ADVERTISEMENT

ಅಡಿಕೆ ಸಂಸ್ಕರಣೆ ಕೇಂದ್ರ ತೆರೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 20:05 IST
Last Updated 16 ಜೂನ್ 2013, 20:05 IST

ಬೆಂಗಳೂರು: `ಗುಟ್ಕಾ ನಿಷೇಧಿಸಿದ ಮಾತ್ರಕ್ಕೆ ಸರ್ಕಾರದ ಜವಾಬ್ದಾರಿ ಮುಗಿಯಲಿಲ್ಲ. ಅಡಿಕೆ ಬಳಕೆಗೆ ಪರ್ಯಾಯ ಮಾರ್ಗಗಳನ್ನು ಶೋಧಿಸುವ ಜೊತೆ ಅದರ ಸಂಸ್ಕರಣೆಗೆ ಕೇಂದ್ರಗಳನ್ನೂ ತೆರೆಯಬೇಕು' ಎಂದು ಸಂಸದ ಅನಂತಕುಮಾರ್ ಆಗ್ರಹಿಸಿದರು.

ಅಖಿಲ ಹವ್ಯಕ ಮಹಾಸಭಾ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ವಿಪ್ರ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. `ತಂಬಾಕಿನ ಜೊತೆಗೆ ಅಡಿಕೆಯನ್ನೂ ಆರೋಗ್ಯಕ್ಕೆ ಹಾನಿಕರವಾದ ವಸ್ತು ಎಂಬ ವಿಂಗಡಣೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಆ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕು ಮತ್ತು ಬೆಲೆ ಕುಸಿತ ಕಂಡಿರುವ ಅಡಿಕೆಗೆ ಬೆಂಬಲ ಬೆಲೆ ಘೋಷಿಸಬೇಕು' ಎಂದು ಒತ್ತಾಯಿಸಿದರು.

`ಜುಲೈನಲ್ಲಿ ನಡೆಯಲಿರುವ ಸಂಸತ್ ಅಧಿವೇಶನದಲ್ಲಿ ಅಡಿಕೆ ಪರವಾಗಿ ಧ್ವನಿ ಎತ್ತಲಿದ್ದೇನೆ. ನಮ್ಮ ಪಕ್ಷದ ಸಂಸದರೂ ಅಡಿಕೆ ಬೆಳೆಗಾರರಿಗೆ ಸೂಕ್ತ ರಕ್ಷಣೆ ಒದಗಿಸಲು ಹೋರಾಡಲಿದ್ದಾರೆ' ಎಂದು ಘೋಷಿಸಿದರು. `ಪಶ್ಚಿಮ ಘಟ್ಟವಿಲ್ಲದೆ ಹವ್ಯಕರಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮ ಘಟ್ಟಕ್ಕೆ ಅಪಾಯ ತರುವ ಪ್ರಯತ್ನಗಳು ನಡೆದಿದ್ದು, ಅಂತಹ ಯತ್ನ ವಿಫಲಗೊಳಿಸಲು ಹೋರಾಡುವುದು ಅನಿವಾರ್ಯವಾಗಿದೆ' ಎಂದು ಹೇಳಿದರು. `ಹವ್ಯಕ ಭವನ ನಿರ್ಮಾಣಕ್ಕೆ ರಾಜ್ಯಸಭಾ ಸದಸ್ಯರ ನಿಧಿಯಿಂದ  25 ಲಕ್ಷ ದೇಣಿಗೆ ಕೊಡಿಸಲಾಗುವುದು' ಎಂದು ಭರವಸೆ ನೀಡಿದರು.

