ADVERTISEMENT

ಅಡ್ವಾಣಿಯೂ ದುರ್ಬಲರಲ್ಲವೇ?

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2011, 19:30 IST
Last Updated 31 ಅಕ್ಟೋಬರ್ 2011, 19:30 IST
ಅಡ್ವಾಣಿಯೂ ದುರ್ಬಲರಲ್ಲವೇ?
ಅಡ್ವಾಣಿಯೂ ದುರ್ಬಲರಲ್ಲವೇ?   

ಬೆಂಗಳೂರು: `ಡಾ. ಮನಮೋಹನ್ ಸಿಂಗ್ ಅವರನ್ನು ದುರ್ಬಲ ಪ್ರಧಾನಿ ಎಂದು ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರು ಟೀಕಿಸುತ್ತಾರೆ. ಆದರೆ ಪರಪ್ಪನ ಅಗ್ರಹಾರದಲ್ಲಿರುವ ವ್ಯಕ್ತಿಗಳ ಕುರಿತು ಎದುರಾಗಬಹುದಾದ ಪ್ರಶ್ನೆಗಳಿಗೆ ಹೆದರಿ ಪತ್ರಿಕಾಗೋಷ್ಠಿಯನ್ನೇ ರದ್ದುಮಾಡಿರುವ ಅಡ್ವಾಣಿ ದುರ್ಬಲರಲ್ಲವೇ?~

- ಈ ಪ್ರಶ್ನೆಯನ್ನು ಕೇಳಿದ್ದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್. ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 26ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಜನ ಚೇತನ ಯಾತ್ರೆ ಕೈಗೊಂಡಿರುವ ಅಡ್ವಾಣಿ ಪತ್ರಕರ್ತರ ಪ್ರಶ್ನೆಗಳಿಗೆ ಹೆದರಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನೇ ರದ್ದು ಮಾಡಿದ್ದಾರೆ. ಇವರನ್ನು ನಾವೇನು ಸಮರ್ಥ ವ್ಯಕ್ತಿ ಎಂದು ಕರೆಯಬೇಕೇ?~ ಎಂದು ಪ್ರಶ್ನಿಸಿದರು.

`ಕ್ರೈಸ್ತರಿಗೆ ಮತ್ತು ಮುಸ್ಲಿಮರಿಗೆ ಈ ದೇಶದಲ್ಲಿ ಜಾಗವಿಲ್ಲ ಎನ್ನುವ ಅಡ್ವಾಣಿ ಇಲ್ಲಿ ಬಂದು ಭ್ರಷ್ಟಾಚಾರದ ವಿರುದ್ಧ ಭಾಷಣ ಮಾಡುವ ಅಗತ್ಯ ಏನಿದೆ~ ಎಂದೂ ಪ್ರಶ್ನಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `2-ಜಿ ಹಗರಣದ ತನಿಖೆಯನ್ನು ಬಿಜೆಪಿಯೂ ಸೇರಿದಂತೆ ಇತರ ಪ್ರತಿಪಕ್ಷಗಳ ಆಗ್ರಹದ ಮೇರೆಗೆ ಸಿಬಿಐಗೆ ವಹಿಸಲಾಯಿತು. ಆರೋಪಿಗಳನ್ನು ಜೈಲಿಗೆ ಕಳುಹಿಸುವ ಕೆಲಸವೂ ಆಗಿದೆ. ಆದರೆ, ರಾಜ್ಯದ ಭ್ರಷ್ಟಾಚಾರ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲು ಅಡ್ವಾಣಿ ಅವರೂ ಒತ್ತಾಯ ಮಾಡುತ್ತಿಲ್ಲ~ ಎಂದು ಟೀಕಿಸಿದರು.

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವರಾದ ಆರ್. ಅಶೋಕ ಮತ್ತು ಮುರುಗೇಶ ನಿರಾಣಿ ಅವರ ರಾಜೀನಾಮೆ ಪಡೆಯಬೇಕಾಗಿದ್ದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಜವಾಬ್ದಾರಿ. ಆದರೆ ಈ ಸಂದರ್ಭದಲ್ಲಿ ಉಳಿದೆಲ್ಲ ಕ್ರಮಗಳಿಗಿಂತ ಮತ್ತೊಮ್ಮೆ ಚುನಾವಣೆಗೆ ಹೋಗಿ ಹೊಸ ಜನಾದೇಶ ಪಡೆದುಕೊಳ್ಳುವುದೇ ಉತ್ತಮ ಎಂದು ಅಭಿಪ್ರಾಯಪಟ್ಟರು.
 
ಇಂದಿರಾ ಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಕಾಂಗ್ರೆಸ್ ಮುಖಂಡರಾದ ಪ್ರೊ.ಬಿ.ಕೆ. ಚಂದ್ರಶೇಖರ್, ಸಿ.ಕೆ. ಜಾಫರ್ ಷರೀಫ್, ಎಚ್. ಹನುಮಂತಪ್ಪ, ಶಾಸಕ ನೆ.ಲ. ನರೇಂದ್ರ ಬಾಬು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.