ADVERTISEMENT

ಅತಿವೃಷ್ಟಿ: ಬೆಳೆ ಹಾನಿ ಪರಿಹಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 20:22 IST
Last Updated 19 ಸೆಪ್ಟೆಂಬರ್ 2013, 20:22 IST

ನೆಲಮಂಗಲ:  ‘ಕೆಲ ದಿನಗಳಿಂದ  ಸುರಿದ ಮಳೆಯಿಂದ ಮತ್ತು ಕೆರೆ ಕೊಡಿ ಒಡೆದು ಕೆರೆ ಹಿಂಭಾಗದ ಜಮೀನಿನ ಅನೇಕ ಸಣ್ಣ ರೈತರ ಬೆಳೆಗಳಾದ ಜೋಳ, ಪುದೀನ, ವೀಳ್ಯದೆಲೆ, ಕೊತ್ತಂಬರಿ, ರಾಗಿ ಹಾಗೂ ಮತ್ತಿತರ ತರಕಾರಿ ಬೆಳೆಗಳು ಹಾನಿಯಾಗಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಸಣ್ಣ ಹಿಡುವಳಿದಾರ ವೆಂಕಟೇಶ್‌  ಒತ್ತಾಯಿಸಿದ್ದಾರೆ.

‘ಅಲ್ಪ ಸ್ವಲ್ಪ ಇರುವ ಜಮೀನುಗಳಲ್ಲಿ ತರಕಾರಿ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದ ಸಣ್ಣ ರೈತರು ಅತಿವೃಷ್ಟಿ ಹಾಗೂ ಕೆರೆ ಕೊಡಿ ಒಡೆದು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಪರಿಹಾರದ ವರದಿ ತರಿಸಿಕೊಂಡು ಸೂಕ್ತ ಪರಿಹಾರ ನೀಡಬೇಕು’ ಎಂದು ಅವರು ಆಗ್ರಹಿಸಿದರು.

ಶನಿವಾರ ರಾತ್ರಿ ವಿವಿಧ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಧವಸ ಧಾನ್ಯ ಹಾಳಾಗಿರುವ ಭೈರವೇಶ್ವರ ಬಡಾವಣೆಯ 32 ಕುಟುಂಬಗಳನ್ನು ಗುರುತಿಸಲಾಗಿದೆ.  ಪುರಸಭೆ ವ್ಯಾಪ್ತಿಯ ಮನೆಗಳನ್ನು ಹೊರತುಪಡಿಸಿ ಗೃಹೋಪಯೋಗಿ ವಸ್ತುಗಳ ಹಾನಿಯನ್ನು ರೂ8.61ಲಕ್ಷ ಎಂದು ಅಂದಾಜಿಸಲಾಗಿದೆ. ತಲಾ ರೂ2000 ಪರಿಹಾರದ ಚೆಕ್‌ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್‌ ರಾಜೇಂದ್ರ ತಿಳಿಸಿದ್ದಾರೆ.

ತಾಲ್ಲೂಕಿನ ಕಸಬಾ, ತ್ಯಾಮಗೊಂಡ್ಲು ಮತ್ತು ಸೋಂಪುರ ಹೋಬಳಿಗಳಲ್ಲಿ ಮಳೆಯಿಂದ ತ್ಯಾಮಗೊಂಡ್ಲು ಹೋಬಳಿಯಲ್ಲಿ ಐದು ಮನೆಗಳು ಪೂರ್ಣ ಪ್ರಮಾಣದಲ್ಲಿ ಬಿದ್ದಿದ್ದು, 6 ಮನೆ ಭಾಗಶಃ ಬಿದ್ದಿವೆ. ಸೋಂಪುರ ಹೋಬಳಿಯಲ್ಲಿ 14 ಮನೆಗಳು ಭಾಗಶಃ ಬಿದ್ದಿವೆ. ಒಟ್ಟಾರೆ ಭಾಗಶಃ ಬಿದ್ದಿರುವ ನಷ್ಟದ ಅಂದಾಜು ರೂ2.65 ಲಕ್ಷ, ಪೂರ್ಣ ಪ್ರಮಾಣದಲ್ಲಿ ಬಿದ್ದ ವೆಚ್ಚ ರೂ 1.50 ಲಕ್ಷ ಎಂದು ಅಂದಾಜಿಸಲಾಗಿದೆ.

ನೆಲಮಂಗಲ ಕೆರೆಯು ಮೂಲ ದಾಖಲೆಗಳಲ್ಲಿ 62.26 ಎಕರೆ ಇದ್ದು, ಒತ್ತುವರಿಯಿಂದ 45 ಎಕರೆ ಉಳಿದಿದೆ.  ಕೆರೆ ಮತ್ತು ರಾಜಕಾಲುವೆಯ ಸರ್ವೆ ಮಾಡಿ ವರದಿ ನೀಡಲು ಸರ್ವೆ ಇಲಾಖೆಗೆ ಮತ್ತು ಸಣ್ಣ ನೀರಾವರಿ ಇಲಾಖೆಯವರಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಂಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.