ADVERTISEMENT

ಅಜ್ಜಿಯ ಕೊಂದು, ‘ಸಹಜ ಸಾವು’ ಎಂದ!

ಕೆಲಸಕ್ಕೆ ಹೋಗು ಎಂದಿದ್ದಕ್ಕೇ ಕುತ್ತಿಗೆ ಹಿಸುಕಿದ l 5 ದಿನಗಳ ಬಳಿಕ ಸಾವಿನ ರಹಸ್ಯ ಬಯಲು

ಎಂ.ಸಿ.ಮಂಜುನಾಥ
Published 4 ಮೇ 2019, 19:35 IST
Last Updated 4 ಮೇ 2019, 19:35 IST

ಬೆಂಗಳೂರು: ಕೆಲಸಕ್ಕೆ ಹೋಗುವಂತೆ ಬುದ್ಧಿ ಹೇಳಿದ ಅಜ್ಜಿಯನ್ನೇ ಉಸಿರುಗಟ್ಟಿಸಿ ಕೊಂದ ಮೊಮ್ಮಗ, ಅದು ‘ಸಹಜ ಸಾವು’ ಎಂದು ಬಿಂಬಿಸಿ ಅಂತ್ಯಕ್ರಿಯೆಯನ್ನೂ ಮುಗಿಸಿದ್ದ. ಆದರೆ, ಆತ ಕತ್ತು ಹಿಸುಕಿದ್ದನ್ನು ಕಂಡಿದ್ದ ಪ್ರತ್ಯಕ್ಷದರ್ಶಿಗಳು ಐದು ದಿನಗಳ ಬಳಿಕ ಸಾವಿನ ರಹಸ್ಯವನ್ನು ಬಾಯ್ಬಿಟ್ಟು ಹಂತಕ ಜೈಲು ಸೇರುವಂತೆ ಮಾಡಿದ್ದಾರೆ...

ಪಾದರಾಯನಪುರದ ಸರ್ಫುನ್ನೀಸಾ (75) ಕೊಲೆಯಾದವರು. ಅವರ ಮೊಮ್ಮಗ ವಸೀಂ ಪಾಷಾನನ್ನು (21) ಜಗಜೀವನ್‌ರಾಮನಗರ ‍ಪೊಲೀಸರು ಬಂಧಿಸಿದ್ದಾರೆ. ಏ.25ರ ನಸುಕಿನಲ್ಲಿ ಅಜ್ಜಿ ಗಾಢ ನಿದ್ರೆಯಲ್ಲಿದ್ದಾಗಲೇ ಆರೋಪಿ ಕುತ್ತಿಗೆ ಹಿಸುಕಿ ಸಾಯಿಸಿದ್ದ. ‘ವಯಸ್ಸಾಗಿದ್ದರಿಂದ ಅಸುನೀಗಿದ್ದಾರೆ’ ಎಂದುಕೊಂಡೇ ಕುಟುಂಬ ಸದಸ್ಯರು ಅದೇ ದಿನ ಸಂಜೆ 5.30ಕ್ಕೆ ಫಾರೂಕಿಯಾ ನಗರದ ಸ್ಮಶಾನದಲ್ಲಿ ಶವ ಹೂತಿದ್ದರು.

‌ಸೋದರರೇ ನೋಡಿದ್ದರು!

ADVERTISEMENT

ವಸೀಂ ‍‍ಬೆಳಿಗ್ಗೆ 5 ಗಂಟೆ ಸುಮಾರಿಗೆ ಅಜ್ಜಿಯ ಮೈಮೇಲೆ ಕುಳಿತು ಕುತ್ತಿಗೆ ಹಿಸುಕುತ್ತಿದ್ದುದನ್ನು ಆತನ ಸೋದರರಾದ ನಯಾಜ್ ಪಾಷಾ ಹಾಗೂ ಫಯಾಜ್ ಪಾಷಾ ಕಣ್ಣಾರೆ ಕಂಡಿದ್ದರು. ಆದರೆ, ‘ಮನೆಯಲ್ಲಿ ಯಾರಿಗಾದರೂ ವಿಷಯ ತಿಳಿಸಿದರೆ, ಎಲ್ಲರನ್ನೂ ಕೊಂದು ಇಡೀ ಮನೆಯನ್ನೇ ಸ್ಮಶಾನ ಮಾಡುತ್ತೇನೆ’ ಎಂದು ವಸೀ ಬೆದರಿಸಿದ್ದರಿಂದ ಏನೂ ಗೊತ್ತಿಲ್ಲದವರಂತೆ ಅವರೂ ನಟಿಸಿದ್ದರು.

