ADVERTISEMENT

ಅಣು ಸ್ಥಾವರದಿಂದ ಅಪಾಯ ಇಲ್ಲ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:50 IST
Last Updated 20 ಅಕ್ಟೋಬರ್ 2011, 19:50 IST

ಬೆಂಗಳೂರು: ಅಣು ವಿದ್ಯುತ್ ಸ್ಥಾವರಗಳಿಂದ ನೈಸರ್ಗಿಕ ಅರಣ್ಯಕ್ಕೆ ಯಾವುದೇ ಅಪಾಯ ಇಲ್ಲ. ದೇಶದ ಕೆಲವು ಪ್ರದೇಶಗಳಲ್ಲಿ ಅಣು ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಜನರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅಭಿಪ್ರಾಯಪಟ್ಟರು.

ಇಲ್ಲಿನ `ಅರಣ್ಯ ಭವನ~ದಲ್ಲಿ ಗುರುವಾರ ಆಯೋಜಿಸಲಾಗಿದ್ದ `ಗ್ರೀನ್ ಇಂಡಿಯಾ ಮಿಷನ್~ ಪ್ರಾದೇಶಿಕ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, `ಅಣು ವಿದ್ಯುತ್‌ನಂತಹ ಸ್ವಚ್ಛ ಇಂಧನ ಮೂಲಗಳಿಗೆ ಇಂದು ಅನಗತ್ಯ ವಿರೋಧ ಕಂಡುಬರುತ್ತಿದೆ~ ಎಂದು ವಿಷಾದಿಸಿದರು.

ಗುಜರಾತ್ ಮತ್ತು ರಾಜಸ್ತಾನದಲ್ಲಿ ಸೌರವಿದ್ಯುತ್ ಉತ್ಪಾದನೆಗೆ ನೀಡುತ್ತಿರುವ ಪ್ರೋತ್ಸಾಹ ದೇಶದ ಇತರ ರಾಜ್ಯಗಳು ಅನುಸರಿಸಲು ಯೋಗ್ಯವಾಗಿದೆ. ಜರ್ಮನಿಯಲ್ಲಿ ಹಲವು ಮನೆಗಳಲ್ಲಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಲಾಗಿದೆ. ಸೂರ್ಯನ ಚಲನೆ ಆಧರಿಸಿ ತಮ್ಮ ಕೋನ ಬದಲಾಯಿಸಿಕೊಳ್ಳುವ ಸೌರ ಫಲಕಗಳನ್ನೂ ಅಲ್ಲಿ ಅಭಿವೃದ್ಧಿಪಡಿಸಲಾಗಿದೆ~ ಎಂದು ತಿಳಿಸಿದರು.

`ದೇಶದ ಇಂಧನದಲ್ಲಿ ಶೇಕಡ 70ರಷ್ಟು ಭಾಗ ಜೈವಿಕ ದ್ರವ್ಯರಾಶಿಯಿಂದಲೇ ಪೂರೈಕೆಯಾಗುತ್ತಿದೆ. ಆದರೆ ಇತರ ಶಕ್ತಿಮೂಲಗಳ ಕುರಿತೂ ನಾವು ಸಾಕಷ್ಟು ಗಮನ ನೀಡಬೇಕು~ ಎಂದರು.

ನವೆಂಬರ್ ಅಂತ್ಯದ ವೇಳೆಗೆ `ಗ್ರೀನ್ ಇಂಡಿಯಾ ಮಿಷನ್~ನ ಮುಂದಿನ ಸಾಲಿನ ಯೋಜನೆಗಳಿಗೆ ಅಂತಿಮ ರೂಪ ದೊರೆಯಲಿದೆ ಎಂದು ಕೇಂದ್ರ ಅರಣ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ಡಾ.ಪಿ.ಜೆ. ದಿಲೀಪ್‌ಕುಮಾರ್ ತಿಳಿಸಿದರು. ಐಎಫ್‌ಎಸ್ ಅಧಿಕಾರಿಗಳಾದ ಜಿ.ವಿ. ಸುಗೂರ್, ಡಾ.ವಿ.ಕೆ.ಬಹುಗುಣ ಮತ್ತಿತರರು ಪಾಲ್ಗೊಂಡಿದ್ದರು.

`ಗ್ರೀನ್ ಇಂಡಿಯಾ ಮಿಷನ್~: ಹವಾಮಾನ ಬದಲಾವಣೆಯಿಂದ ಆಗಬಹುದಾದ ದುಷ್ಪರಿಣಾಮಗಳನ್ನು ತಗ್ಗಿಸುವ ಉದ್ದೇಶದಿಂದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು 2008ರಲ್ಲಿ ಅನಾವರಣಗೊಳಿಸಿದ ರಾಷ್ಟ್ರೀಯ ಕ್ರಿಯಾ ಯೋಜನೆಯ ಎಂಟು ಅಂಶಗಳಲ್ಲಿ `ಗ್ರೀನ್ ಇಂಡಿಯಾ ಮಿಷನ್~ ಕೂಡ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.