ADVERTISEMENT

ಅಧಿಕಾರಿಗಳು, ದಲ್ಲಾಳಿಗಳು ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 20:00 IST
Last Updated 25 ಫೆಬ್ರುವರಿ 2012, 20:00 IST

ಬೆಂಗಳೂರು: ಖಾಸಗಿ ವ್ಯಕ್ತಿಗಳನ್ನು ಕಚೇರಿಯೊಳಗೆ ಇರಿಸಿಕೊಂಡು ಭ್ರಷ್ಟಾಚಾರ ನಡೆಸುತ್ತಿದ್ದ ಆರೋಪದ ಮೇಲೆ ಶುಕ್ರವಾರ ಬಂಧಿತರಾಗಿದ್ದ ಕೆ.ಆರ್.ಪುರ ಉಪ ನೋಂದಣಿ ಅಧಿಕಾರಿ ಶಾಂತಮೂರ್ತಿ, ಕೆಂಗೇರಿ ಉಪ ನೋಂದಣಿ ಅಧಿಕಾರಿ ಎನ್.ಎ.ರಮೇಶ್,  14 ಮಧ್ಯವರ್ತಿಗಳನ್ನು ಒಂದು ವಾರ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶುಕ್ರವಾರ ಏಕಕಾಲಕ್ಕೆ ನಗರದ ಐದು ಉಪ ನೋಂದಣಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಬೆಂಗಳೂರು ಲೋಕಾಯುಕ್ತ ಪೊಲೀಸರು, ದಿಢೀರ್ ಶೋಧ ಕಾರ್ಯ ನಡೆಸಿದ್ದರು. ಕೆ.ಆರ್.ಪುರ ಮತ್ತು ಕೆಂಗೇರಿ ಕಚೇರಿಗಳಲ್ಲಿ ಅಕ್ರಮ ನಡೆಯುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ 16 ಜನರನ್ನು ಬಂಧಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪ್ರಾಥಮಿಕ ವಿಚಾರಣೆ ಪೂರ್ಣಗೊಳಿಸಿದ ಲೋಕಾಯುಕ್ತ ಪೊಲೀಸರು, ಶನಿವಾರ ರಾತ್ರಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರ ಎದುರು ಹಾಜರು ಪಡಿಸಿದರು. ಆರೋಪಿಗಳನ್ನು ಒಂದು ವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ ನ್ಯಾಯಾಧೀಶರು, ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.