ಆದರೆ, ಅಜ್ಜಿ ಸಾವಿನಿಂದ ಪೋಷಕರು ಪಡುತ್ತಿದ್ದ ಸಂಕಟ ನೋಡಲಾಗದೆ ನಡೆದ ಘಟನೆಯನ್ನು ಆ ಸೋದರರು ಏ.29ರಂದು ತಂದೆ ಚಾಂದ್‌ ಪಾಷಾ ಬಳಿ ಬಾಯ್ಬಿಟ್ಟಿದ್ದರು. ಈ ವಿಷಯ ಕೇಳಿ ಇಡೀ ಕುಟುಂಬವೇ ಬೆಚ್ಚಿಬಿದ್ದಿತ್ತು. ತಕ್ಷಣ ಚಾಂದ್‌ ಪಾಷಾ ಠಾಣೆಗೆ ತೆರಳಿ ಮಗನ ವಿರುದ್ಧದೂರು ಕೊಟ್ಟಿದ್ದರು. ಪೊಲೀಸರು ಆತನನ್ನು ಕರೆಸಿ ವಿಚಾರಣೆ ‘ತೀವ್ರ’ಗೊಳಿಸಿದಾಗ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

‘ನಾನಿ ಅಮ್ಮಿ ನಹಿ ಉಟ್ರಿ’

‘ಗುಜರಿ ಅಂಗಡಿ ಇಟ್ಟುಕೊಂಡಿರುವ ನಾನು, ಫಾರೂಕಿಯಾ ನಗರದಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದೆ. 10 ದಿನಗಳಿಂದ ನಿರ್ಮಾಣದ ಕೆಲಸ ಶುರುವಾಗಿತ್ತು. ಪ್ರತಿದಿನ ಪಾದರಾಯನಪುರದಿಂದ ಓಡಾಡುವುದು ಕಷ್ಟವಾಗುತ್ತದೆಂದು ಅಲ್ಲೇ ಸಣ್ಣ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದೆ. ಅಲ್ಲಿ ನಾನು, ಪತ್ನಿ ಹಾಗೂ ಕಿರಿಯ ಮಗ ರಿಯಾಜ್ ಪಾಷಾ ಇರುತ್ತಿದ್ದೆವು. ಪಾದರಾಯನಪುರದ ಮನೆಯಲ್ಲಿ ಅತ್ತೆ ಸರ್ಫುನ್ನೀಸಾ (ಕೊಲೆಯಾದವರು) ಹಾಗೂ ಉಳಿದ ಮಕ್ಕಳಾದ ವಸೀಂ, ನಯಾಜ್ ಹಾಗೂ ಫಯಾಜ್ ಇರುತ್ತಿದ್ದರು’ ಎಂದು ಚಾಂದ್ ಪಾಷಾ ದೂರಿನಲ್ಲಿ ವಿವರಿಸಿದ್ದಾರೆ.

‘ಏ.25ರ ಬೆಳಿಗ್ಗೆ 7.30ರ ಸುಮಾರಿಗೆ ಮಗ ನಯಾಜ್ ನನ್ನ ಬಳಿ ಬಂದು, ‘ನಾನಿ ಅಮ್ಮಿ ನಹಿ ಉಟ್ರಿ. ಆವೋ ದೇಕೋ’ (ಅಜ್ಜಿ ಎದ್ದೇಳುತ್ತಿಲ್ಲ. ನೋಡುಬಾ) ಎಂದು ಕರೆದ. ಹೋಗಿ ನೋಡಿದರೆ ಅವರ ಮೈ ತಣ್ಣಗಾಗಿತ್ತು. ಆ ಸಮಯದಲ್ಲಿ ದೊಡ್ಡ ಮಗ ವಸೀಂ (ಆರೋಪಿ) ಕೂಡ ಅಲ್ಲೇ ಅಳುತ್ತ ನಿಂತಿದ್ದ. ಸಂಜೆ ಅಂತ್ಯಕ್ರಿಯೆ ಮುಗಿಸಿದ್ದೆವು.’

