಂದ ಮಕ್ಕಳು ಇಳಿದ ತಕ್ಷಣ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿದ ಪರಿಣಾಮ ಶ್ರೀನಿಧಿ (5) ಎಂಬ ಬಾಲಕಿ ಮೃತಪಟ್ಟಿದ್ದಳು.
ಆರೋಪಿಗೆ ಐಪಿಸಿ 279 ಕಲಂ ಅನ್ವಯ ಮೂರು ತಿಂಗಳ ಸಜೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ ಮತ್ತೆ 15 ದಿನ ಸಜೆ, ಐಪಿಸಿ 304 (ಎ) ಕಲಂ ಅನ್ವಯ ಒಂದು ವರ್ಷ ಸಜೆ ಹಾಗೂ ಒಂದು ಸಾವಿರ ರೂಪಾಯಿ ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಮತ್ತೆ ಮೂರು ತಿಂಗಳ ಶಿಕ್ಷೆ ಅನುಭವಿಸುವಂತೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಸ್.ಶರ್ಮಿಳಾ ಬುಧವಾರ ತೀರ್ಪು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.