ADVERTISEMENT

ಅಧಿಕಾರಿಗಳ ಕಿರುಕುಳ: ಸುಳ್ಳು ಆರೋಪ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 20:00 IST
Last Updated 2 ಫೆಬ್ರುವರಿ 2012, 20:00 IST

ಬೆಂಗಳೂರು: `ಮೇಲಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆತ್ಮಹತ್ಯೆಗೆ ಯತ್ನಿಸಿದ ಬಸ್ ನಿರ್ವಾಹಕ ತುಳಸಿದಾಸ್ ಅವರು ಸುಳ್ಳು ಆರೋಪ ಮಾಡಿದ್ದಾರೆ~ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್.ಶ್ರೀನಿವಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಳಸಿದಾಸ್ ಅವರಿಗೆ ಮೇಲಧಿಕಾರಿಗಳು ಯಾವುದೇ ಕಿರುಕುಳ ನೀಡಿಲ್ಲ. ಕರ್ತವ್ಯನಿರತ ಚಾಲಕ ಮುನಿರಾಜು ಎಂಬುವರ ಮೇಲೆ ಸಾರ್ವಜನಿಕರು ಜ.22ರಂದು ಹಲ್ಲೆ ನಡೆಸಿದ್ದ ಸಂಬಂಧ ತುಳಸಿದಾಸ್ ಮತ್ತು ಕೆಲವು ಸಿಬ್ಬಂದಿ ದಿಢೀರ್ ಮುಷ್ಕರ ನಡೆಸಿದರು. ಇದರಿಂದ ಬಸ್‌ಗಳ ಸೇವೆ ಸ್ಥಗಿತಗೊಂಡು ಪ್ರಯಾಣಿಕರಿಗೆ ತೀವ್ರ ತೊಂದರೆಯಾಯಿತು. ಅಲ್ಲದೇ ಇಲಾಖೆಗೆ ನಷ್ಟವಾಯಿತು. ಈ ಹಿನ್ನೆಲೆಯಲ್ಲಿ ತುಳಸಿದಾಸ್ ಸೇರಿದಂತೆ ಎಂಟು ಮಂದಿ ನೌಕರರನ್ನು ವರ್ಗಾವಣೆ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.

ಆದರೆ ವರ್ಗಾವಣೆ ಆದೇಶ ಪತ್ರವನ್ನು ಸ್ವೀಕರಿಸದ ತುಳಸಿದಾಸ್, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಲಾಗಿತ್ತು ಎಂದು ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.