‘ಏ.29ರ ರಾತ್ರಿ 11 ಗಂಟೆಗೆ ನಯಾಜ್ ಹಾಗೂ ಫಯಾಜ್ ಹೊಸ ಮನೆ ಹತ್ತಿರವೇ ಇದ್ದರು. ಅಜ್ಜಿ ಮನೆಗೆ ಹೋಗಿ ಮಲಗುವಂತೆ ಹೇಳಿದಕ್ಕೆ ‘ಅಲ್ಲಿಗೆ ಹೋಗೋಕೆ ನಮಗೆ ಭಯವಾಗುತ್ತದೆ. ನಾವು ಇಲ್ಲೇ ಮಲಗುತ್ತೇವೆ’ ಎಂದರು. ಏನಾಯಿತು ಎಂದು ಕೇಳಿದಾಗ, ‘ಅಜ್ಜಿಯನ್ನು ವಸೀಂನೇ ಕುತ್ತಿಗೆ ಹಿಸುಕಿ ಸಾಯಿಸಿದ ಅಪ್ಪಾ....’ ಎನ್ನುತ್ತ ಅಳಲಾರಂಭಿಸಿದರು. ಆ ಕ್ಷಣ ನನಗೆ ದಿಕ್ಕೇ ತೋಚದಂತಾಯಿತು. ವಸೀಂನನ್ನು ಕರೆದು ವಿಚಾರಿಸಿದರೆ ಆತ ಬೆದರಿಸಲು ಶುರು ಮಾಡಿದ. ಆ ನಂತರ ಠಾಣೆ ಮೆಟ್ಟಿಲೇರಿದೆ. ಆರೋಪಿಯನ್ನು ಬಂಧಿಸಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಚಾಂದ್ ಪಾಷಾ ದೂರಿನಲ್ಲಿ ಮನವಿ ಮಾಡಿದ್ದಾರೆ.

‘ಕೆನ್ನೆಗೆ ಹೊಡೆದಿದ್ದಕ್ಕೆ ಕೊಂದೆ’

‘ಕೆಲಸಕ್ಕೆ ಹೋಗದೆ ಪೋಲಿ ತಿರುಗಿಕೊಂಡಿದ್ದೀಯಾ..’ ಎಂದು ಅಜ್ಜಿ ಪ್ರತಿದಿನ ಬಯ್ಯುತ್ತಿದ್ದಳು. ಆ ದಿನ ಕೂಡ ಅದೇ ವಿಚಾರವಾಗಿ ಜಗಳ ತೆಗೆದು ಬೆಳಗಿನ ಜಾವ 2.30ರವರೆಗೂ ಕೂಗಾಡುತ್ತಿದ್ದಳು. ಈ ವೇಳೆ ಎದುರು ಮಾತನಾಡಿದ್ದಕ್ಕೆ ನನ್ನ ಕೆನ್ನೆಗೆ ಹೊಡೆದಳು. ಅದೇ ಕೋಪದಲ್ಲಿ ಕೋಣೆಗೆ ಹೋಗಿ ಮಲಗಿದ್ದೆ. ಬೆಳಿಗ್ಗೆ 5 ಗಂಟೆಗೆ ಆಕೆಯೂ ನಿದ್ರೆಯಲ್ಲಿದ್ದಳು. ಆಗ ಕುತ್ತಿಗೆ ಹಿಸುಕಿ ಸಾಯಿಸಿದೆ’ ಎಂದು ವಸೀಂ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದರು.

ಸೋದರರು ಸುಮ್ಮನಿದ್ದಿದ್ದೇಕೆ?

‘ಆ ದಿನ ನಾವಿಬ್ಬರೂ ಅಜ್ಜಿಯ ಅಕ್ಕ–ಪಕ್ಕದಲ್ಲೇ ಮಲಗಿದ್ದೆವು. ಬೆಳಗಿನ ಜಾವ ಅಜ್ಜಿ ಒದ್ದಾಡುತ್ತಿದ್ದರು. ಅವರ ಕೈಗಳು ನಮ್ಮ ಮೇಲೆ ಬಿದ್ದಿದ್ದರಿಂದ ಎಚ್ಚರವಾಯಿತು. ನೋಡಿದರೆ ವಸೀಂ ಕುತ್ತಿಗೆ ಹಿಸುಕುತ್ತಿದ್ದ. ಅವನನ್ನು ಕೆಳಗೆ ತಳ್ಳುವಷ್ಟರಲ್ಲಿ ಅವರು ಸತ್ತೇ ಹೋಗಿದ್ದರು. ಈ ವಿಷಯ ಬಾಯ್ಬಿಟ್ಟರೆ ಇಡೀ ಕುಟುಂಬವನ್ನೇ ಕೊಲ್ಲುವುದಾಗಿ ಬೆದರಿಸಿದ್ದ ವಸೀಂ, ನಾವು ಎಲ್ಲಿ ತಂದೆ ಬಳಿ ಹೇಳಿಬಿಡುತ್ತೀವೋ ಎಂದು ನಮ್ಮ ಜತೆಗೇ ಓಡಾಡುತ್ತಿದ್ದ. ಏ.29ರ ರಾತ್ರಿ ಆತ ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾಗ, ತಂದೆ ಬಳಿ ಹೇಳಿಬಿಟ್ಟೆವು’ ಎಂದು ನಯಾಜ್ ಹಾಗೂ ಫಯಾಜ್ ಹೇಳಿಕೆ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.