ಸನ್ಮಾನ ಸ್ವೀಕರಿಸಿದ ಸಚಿವ ದಿನೇಶ್ ಗುಂಡೂರಾವ್, `ಜಾತಿ ವಿನಾಶದ ವಿಷಯವಾಗಿ ಎಷ್ಟೇ ಮಾತನಾಡಿದರೂ ಭಾರತ ಜಾತಿಗಳು ಇರುವ ರಾಷ್ಟ್ರ. ಸಾಮಾಜಿಕ ನ್ಯಾಯ, ಜನಪರ ಕಳಕಳಿಯೇ ಇಲ್ಲಿ ಮುಖ್ಯ. ಬೇರೆಯವರಿಗೆ ಕೇಡು ಬಯಸದೆ ನಮ್ಮ ಏಳ್ಗೆಗೆ ಶ್ರಮಿಸುವುದರಲ್ಲಿ ತಪ್ಪೇನು ಇಲ್ಲ' ಎಂದು ತಿಳಿಸಿದರು. `ಒಂದೇ ಸಮುದಾಯದ ಮತಗಳಿಂದ ಯಾರೂ ಶಾಸಕರಾಗಲು ಸಾಧ್ಯವಿಲ್ಲ. ಕ್ಷೇತ್ರದ ಒಟ್ಟಾರೆ ಪ್ರಗತಿಗೆ ನಾವು ದುಡಿಯಬೇಕಾಗುತ್ತದೆ. ಬ್ರಾಹ್ಮಣ ಸಮಾಜದ ಮೇಲೂ ಕಳಕಳಿ ಇದೆ' ಎಂದು ವಿವರಿಸಿದರು.

ವೈ.ಎಸ್.ವಿ. ದತ್ತ, `ಜಾತಿ ರಾಜಕಾರಣ, ಹಣದ ಲೆಕ್ಕಾಚಾರದ ನಡುವೆ ಕಡೂರು ಕ್ಷೇತ್ರದಲ್ಲಿ ಗೆದ್ದುಬರಲು ನಾನು ಕಟ್ಟಾ ಜಾತ್ಯತೀತ ವ್ಯಕ್ತಿಯಾಗಿರುವುದೇ ಕಾರಣ' ಎಂದು ಹೇಳಿದರು. `ಸಮಾಜದ ಅಭಿವೃದ್ಧಿಗೆ ಎಲ್ಲ ಶಾಸಕರ ಜೊತೆ ಒಟ್ಟಾಗಿ ಕೆಲಸ ಮಾಡಲು ಬದ್ಧ' ಎಂದು ಘೋಷಿಸಿದರು.
ವಿಶ್ವೇಶರ ಹೆಗಡೆ ಕಾಗೇರಿ, `ಪಶ್ಚಿಮ ಘಟ್ಟ ಮೂಲದ ಹವ್ಯಕರು ಕೃಷಿಯನ್ನೇ ಮನೆತನದ ವೃತ್ತಿ ಮಾಡಿಕೊಂಡವರು. ಹವ್ಯಕ ಪರಂಪರೆ ಉಳಿಯಬೇಕೆಂದರೆ ಪಶ್ಚಿಮ ಘಟ್ಟ ಉಳಿಯಲೇಬೇಕು' ಎಂದು ಪ್ರತಿಪಾದಿಸಿದರು. `ಮಲ್ಲೇಶ್ವರದಲ್ಲಿ ಭವ್ಯವಾದ ಹವ್ಯಕ ಭವನ ನಿರ್ಮಾಣ ಕಾರ್ಯ ಜುಲೈನಿಂದ ಶುರುವಾಗಲಿದೆ' ಎಂದು ತಿಳಿಸಿದರು.

ಶಿವರಾಮ ಹೆಬ್ಬಾರ್ ಅರಬೈಲು, `ಬ್ರಾಹ್ಮಣರಲ್ಲೂ ಕಡು ಬಡವರಾದ ಜನ ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ಅವರ ಕುರಿತು ಉಳ್ಳವರು ಕಾಳಜಿ ತೋರಬೇಕಿದೆ. ಬಡ ವಿದ್ಯಾರ್ಥಿಗಳು ವೃತ್ತಿ ಶಿಕ್ಷಣ ಪಡೆಯಲು ದತ್ತು ಯೋಜನೆಗಳನ್ನು ಆರಂಭಿಸಬೇಕಿದೆ' ಎಂದು ಹೇಳಿದರು. ಶಾಸಕರಾದ ಎಸ್. ಸುರೇಶಕುಮಾರ್, ಬಿ.ಎನ್. ವಿಜಯಕುಮಾರ್ ಮತ್ತು ಎಲ್.ಎ. ರವಿಸುಬ್ರಹ್ಮಣ್ಯ ಅವರನ್ನೂ ಸನ್ಮಾನಿಸಲಾಯಿತು. ಮಹಾಸಭಾದ ಅಧ್ಯಕ್ಷ ಎಸ್.ಜಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಎನ್.ಆರ್. ಹೆಗಡೆ ನೂತನ ಶಾಸಕರನ್ನು ಅಭಿನಂದಿಸಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.